ಪ್ರಸಂಗಕರ್ತರಿಗೆ ಮಾನ್ಯತೆ ಕೊರತೆ: ಪ್ರೊ.ಬಾಲಕೃಷ್ಣ ಶೆಟ್ಟಿ ವಿಷಾದ

| Published : Sep 02 2024, 02:12 AM IST

ಪ್ರಸಂಗಕರ್ತರಿಗೆ ಮಾನ್ಯತೆ ಕೊರತೆ: ಪ್ರೊ.ಬಾಲಕೃಷ್ಣ ಶೆಟ್ಟಿ ವಿಷಾದ
Share this Article
  • FB
  • TW
  • Linkdin
  • Email

ಸಾರಾಂಶ

ಬಿದ್ಕಲ್ ಕಟ್ಟೆಯ ಕೆಪಿಎಸ್ ಶಾಲಾ ಆವರಣದ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ಕುಂದಾಪುರ ತಾಲೂಕು19ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ತಾರ್ಕಣಿ’ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಸಾಹಿತ್ಯದ ಎಲ್ಲ ಆಯಾಮಗಳನ್ನು ಮೇಳೈಸಿಕೊಂಡಿರುವ ಯಕ್ಷಗಾನದ ಪ್ರಸಂಗಗಳನ್ನು ಬರೆಯುವ ಪ್ರಸಂಗಕರ್ತರು ಸಾಹಿತ್ಯ ಸಮ್ಮೇಳನ ಮುಖ್ಯ ವಾಹಿನಿಯಲ್ಲಿ ಗುರುತಿಸಲ್ಪಡದೆ ಇರುವುದು ಬೇಸರದ ಸಂಗತಿ. ಭಾಷಾ ಸಂಸ್ಕೃತಿಯ ರಾಯಭಾರಿಗಳಾಗಿರುವ ಯಕ್ಷಗಾನ ಪ್ರಸಂಗಕರ್ತರಿಗೆ ಸಿಗಬೇಕಾದ ಗೌರವ ಸಿಗಬೇಕು ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಆಶಯ ವ್ಯಕ್ತಪಡಿಸಿದರು.ಬಿದ್ಕಲ್ ಕಟ್ಟೆಯ ಕೆಪಿಎಸ್ ಶಾಲಾ ಆವರಣದ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ಭಾನುವಾರ ನಡೆದ ಕುಂದಾಪುರ ತಾಲೂಕು19ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ತಾರ್ಕಣಿ’ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಅಧ್ಯಕ್ಷೀಯ ಭಾಷಣ ಮಾಡಿದರು.

ಕುಂದಾಪುರ ಕನ್ನಡದಲ್ಲಿ ದೊಡ್ಡ ಹಾಗೂ ಸಣ್ಣ ಪದ ಬಳಕೆ ಇದ್ದರೂ ನಮ್ಮ‘ಅಬ್ಬಿ’ ಭಾಷೆಗೆ ದೊಡ್ಡ ಇತಿಹಾಸವಿದೆ. ಅನ್ಯಭಾಷೆಯ ಶಬ್ದಗಳ ಆಕ್ರಮಣದಿಂದಾಗಿ ಕುಂದಾಪ್ರ ಕನ್ನಡದ ಶಬ್ದಗಳು ಮರೆಯಾಗುತ್ತಿವೆ ಎನ್ನುವ ಆತಂಕ ಕಾಡುತ್ತಿದೆ. ಭಾಷೆಗಳ ಉಳಿವು ಮತ್ತು ಬೆಳವಣಿಗೆಗೆ ಶಿಕ್ಷಕರ ಪ್ರಯತ್ನಗಳು ಉಲ್ಲೇಖನೀಯ. ಶಿಕ್ಷಕ ಬಂಧುಗಳ ಪ್ರಾಮಾಣಿಕ ಪ್ರಯತ್ನಗಳು ಭಾಷೆಯ ಬಗ್ಗೆ ಇಲ್ಲದೇ ಇದ್ದಲ್ಲಿ ಯಾವುದೇ ಭಾಷೆಗಳು ಉಳಿಯುವುದಿಲ್ಲ ಎಂದರು.

