ಸಾರಾಂಶ
ಧಾರವಾಡ:
ಕೃಷಿ ಮೇಳದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡದೇ ಇರುವುದರಿಂದ ಗೊಂದಲದಲ್ಲೇ ಶುರುವಾಗಿರುವ ಕೃಷಿ ಮೇಳದಲ್ಲಿ, ಮೊದಲ ದಿನವೇ ಕುಲಪತಿ ಡಾ. ಪಿ.ಎಲ್. ಪಾಟೀಲ ಅವರ ನಿರ್ಲಕ್ಷ್ಯ ಕಂಡು ಬಂತು. ಮೊದಲ ದಿನವೇ ಬಿತ್ತನೆ ಬೀಜ ಕೊರತೆಯಾಗಿ ಅನ್ನದಾತರು ಆಕ್ರೋಶಗೊಂಡರು.ಈ ಮೊದಲು ಮಾಡುತ್ತಿದ್ದ ಕೃಷಿ ಮೇಳಗಳಿಗಿಂತ ಈ ಬಾರಿಯ ಪ್ರಚಾರದ ವಿಷಯದಲ್ಲಿ ತುಸು ಎಡವಿದಂತಾಗಿದ್ದು ಮೊದಲ ದಿನ ಕೃಷಿ ಮೇಳಕ್ಕೆ ರೈತರು ಹಾಗೂ ಜನರ ನಿರಾಸಕ್ತಿ ಕಂಡು ಬಂತು. ಅಷ್ಟೇ ಅಲ್ಲದೇ ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸದೇ ಇದ್ದುದರಿಂದ ಬಂದ ಕೆಲವೇ ರೈತರಿಗೂ ಸಿಗದೇ ಆಕ್ರೋಶಗೊಂಡರು. ಹೀಗೆ ಅನೇಕ ಕಾರಣಗಳಿಂದ ಮೇಳ ಸಪ್ಪೆಯಾಗಿ ಕಂಡು ಬಂತು. ಸಂಜೆ ವರೆಗೂ ಮೇಳಕ್ಕೆ ರೈತರ ಹಾಗೂ ಜನರ ಕೊರತೆ ಎದ್ದು ಕಂಡಿತು. ಅದರಲ್ಲೂ ಬೀಜ ಮೇಳಕ್ಕೆ ಕೇಂದ್ರ ಸಚಿವರು ಸೇರಿದಂತೆ ಗಣ್ಯರು ಆಗಮಿಸಿದಾಗ ಹತ್ತಿಪ್ಪತ್ತು ರೈತರು ಮಾತ್ರ ಇದ್ದಿದ್ದು ಅವರಿಗೆ ತೀವ್ರ ಮುಜುಗರಕ್ಕೆ ಕಾರಣವಾಯಿತು. ಈ ಕುರಿತು ಕುಲಪತಿ ಪಿ.ಎಲ್. ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ನಡೆಯಿತು.
ಬೀಜ ಸಿಗದೇ ರೈತರ ಅಕ್ರೋಶ:ಕೃಷಿ ಮೇಳದ ಮೊದಲ ದಿನವೇ ಬೀಜ ಖರೀದಿ ಕೇಂದ್ರದಲ್ಲಿ ಬೆಳಗ್ಗೆ 10ಕ್ಕೆ ರೈತರು ಪಾಳಿ ಹಚ್ಚಿ ಖರೀದಿಸುವಾಗ ಫಲಕದಲ್ಲಿ ಕಡಲೆ, ಜೋಳ, ಗೋದಿ ಸಾಲಿನಲ್ಲಿ ಅಲಸಂದಿ, ಹೆಸರು ಹಾಗೂ ಅದರ ಬೆಲೆ ಪ್ರಕಟಿಸಲಾಗಿತ್ತು. ಆದರೆ, ಮೊದಲ ದಿನವೇ ಅಲಸಂದಿ ಬೀಜ ಕೊರತೆ ಎದುರಾಗಿದ್ದು, ದೂರದ ಊರುಗಳಿಂದ ಬೀಜ ಖರೀದಿಗೆ ಬಂದ ರೈತರನ್ನು ಕಂಗೆಡಿಸಿತು. ಫಲಕದಲ್ಲಿ ಬೀಜದ ಬಗ್ಗೆ ಮಾಹಿತಿ ನೀಡಿ ಬೀಜ ನೀಡಲು ಮೀನಮೇಷ ಏತಕ್ಕೆ ಎಂದು ಒಂದು ಗಂಟೆ ಕಾಲ ಕೃಷಿ ವಿವಿ ಅವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು.
ಹುಗ್ಗಿ, ಫಲಾವ್‌ಗೆ ಸೀಮಿತ:ಪ್ರತಿ ವರ್ಷ ಮಾಧ್ಯಮದವರು ಸೇರಿದಂತೆ ಗಣ್ಯರಿಗೆ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಇರುತ್ತಿತ್ತು. ಕಳೆದ 30 ವರ್ಷಗಳಿಂದ ನಡೆದುಕೊಂಡು ಬಂದ ಈ ಸಂಪ್ರದಾಯಕ್ಕೆ ಈ ಬಾರಿ ಬ್ರೇಕ್ ಬಿತ್ತು. ಆವರಣದಲ್ಲಿ ಹಾಕಲಾದ ಮಳಿಗೆಯಿಂದ ಬರುವ ಕೋಟಿಗಟ್ಟಲೇ ಹಣ ಸೇರಿದಂತೆ ಮೇಳಕ್ಕೆ ಸಾಕಷ್ಟು ಅನುದಾನ ಇದ್ದರೂ, ಅನುದಾನದ ಕೊರತೆ ನೆಪದಿಂದ ಈ ಬಾರಿ ಪ್ರಸಾದದ ರೂಪದಲ್ಲಿ ಹುಗ್ಗಿ ಹಾಗೂ ಫಲಾವ್ ಮೂಲಕ ಮಧ್ಯಾಹ್ನ ಊಟವನ್ನು ಮುಗಿಸಲಾಯಿತು. ಇದು ಗಣ್ಯರಿಗೆ ಬೇಸರ ಹಾಗೂ ಮುಜುಗರ ಸಹ ಮೂಡಿಸಿತು. ಅಲ್ಲದೇ, ತಿಂಗಳುಗಟ್ಟಲೇ ಹಗಲು ರಾತ್ರಿ ಮೇಳದ ಯಶಸ್ವಿಗಾಗಿ ದುಡಿಯುವ ವಿವಿ ನೌಕರರಿಗೆ ಊಟದ ವ್ಯವಸ್ಥೆ ಇರಲಿಲ್ಲ. ಮನೆಯಿಂದ ಡಬ್ಬಿ ಕಟ್ಟಿಕೊಂಡು ಬಂದು ಉಣ್ಣುವ ಸ್ಥಿತಿಯಿಂದ ಅವರೂ ಸಹ ಕುಲಪತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.