ತ್ಯಾಜ್ಯ ವಿಲೇ ಕೊರತೆ: ಸುಂಟಿಕೊಪ್ಪ ಮಾಂಸ ಮಾರುಕಟ್ಟೆ ಪರಿಸರ ಗಲೀಜು

| Published : Aug 14 2024, 12:47 AM IST

ತ್ಯಾಜ್ಯ ವಿಲೇ ಕೊರತೆ: ಸುಂಟಿಕೊಪ್ಪ ಮಾಂಸ ಮಾರುಕಟ್ಟೆ ಪರಿಸರ ಗಲೀಜು
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಜನತಾ ಕಾಲನಿ ಸಮೀಪದಲ್ಲಿ ಪಂಚಾಯಿತಿಯ ಕೋಳಿ, ಮೀನು ಮಾಂಸದ ಮಳಿಗೆಯಲ್ಲಿ ಸಂಗ್ರಹಗೊಂಡ ತ್ಯಾಜ್ಯ ಸರಿಯಾಗಿ ವಿಲೇವಾರಿಗೊಳಿಸದೆ ಅಶುಚಿತ್ವ ತಾಂಡವಾಡುತ್ತಿದೆ. ಈ ಭಾಗದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಕ್ಕೆ ಮುಕ್ತ ಆಹ್ವಾನ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಜನತಾ ಕಾಲನಿ ಸಮೀಪದಲ್ಲಿ ಪಂಚಾಯಿತಿಯ ಕೋಳಿ, ಮೀನು ಮಾಂಸದ ಮಳಿಗೆಯಲ್ಲಿ ಸಂಗ್ರಹಗೊಂಡ ತ್ಯಾಜ್ಯ ಸರಿಯಾಗಿ ವಿಲೇವಾರಿಗೊಳಿಸದೆ ಅಶುಚಿತ್ವ ತಾಂಡವಾಡುತ್ತಿದೆ. ಈ ಭಾಗದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಕ್ಕೆ ಮುಕ್ತ ಆಹ್ವಾನ ನೀಡುತ್ತಿದೆ.

ಸಂತೆ ದಿನ ಭಾನುವಾರ ಈ ಮಾರುಕಟ್ಟೆಯಲ್ಲಿ ಮೀನು, ಮಾಂಸ ವ್ಯಾಪಾರ ನಡೆಯುತ್ತಿದ್ದು ಅದರ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗಿರುವುದರಿಂದ ಮತ್ತು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಮಾಂಸದ ಅಂಗಡಿಯವರು ಕೂಡ ಇಲ್ಲೇ ತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದ್ದು, ಕೆಟ್ಟ ದುರ್ವಾಸನೆ ಬೀರುತ್ತಿದೆ.

ಇಲ್ಲಿನ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಮಾಡದೆ ಉಳಿದ ಪರಿಣಾಮ ಸೋಮವಾರ ಇಡೀ ವಾತಾವರಣವೇ ಗಬ್ಬೆದ್ದು ನಾರುತ್ತಿತ್ತು.

ವಾಣಿಜ್ಯ ಮಳಿಗೆಗಳ ವ್ಯಾಪರಸ್ಥರು ಮೂಗು ಮುಚ್ಚಿಕೊಂಡು ವ್ಯಾಪಾರ, ವಹಿವಾಟು ನಡೆಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತು. ಅಕ್ಕ ಪಕ್ಕದವರ ಒತ್ತಾಯದ ಮೇರೆಗೆ ಗ್ರಾಮ ಪಂಚಾಯಿತಿ ಪೌರಕಾರ್ಮಿಕರು ಟ್ರ‍್ಯಾಕ್ಟರ್ ಮೂಲಕ ಅಲ್ಲಿದ್ದ ತ್ಯಾಜ್ಯ ತೆಗೆದುಕೊಂಡು ಹೋಗಿದ್ದಾರೆ.

ಆದರೆ ಅಲ್ಲಿ ಉಳಿದ ಕೋಳಿ, ಮೀನಿನ ರಕ್ತ ಹಾಗೂ ಇನ್ನಿತರ ತ್ಯಾಜ್ಯಗಳು ಅಲ್ಲೇ ಉಳಿಕೆಯಾದ ಪರಿಣಾಮ ಹುಳುಗಳು ಸೊಳ್ಳೆಗಳು ಉತ್ಪಾತಿಗೊಂಡರೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.

ಈ ಭಾಗದಲ್ಲಿ 10ಕ್ಕೂ ಹೆಚ್ಚು ವಾಸದ ಮನೆಗಳಿದ್ದು, ಹಲವಾರು ಅಂಗಡಿಗಳು ಕೂಡ ಕಾರ್ಯಾಚರಿಸುತ್ತಿವೆ.

ಸೊಳ್ಳೆಗಳ ಹಾವಳಿ ಹೆಚ್ಚಾಗಿ ರೋಗದ ಭೀತಿ ಕಾಡುತ್ತಿದೆ. ಕೂಡಲೇ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ವಹಿಸುವಂತೆ ಸ್ಥಳೀಯ ಅಂಗಡಿ ಮಾಲೀಕರು, ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.

..............

ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ವಿಸ್ತಾರವಾಗಿದ್ದು, ಪ್ರತಿ ವಾರ್ಡ್‌ಗಳಿಗೂ ನಿಗದಿತ ಸಮಯದಲ್ಲಿ ತಲುಪಲು ಕಷ್ಟವಾಗುತ್ತಿದೆ. ಪಂಚಾಯಿತಿಯಲ್ಲಿ ಕಾರ್ಯನರ್ವಹಿಸುತ್ತಿರುವ ಟ್ರಾಕ್ಟರ್ ದುಃಸ್ಥಿತಿಯಲ್ಲಿದ್ದು, ಇದರಿಂದ ನಿಗದಿತ ಸೂಕ್ತ ಸಮಯದಲ್ಲಿ ಕಸ ವಿಲೇವಾರಿಗೊಳಿಸಲು ಕಷ್ಟವಾಗುತ್ತಿದೆ. ಈ ಕುರಿತು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಆದೇಶದ ಪ್ರತಿ ಸಿಕ್ಕಿದ ಕೂಡಲೇ ಸಮಸ್ಯೆ ಪರಿಹಾರಗೊಳ್ಳಲಿದೆ.

-ವಿ.ಜಿ.ಲೋಕೇಶ್‌, ಪಿಡಿಒ, ಸುಂಟಿಕೊಪ್ಪ ಗ್ರಾ.ಪಂ.