ಈ ಮಣ್ಣಿನ ವಿಶೇಷವೆಂದರೆ ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರ ಭಾಷೆಯನ್ನು ಮರೆಯುವುದಿಲ್ಲ. ಜಾನಪದದಿಂದ ಜ್ಞಾನಪೀಠದವರೆಗೂ ಮನ್ನಣೆ ಪಡೆದ ಪ್ರತಿಭಾನ್ವಿತರು ಈ ನೆಲದಲ್ಲಿ ಹುಟ್ಟಿ ಬಂದಿದ್ದಾರೆ. ನಮ್ಮಅಸ್ಮಿತೆಯಲ್ಲಿ ಮುಖ್ಯವಾದುದು ಭಾಷೆ. ಮಾತೃಭಾಷೆ ಉಳಿಯಬೇಕು ಎಂದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಭಾಷೆಯನ್ನು ಉಳಿಸಿ ಸಾಹಿತ್ಯವನ್ನು ಬೆಳೆಸುವ ಸಾಹಿತ್ಯ ಸಮ್ಮೇಳನಗಳಿಗಾಗಿ ಸರ್ಕಾರ ನೀಡುವ ಅನುದಾನಗಳು ಕ್ಲಪ್ತ ಸಮಯದಲ್ಲಿ ಸಂಘಟಕರಿಗೆ ದೊರಕಬೇಕು. ಕರ್ನಾಟಕ ರಾಜ್ಯದ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆ ಇರಬೇಕು ಎನ್ನುವ ಕಡ್ಡಾಯದ ನಿಯಮದಂತೆ ಭಾಷಾಭಿವೃದ್ದಿ ಕಾರ್ಯಕ್ರಮಗಳಿಗೂ ಅನುದಾನ ನೀಡುವುದು ಕಡ್ಡಾಯವಾಗಬೇಕು ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕುಂದಾಪುರ ತಹಸೀಲ್ದಾರ್ ಎಚ್.ಎಸ್ ಶೋಭಾಲಕ್ಷ್ಮೀ ಮಾತನಾಡಿದರು.

ಪತ್ರಕರ್ತ ಯು.ಎಸ್. ಶೆಣೈ, ಪೂರ್ವ ಸಮ್ಮೇಳನಾಧ್ಯಕ್ಷ ಕೊ. ಶಿವಾನಂದ ಕಾರಂತ್ ಅವರ ಭಾಷಣವನ್ನು ಓದಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮ್ಮೇಳನಾಧ್ಯಕ್ಷ ಪ್ರೊ. ಬಾಲಕೃಷ್ಣ ಶೆಟ್ಟಿ ಅವರಿಗೆ ಕನ್ನಡ ಬಾವುಟವನ್ನು ಹಸ್ತಾಂತರಿಸಿದರು.

ಸಾಹಿತಿ ಡಾ. ಭಾಸ್ಕರ ಆಚಾರ್ಯ ಕೋಟೇಶ್ವರ ಅವರು ಸುದಾಂಶು ಹಾಗೂ ಹೊಂಬೆಳಕು ಪುಸ್ತಕ ಬಿಡುಗಡೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸಿದರು. ಕೊಳನಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದ ಮುಖಮಂಟಪದಿಂದ ಸಮ್ಮೇಳನಾಧ್ಯಕ್ಷರನ್ನು ಕನ್ನಡಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆಯೊಂದಿಗೆ ಸಮ್ಮೇಳನ ಮಂಟಪಕ್ಕೆ ಕರೆತರಲಾಯಿತು.

ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಮೆರವಣಿಗೆಗೆ ಚಾಲನೆ ನೀಡಿದರು. ಚಂಡೆವಾದನ, ಭಜನಾ ತಂಡ, ಭಾರತ್ ಸೇವಾದಳ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯತಂಡ, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿದ್ದರು. ವೀಣಾ ಬಾಲಕೃಷ್ಣ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ಬಿ. ಅರುಣ್ ಕುಮಾರ್ ಹೆಗ್ಡೆ, ಗ್ರಾ.ಪಂ. ಅಧ್ಯಕ್ಷರಾದ ಎಂ. ಚಂದ್ರಶೇಖರ ಶೆಟ್ಟಿ, ದೀಪಾಶೆಟ್ಟಿ, ಜಯಂತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ರಾಘವೇಂದ್ರ ಅಡಿಗ, ವಿಘ್ನೇಶ್ವರ ಭಟ್, ಎಂ. ಚಂದ್ರಶೇಖರ ಶೆಟ್ಟಿ, ಮನೋಹರ್ ಪಿ., ಗುಂಡ್ಮಿ ರಾಮಚಂದ್ರ ಐತಾಳ್, ಪುಂಡಲೀಕ ಮರಾಠೆ, ರವಿರಾಜ್ ಎಚ್.ಪಿ., ಪ್ರಭಾಕರ ಶೆಟ್ಟಿ ಕೊಂಡಳ್ಳಿ ಇದ್ದರು.ಕೆಪಿಎಸ್ ಬಿದ್ಕಲ್ ಕಟ್ಟೆಯ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ ಹಾಗೂ ರೈತಗೀತೆ ಹಾಡಿದರು. ತಾಲೂಕು ಕಸಾಪ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮೊಳಹಳ್ಳಿ ನೆಲದ ಮಾತುಗಳನ್ನು ಹಂಚಿಕೊಂಡರು. ತಾಲೂಕು ಕಸಾಪ ಕಾರ್ಯದರ್ಶಿ ದಿನಾಕರ್ ಆರ್ ಶೆಟ್ಟಿ ಹಾಗೂ ಶಿಕ್ಷಕ ಸತೀಶ್ ಶೆಟ್ಟಿಗಾರ್ ನಿರೂಪಿಸಿದರು. ತಾಲೂಕು ಕಸಾಪ ಕೋಶಾಧ್ಯಕ್ಷ ಮಂಜುನಾಥ ಕೆ.ಎಸ್. ವಂದಿಸಿದರು.ಕುಂದಾಪ್ರ ಕನ್ನಡದ ಹೊಸ ಸಾಧ್ಯತೆಗಳು, ಜನಪದ ಗೀತಾಗಾಯನ, ಬಹುವಿಧಗೋಷ್ಠಿ, ಚಿಣ್ಣರ ವೈವಿಧ್ಯ, ಅಬ್ಬಿ ಭಾಷಿ, ಅಧ್ಯಕ್ಷರೊಂದಿಗೆ ಒಂದಷ್ಟು ಹೊತ್ತು ಕಾರ್ಯಕ್ರಮಗಳನ್ನು ನಡೆಸಲಾಯಿತು.

....................ಮಲಗಿ ನೇತಾಡುತ್ತಿರುವ ಕನ್ನಡ ಬಾವುಟ!

ಸಮ್ಮೇಳನ ವೇದಿಕೆಯನ್ನು ಸ್ವಲ್ಪವೂ ಶೃಂಗಾರಗೊಳಿಸದೆ ಎಲ್ಇಡಿ ಪರದೆಗೆ ಮಾತ್ರವೇ ಸೀಮಿತಗೊಳಿಸಲಾಗಿತ್ತು. ಕಾರ್ಯಕ್ರಮದ ಉದ್ಘೋಷಣೆಗಳಲ್ಲಿ ಇಂಗ್ಲಿಷ್ ಪದಗಳ ಯಥೇಚ್ಚ ಬಳಕೆಯ ಬಗ್ಗೆ ಸಭಿಕರಲ್ಲಿ ಅಸಮಧಾನವಿತ್ತು. ಧ್ವನಿವರ್ಧಕದ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಇದ್ದುದರಿಂದ ಸಮ್ಮೇಳನಾಧ್ಯಕ್ಷರ ಪರಿಚಯವೂ ಸೇರಿ ಸಮ್ಮೇಳನದ ಪ್ರಮುಖ ಅಂಶಗಳು ಸಭಾಂಗಣದಲ್ಲಿದ್ದ ಎಲ್ಲರನ್ನೂ ತಲುಪಲಿಲ್ಲ. ಊಟೋಪಚಾರದ ಅಚ್ಚುಕಟ್ಟಿನ ವ್ಯವಸ್ಥೆ ಸಮ್ಮೇಳನದ ಮೆರುಗನ್ನು ಹೆಚ್ಚಿಸಿತು. ಸಭಿಕರು ಕೂರುವ ಮೇಲ್ಭಾಗದಲ್ಲಿ ಕನ್ನಡ ಬಾವುಟಗಳನ್ನು ಹಗ್ಗವೊಂದಕ್ಕೆ ಸುರಿದು ಕರ್ನಾಟಕ ಲಾಂಛನವುಳ್ಳ ಹಳದಿ ಕೆಂಪು ಬಣ್ಣದ ಬಾವುಟಗಳು ಮಲಗಿ ನೇತಾಡುವ ಹಾಗೆ ಅಲಂಕಾರಿಕ ವಸ್ತುಗಳಂತೆ ತೂಗುಹಾಕಲಾಗಿದ್ದು ಕನ್ನಡಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು.