ಬಳ್ಳಾರಿ ತಾಲೂಕಿನಲ್ಲಿ 1.83 ಮೀಟರ್, ಕಂಪ್ಲಿ- 1.57 ಮೀಟರ್, ಸಿರುಗುಪ್ಪ- 1.17 ಮೀಟರ್ ಹಾಗೂ ಕುರುಗೋಡು ತಾಲೂಕಿನಲ್ಲಿ 0.97 ಮೀಟರ್ನಷ್ಟು ಅಂತರ್ಜಲ ಮಟ್ಟ ಕುಸಿದಿದೆ
ಮಂಜುನಾಥ ಕೆ.ಎಂ ಬಳ್ಳಾರಿ
ಮುಂಗಾರು ಮಳೆಯ ಅಭಾವದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂತರ್ಜಲ ಮಟ್ಟ ಇಳಿಕೆಯಾಗಿದೆ. ಅದರಲ್ಲೂ ಸಂಡೂರು ತಾಲೂಕಿನಲ್ಲಿ ಬರೋಬ್ಬರಿ 6.52 ಮೀಟರ್ನಷ್ಟು ಅಂತರ್ಜಲ ಕುಸಿದಿರುವುದು ಆತಂಕ ಹುಟ್ಟಿಸಿದೆ.ಕೃಷಿ, ಕುಡಿಯುವ ನೀರು ಸೇರಿದಂತೆ ವಿವಿಧ ಉದ್ದೇಶಗಳಿಗೆ ಕೊಳವೆಬಾವಿಗಳ ಮೂಲಕ ನಿರಂತರವಾಗಿ ನೀರು ಹೊರತೆಗೆಯಲಾಗುತ್ತಿದೆ. ಮಳೆಯ ಕೊರತೆ ಮತ್ತು ಹೆಚ್ಚಿದ ನೀರಿನ ಬಳಕೆ ಎರಡೂ ಸೇರಿ ಅಂತರ್ಜಲದ ಮೇಲಿನ ಒತ್ತಡವನ್ನು ಹೆಚ್ಚಿಸಿವೆ.
ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಅಕ್ಟೋಬರ್ ವೇಳೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಅಂತರ್ಜಲ ಮಟ್ಟ ಕುಸಿದಿದೆ.ಸಂಡೂರು 11.87 ಮೀಟರ್: ಸಂಡೂರು ತಾಲೂಕಿನಲ್ಲಿ ಕಳೆದ ವರ್ಷ 5.35 ಮೀಟರ್ನಲ್ಲಿದ್ದ ಅಂತರ್ಜಲ ಮಟ್ಟ ಪ್ರಸಕ್ತ ವರ್ಷ 11.87 ಮೀಟರ್ಗೆ ತಲುಪಿದೆ. ಅಂದರೆ 6.52 ಮೀಟರ್ನಷ್ಟು ಇಳಿಕೆಯಾಗಿ, ಮೊದಲ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಆರು ಗ್ರಾಪಂ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ ಎಂಟು ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಗುರುತಿಸಲಾಗಿದೆ. ಚೋರನೂರು ಗ್ರಾಮದಲ್ಲಿ ಎರಡು ಹಾಗೂ ಹೊಸ ಜೋಗಿಕಲ್ಲು, ಎಚ್.ಕೆ.ಹಳ್ಳಿ, ಬಂಡ್ರಿ, ಸಿ.ಲಕ್ಕಲಹಳ್ಳಿ, ಹುಲಿಕುಂಟೆ ಮತ್ತು ಎಸ್.ಒಬಳಾಪುರ ಗ್ರಾಮಗಳಲ್ಲಿ ತಲಾ ಒಂದು ಕೊಳವೆಬಾವಿಯ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ ತಾಲೂಕಿನಲ್ಲಿ 1.83 ಮೀಟರ್, ಕಂಪ್ಲಿ- 1.57 ಮೀಟರ್, ಸಿರುಗುಪ್ಪ- 1.17 ಮೀಟರ್ ಹಾಗೂ ಕುರುಗೋಡು ತಾಲೂಕಿನಲ್ಲಿ 0.97 ಮೀಟರ್ನಷ್ಟು ಅಂತರ್ಜಲ ಮಟ್ಟ ಕುಸಿದಿದೆ.ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಕೆರೆಗಳ ಸ್ಥಿತಿಗತಿ ಗಮನಿಸಿದರೆ ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ಆತಂಕಕಾರಿಯಾಗಿಲ್ಲ. ನ. 18ರ ವರದಿಯಂತೆ ಬಳ್ಳಾರಿ, ಕುರುಗೋಡು, ಸಿರುಗುಪ್ಪ ಹಾಗೂ ಕಂಪ್ಲಿ ತಾಲೂಕುಗಳ ವ್ಯಾಪ್ತಿಯಲ್ಲಿರುವ 66 ಗ್ರಾಮೀಣ ಕುಡಿಯುವ ನೀರಿನ ಕೆರೆಗಳ ಪೈಕಿ 33 ಕೆರೆಗಳು ಶೇ.91ರಿಂದ 100ರಷ್ಟು ಭರ್ತಿಯಾಗಿವೆ. 19 ಕೆರೆಗಳಲ್ಲಿ ಶೇ.76ರಿಂದ 90ರಷ್ಟು ನೀರಿನ ಸಂಗ್ರಹವಿದೆ. ಐದು ಕೆರೆಗಳಲ್ಲಿ ಶೇ. 51ರಿಂದ 75ರಷ್ಟು ನೀರಿದೆ. ಒಂದು ಕೆರೆಯಲ್ಲಿ ಮಾತ್ರ ಶೇ.25ಕ್ಕಿಂತ ಕಡಿಮೆ ನೀರಿನ ಸಂಗ್ರಹವಿದ್ದು, ಉಳಿದ ಎಂಟು ಕಡೆಗಳಲ್ಲಿ ನದಿಯಿಂದ ನೇರವಾಗಿ ನೀರು ಪಂಪ್ ಮಾಡಲಾಗುತ್ತಿದೆ.
