ಕಾಲೇಜುಗಳು ಆರಂಭವಾಗುತ್ತಿದ್ದು, ಶಿಬಿರಗಳನ್ನು ನಡೆಸಿ ಪ್ರಚಾರ ಜತೆಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಸಮರ್ಪಕ ಅನುಷ್ಟಾನಕ್ಕೆ ಮುಂದಾಗಬೇಕು

ಕುಷ್ಟಗಿ: ಯುವನಿಧಿ ಯೋಜನೆ ಜಾರಿಗೆ ಬಂದು ಮೂರು ವರ್ಷವಾದರೂ ಸಹಿತ ಕುಷ್ಟಗಿ ತಾಲೂಕಿನಲ್ಲಿ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದ್ದು, ಸಮರ್ಪಕ ಪ್ರಚಾರಕ್ಕೆ ಮುಂದಾಗಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಫಾರುಕ್ ಡಾಲಾಯತ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜುಗಳು ಆರಂಭವಾಗುತ್ತಿದ್ದು, ಶಿಬಿರಗಳನ್ನು ನಡೆಸಿ ಪ್ರಚಾರ ಜತೆಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಸಮರ್ಪಕ ಅನುಷ್ಟಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಅಮರೇಶ ಗಾಂಜಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಮೊಟ್ಟ ಮೊದಲು ಕುಷ್ಟಗಿ ಸಿಡಿಪಿಒ ಸಿಬ್ಬಂದಿ ಮೃತಪಟ್ಟ ಗೃಹಲಕ್ಷ್ಮೀ ಫಲಾನುಭವಿಗಳ ತಾಲೂಕು ಪಟ್ಟಿ ತಯಾರು ಮಾಡಿಕೊಟ್ಟಿರುವದು ಶ್ಲಾಘನೀಯ ಎಂದರು.

ಸಿಡಿಪಿಒ ಇಲಾಖೆಯ ಸೂಪರ್ ವೈಸರ್ ಅನ್ನಪೂರ್ಣ ಪಾಟೀಲ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಂದ ಮನೆಗಳ ಸರ್ವೇ ನಡೆಸಿ 400 ಜನ ಮೃತಪಟ್ಟ ಗೃಹಲಕ್ಷ್ಮೀ ಫಲಾನುಭವಿಗಳ ಪಟ್ಟಿ ತಯಾರು ಮಾಡಿಸಲಾಗಿದ್ದು, ಗೃಹಲಕ್ಷ್ಮೀ ಫಲಾನುಭವಿಗಳು ಮೃತಪಟ್ಟಿದ್ದರೆ ಅಂತಹ ಮಾಹಿತಿ ಅಂಗನವಾಡಿಗಳಿಗೆ, ಸಿಡಿಪಿಒ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡುವ ಮೂಲಕ ಹೊಸ ಅರ್ಜಿ ಹಾಕಿಸಿ ಗೃಹಲಕ್ಷ್ಮೀ ಲಾಭವನ್ನು ಪಡೆಯಬೇಕು. ಇಲ್ಲಿಯವರೆಗೆ ಒಟ್ಟು 30 ಕಂತುಗಳು ಬಂದಿದ್ದು 63 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹಣ ಜಮೆಯಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯೆ ಶಾರದಾ ಕಟ್ಟಿಮನಿ ಮಾತನಾಡಿ, ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಹಾಗೂ ಜೆಸ್ಕಾಂ ಇಲಾಖೆ ಎಇಇ ಸಭೆಗೆ ಬಾರದಿರಲು ಕಾರಣವೇನು ಅವರಿಗೆ ಕಾರಣ ಕೇಳಿ ನೋಟಿಸು ಕೊಡುವಂತೆ ತಾಪಂ ಸಿಬ್ಬಂದಿ ಸಂಗಪ್ಪಗೆ ಸೂಚನೆ ನೀಡಿದ ಅವರು, ಮುಂದಿನ ಸಭೆಗೆ ಕಡ್ಡಾಯವಾಗಿ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು ಎಂದರು.

ಕುಷ್ಟಗಿ ಪಟ್ಟಣದಲ್ಲಿ ಹಳೆ ಲೈನುಗಳ ಬದಲಾವಣೆ ಮಾಡಲು ತಿಳಿಸಲಾಗಿದೆ. ಇಲ್ಲಿಯವರೆಗೂ ಯಾವುದೆ ಕೆಲಸ ಮಾಡಿಲ್ಲ, ಇದರ ಜತೆಗೆ ಹಳೆ ಟಿಸಿ ತೆಗೆಸಲು ತಿಳಿಸಿದ್ದು ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಈ ಕುರಿತು ಎಇಇ ಗಮನಕ್ಕೆ ತರುವಂತೆ ಸಭೆಯಲ್ಲಿ ಹಾಜರಿದ್ದ ಜೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು.

