ಸಿ.ಕೆ. ನಾಗರಾಜ

ಹೊಸಪೇಟೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆ ಪರಿಣಾಮ ಬಿತ್ತನೆಯಲ್ಲಿ ಸಾಕಷ್ಟು ಕುಂಠಿತಗೊಂಡಿದೆ. ಸಾಂಪ್ರದಾಯಿಕ ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬಿತ್ತನೆಗೆ ಕಾದಿರುವ ರೈತರು, ಈಗ ನಿತ್ಯವೂ ಮಳೆಗಾಗಿ ಮುಗಿಲಿನತ್ತ ನೋಡುವಂತಾಗಿದೆ.

ಜಿಲ್ಲೆಯಲ್ಲಿ ಬಹುತೇಕ ಮಳೆಯಾಶ್ರಿತ ಕೃಷಿ ಭೂಮಿ ಇದೆ. ಈ ವರ್ಷ ಶೇ.12.37ರಷ್ಟು ಮಾತ್ರ ಬಿತ್ತನೆ ಕಾರ್ಯ ಆಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಶೇ.25ರಷ್ಟು ಬಿತ್ತನೆ ನಡೆದಿದ್ದು, ಬಿತ್ತನೆ ಕಾರ್ಯ ವಾಡಿಕೆಗಿಂತ ಕಡಿಮೆಯಾಗಿದೆ. ಹೀಗಾಗಿ ರೈತರು ನಿರೀಕ್ಷೆ ಹುಸಿಯಾದಂತಾಗಿದೆ. ಜೋಳ ಸೇರಿದಂತೆ ಕೆಲ ಬೆಳೆಗಳನ್ನು ಬಿತ್ತನೆ ಮಾಡಬೇಕೋ ಅಥವಾ ಬೇಡವೋ ಎಂಬ ಅಂತತ್ರ ಸ್ಥಿತಿಯಲ್ಲಿ ರೈತರಿದ್ದಾರೆ.

ಕಳೆದ ವರ್ಷ ಮೇ ಅಂತ್ಯದ ವೇಳೆಗೆ ಮುಂಗಾರು ಆರಂಭವಾಗಿತ್ತು. ಜೂನ್‌ ಆರಂಭದಿಂದಲೇ ಬಿತ್ತನೆ ಚುರುಕು ಪಡೆದಿತ್ತು. ಆದರೆ ಈ ವರ್ಷ ಜೂನ್ 15 ಕಳೆದರೂ ಮಳೆ ಸಮರ್ಪಕವಾಗಿ ಆಗಿಲ್ಲ. ವಾಡಿಕೆಯಂತೆ ಜಿಲ್ಲೆಯಲ್ಲಿ ಜೂನ್ ಮೊದಲ ಎರಡು ವಾರ 4.17 ಮಿ.ಮೀ.ಮಳೆ ಆಗಬೇಕಿತ್ತು. ಆದರೆ ಆಗಿರುವುದು ಕೇವಲ 1.97 ಮಿ.ಮೀ. ಈ ಮೂಲಕ ಶೇ.53ರಷ್ಟು ಮಳೆ ಕೊರತೆಯಾಗಿದೆ.

ಜಿಲ್ಲೆಯ ತಾಲೂಕುಗಳ ಪೈಕಿ ಹರಪನಹಳ್ಳಿಯಲ್ಲಿ ಶೇ.67ರಷ್ಟು ಮಳೆ ಕೊರತೆ ಆಗಿದೆ. ಹೊಸಪೇಟೆಯಲ್ಲಿ ಶೇ.66 ಮಳೆ ಕೊರತೆ ಆಗಿದೆ. ಕೊಟ್ಟೂರಿನಲ್ಲಿ ಶೇ.53, ಹಡಗಲಿಯಲ್ಲಿ ಶೇ.48, ಹಗರಿಬೊಮ್ಮನಹಳ್ಳಿಯಲ್ಲಿ ಶೇ.39, ಕೂಡ್ಲಿಗಿಯಲ್ಲಿ ಶೇ.33ರಷ್ಟು ಮಳೆ ಕೊರತೆ ಆಗಿದೆ.