70 ದಿನಗಳಿಗೆ ನೀರು: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಲ್ಲೀಪುರ ಜಲಸಂಗ್ರಹಾಗಾರದಲ್ಲಿ ಶೇ.93.36 ಹಾಗೂ ಮೋಕಾದ ಮೂರು ಜಲಸಂಗ್ರಹಾಗಾರಗಳಲ್ಲಿ ಶೇ.89ರಿಂದ 97ರಷ್ಟು ನೀರಿನ ಸಂಗ್ರಹವಿದೆ. ಮುಂದಿನ 70 ದಿನಗಳವರೆಗೆ ಏಳು ದಿನಕ್ಕೊಮ್ಮೆ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಸಂಡೂರು ಪುರಸಭೆ ವ್ಯಾಪ್ತಿಯ ನಾರಿಹಳ್ಳ ಜಲಾಶಯದಲ್ಲಿ 13,167.33 ಎಂ.ಎಲ್. ನೀರು ಲಭ್ಯವಿದ್ದು, ಆರು ತಿಂಗಳವರೆಗೆ ಪೂರೈಕೆ ಮಾಡಬಹುದಾಗಿದೆ. ಕುರುಗೋಡಿನಲ್ಲಿ ಶೇ. 100ರಷ್ಟು, ತೆಕ್ಕಲಕೋಟೆಯಲ್ಲಿ ಶೇ.97ರಷ್ಟು ನೀರಿನ ಸಂಗ್ರಹವಿದೆ. ಕಂಪ್ಲಿಯಲ್ಲಿ ನೇರ ಪಂಪಿಂಗ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಪಟ್ಟಣಗಳಲ್ಲಿ ಮುಂದಿನ ಮೂರು ತಿಂಗಳವರೆಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.
ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ ಶೇ.52ರಷ್ಟು ನೀರಿನ ಸಂಗ್ರಹವಿದ್ದು, ನದಿ ಪಂಪಿಂಗ್ ವ್ಯವಸ್ಥೆಯೂ ಇದೆ. ಸುಮಾರು ಮೂರೂವರೆ ತಿಂಗಳಿಗೆ ಆಗುವಷ್ಟು ನೀರು ಲಭ್ಯವಿದೆ. ಕುಡತಿನಿಯಲ್ಲಿ ಶೇ.78.57ರಷ್ಟು ನೀರಿನ ಸಂಗ್ರಹವಿದ್ದು, ಎರಡು ತಿಂಗಳವರೆಗೆ ನೀರು ಪೂರೈಸಬಹುದು. ಕುರೇಕುಪ್ಪದಲ್ಲಿ ಕೊಳವೆಬಾವಿಗಳ ಮೂಲಕ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ.ನೀರು ಮಿತ ಬಳಕೆಗೆ ಡಿಸಿ ಮನವಿ
ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಂಗ್ರಹ ಸಮಾಧಾನಕರವಾಗಿದ್ದರೂ ಅಂತರ್ಜಲ ಮಟ್ಟದ ಕುಸಿತ ಲಘುವಾಗಿ ಪರಿಗಣಿಸುವಂತಿಲ್ಲ. ಮಳೆಯ ಕೊರತೆ ಮುಂದುವರಿದರೆ ಹಾಗೂ ನೀರಿನ ಬಳಕೆಯಲ್ಲಿ ನಿಯಂತ್ರಣ ಇಲ್ಲದಿದ್ದರೆ ಮುಂದಿನ ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಹೀಗಾಗಿ ನೀರಿನ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಜಿಲ್ಲಾಡಳಿತದ ಜವಾಬ್ದಾರಿಯಾಗದೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.