ಆಹಾರ ಶಿರಸ್ತೆದಾರ ಚನ್ನಬಸಪ್ಪ ಮಾತನಾಡಿ, ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಯ ಮೂಲಕ ಪಡಿತರವನ್ನು ಶೇ.80ರಷ್ಟು ಹಂಚಿಕೆ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲ ಪಡಿತರ ಹಂಚಿಕೆ ಮಾಡಲಾಗುವದು ಅಂತ್ಯೋದಯ ಕಾರ್ಡದಾರರಿಗೆ ಎರಡು ತಿಂಗಳ ಪಡಿತರ ಒಟ್ಟಿಗೆ ಕೊಡಲಾಗಿದೆ ಎಂದರು.

ಹುಲಿಯಾಪೂರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯ ಕುರಿತು ದೂರು ಸಲ್ಲಿಕೆಯಾಗಿದ್ದು, ಪರಿಶೀಲಿಸಿ ತಹಸೀಲ್ದಾರಗೆ ವರದಿ ಸಲ್ಲಿಸಲಾಗಿದ್ದು ತಹಸೀಲ್ದಾರರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಶೌಚಾಲಯ ದರ ದುಬಾರಿ: ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದಲ್ಲಿನ ಶೌಚಾಯದಲ್ಲಿ ಮೂತ್ರಾಲಯಕ್ಕೆ ಉಚಿತ ಹಾಗೂ ಶೌಚಾಲಯಕ್ಕೆ ₹2 ಮಾತ್ರ ತೆಗೆದುಕೊಳ್ಳಬೇಕು ಎಂದು ನಿಯಮವಿದ್ದು ಆದರೆ ₹15-20 ವಸೂಲಿ ಮಾಡುತ್ತಿದ್ದು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷರು ಸದಸ್ಯರು ಒತ್ತಾಯಿಸಿದರು.

ಸಾರಿಗೆ ಇಲಾಖೆ ಜಯಪ್ರಕಾಶ, ಯುವನಿಧಿ ನೋಡಲ್ ಅಧಿಕಾರಿ ಶಿವಯೋಗಪ್ಪ, ಜೆಸ್ಕಾಂ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪ, ಗ್ಯಾರಂಟಿ ಸಮಿತಿಯ ಸದಸ್ಯರು, ತಾಪಂ ಸಿಬ್ಬಂದಿಗಳು ಇದ್ದರು.

ಬೆಂಗಳೂರು ಬಸ್ ಸೋರುತ್ತಿದೆ:

ಕುಷ್ಟಗಿಯಿಂದ ಬೆಂಗಳೂರಿಗೆ ಹೋಗುವ ಸ್ಲೀಪರ್ ಬಸ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಇತ್ತೀಚಿಗೆ ಬೆಂಗಳೂರಿಗೆ ಹೋದ ಸಂದರ್ಭ ಮಳೆ ಬಂದಿದ್ದು ಮಳೆ ನೀರೆಲ್ಲ ಬಸ್ಸಿನ ತುಂಬೆಲ್ಲ ಸೋರಿಕೆಯಾಗಿದ್ದು ಬೆಂಗಳೂರಿನವರೆಗೂ ಮಳೆ ನೀರಿನಲ್ಲಿ ನೆನೆದುಕೊಂಡು ಹೋಗಲಾಗಿದೆ ಆದಷ್ಟು ಬಸ್ಸನ್ನು ರಿಪೇರಿ ಮಾಡಿಸಿ ಎಂದು ಗ್ಯಾರಂಟಿ ಸಮಿತಿಯ ಸದಸ್ಯ ವಿ.ಎಸ್ .ಕಾಡಗಿಮಠ ಸಾರಿಗೆ ಇಲಾಖೆ ಅಧಿಕಾರಿ ಜಯಪ್ರಕಾಶಗೆ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆ ಹಣದಿಂದ ಜೀವನ ಕಟ್ಟಿಕೊಂಡ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಜೂ.9 ರಂದು ಶಕ್ತಿ ಯೋಜನೆ ಜಾರಿಗೆ ಬಂದು ಮೂರು ವರ್ಷದ ಸಂಭ್ರಮದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕುಷ್ಟಗಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್ ತಿಳಿಸಿದ್ದಾರೆ.

ತಾವರಗೇರಾ ಭಾಗದಲ್ಲಿ ಜೆಸ್ಕಾಂ ಮೀಟರ್ ರೀಡರ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಈ ಕುರಿತು ಅನೇಕ ದೂರುಗಳು ಬಂದಿದ್ದು ಜೆಸ್ಕಾಂ ಎಇಇ ಮೀಟರ್ ರೀಡರ್‌ಗಳಿಗೆ ಸಭೆ ನಡೆಸಿ ಸೂಚನೆ ನೀಡುವ ಮೂಲಕ ಉತ್ತಮ ಕೆಲಸ ಮಾಡುವಂತೆ ತಿಳಿಸಬೇಕಿದೆ ಎಂದು ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅಮರೇಶ ಗಾಂಜಿ ತಿಳಿಸಿದ್ದಾರೆ.