ಜಿಲ್ಲೆಯಲ್ಲಿ ಒಟ್ಟು ಕೃಷಿ ಭೂಮಿ 2.94 ಲಕ್ಷ ಹೆಕ್ಟೇರ್ ಪೈಕಿ 2.38 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಹಾಗೂ 56,370 ಹೆಕ್ಟೇರ್ ನೀರಾವರಿ ಆಶ್ರಿತ. ಸದ್ಯ 12,950 ಹೆಕ್ಟೇರ್ ನೀರಾವರಿ ಆಶ್ರಿತ, 23,462 ಹೆಕ್ಟೇರ್ ಮಳೆಯಾಶ್ರಿತ ಜಮೀನಿನಲ್ಲಿ ಮಾತ್ರ (ಒಟ್ಟು 36,412 ಹೆಕ್ಟೇರ್‌) ಬಿತ್ತನೆ ಕಾರ್ಯ ನಡೆದಿದೆ. ಈಗ ಬಿತ್ತನೆ ಕಾರ್ಯ ನಡೆಸಬೇಕಾದರೆ ನಿಮ್ಮ ನಿಮ್ಮ ಪ್ರದೇಶದಲ್ಲಿ ಉತ್ತಮ ಮಳೆ ಸುರಿದ ಮೇಲೆ ಬಿತ್ತನೆಗೆ ರೈತರು ಮುಂದಾಗಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲ ಪ್ರದೇಶದಲ್ಲಿ ಬಿತ್ತನೆಯಾಗುವಷ್ಟು ಮಳೆ ಸುರಿಯದಿದ್ದರೂ ರೈತರು ಭೂಮಿ ಹದಮಾಡಿ ಇಟ್ಟುಕೊಂಡಿದ್ದಾರೆ. ಮಳೆಗಾಗಿ ಕಾಯುತ್ತಿದ್ದಾರೆ. ಮುಖ್ಯವಾಗಿ ಜೋಳ, ಮೆಕ್ಕೆಜೋಳ ಈ ಭಾಗದ ಪ್ರಮುಖ ಬೆಳೆಯಾಗಿದೆ. ಅದರ ಬಿತ್ತನೆಗೆ ರೈತರು ಕಾಯುತ್ತಿದ್ದಾರೆ. ಜೋಳ ಬಿತ್ತನೆಗೆ ಸಮಯ ಮುಗಿದಿದೆ. ಮೆಕ್ಕೆಜೋಳ ಬಿತ್ತನೆಗೆ ಕಾಲ ಮಿಂಚಿಲ್ಲ. ಈ ತಿಂಗಳ ಅಂತ್ಯದವರೆಗೆ ಮಳೆ ಬಂದ ಬಳಿಕವೂ ಬಿತ್ತನೆ ಮಾಡಬಹುದು. ರೈತರು ಸದ್ಯ ನಿರೀಕ್ಷೆ ಕಳೆದುಕೊಳ್ಳುವುದು ಬೇಡ ಎಂದು ಜಂಟಿ ಕೃಷಿ ನಿರ್ದೇಶಕ ಡಿ.ಟಿ. ಮಂಜುನಾಥ್ ತಿಳಿಸಿದರು.

ಬಿತ್ತನೆ ಬೀಜ ಕೊರೆ ಇಲ್ಲ. ಈಗಾಗಲೇ ಜಿಲ್ಲೆಯ ರೈತರು ಬಹುತೇಕ ಕಡೆ ಬಿತ್ತನೆ ಬೀಜ, ರಸಗೊಬ್ಬರವನ್ನು ತೆಗೆದುಕೊಂಡು ಹೋಗಿದ್ದಾರೆ. ಹೊಲದಲ್ಲಿ ತೇವಾಂಶ ಇದ್ದಾಗ ಮಾತ್ರ ರೈತರು ಬಿತ್ತನೆ ಕಾರ್ಯ ನಡೆಸಬಹುದು. ತೇವಾಂಶ ಇಲ್ಲದಿದ್ದರೆ ಮಳೆ ಬರುವವರೆಗೂ ಬಿತ್ತಬಾರದು ಎನ್ನುವ ಸೂಚನೆಯನ್ನು ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿತ್ತನೆ ಬೀಜ ದಾಸ್ತಾನು ಬೇಡಿಕೆಗೆ ತಕ್ಕಷ್ಟು ಇದೆ. ಇದುವರೆಗೆ 2,694 ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. 5,754 ಕ್ವಿಂಟಲ್‌ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.

ರೈತರು ತೇವಾಂಶ ಇಲ್ಲದೇ ಬಿತ್ತನೆಗೆ ಮುಂದಾಗಬಾರದು. ಈ ತಿಂಗಳ ಅಂತ್ಯದವರೆಗೂ ಮಳೆ ಕೊರತೆ ಕಾಡುವ ಸಾಧ್ಯತೆ ಇದೆ. ಮೆಕ್ಕೆಜೋಳ ಬಿತ್ತನೆಯನ್ನು ಈ ತಿಂಗಳ ಅಂತ್ಯದವರೆಗೂ ಬಿತ್ತನೆ ಮಾಡಬಹುದು. ಉತ್ತಮ ಮಳೆ ಬಂದರೆ ಬಿತ್ತನೆಗೆ ರೈತರು ಮುಂದಾಗಬೇಕು ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಡಿ.ಟಿ. ಮಂಜುನಾಥ.