ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಾಂಡೇಶ್ವರ ಪೊಲೀಸ್ ಲೇನ್‌ನಲ್ಲಿ ನಿರ್ಮಾಣಗೊಂಡಿರುವ ಬಹುಮಹಡಿ ವಸತಿಗೃಹ ಉದ್ಘಾಟನೆಗೆ ಮೊದಲೇ ಬಿರುಕುಬಿಟ್ಟು, ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರಕ್ಕೆ ಸಾಕ್ಷಿಯಂತಿದೆ. ವಸತಿ ಸಮುಚ್ಚಯದ ಅಂತಿಮ ಮೇಲ್ಚಾವಣಿ ಸಂಪೂರ್ಣ ಬಿರುಕು ಬಿಟ್ಟಿದ್ದು, ಇಂತಹ ಕಟ್ಟಡದಲ್ಲಿ ವಾಸ ಮಾಡಲು ಪೊಲೀಸ್ ಸಿಬ್ಬಂದಿ ಆತಂಕಿತರಾಗಿದ್ದಾರೆ.ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಸೊಸೈಟಿ ಅಡಿಯಲ್ಲಿ 41ಕೋಟಿ ರು. ವೆಚ್ಚದಲ್ಲಿ ಮೂರು ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣಗೊಂಡಿದೆ. 2022ರ ನವೆಂಬರ್‌ನಲ್ಲಿ ಇದರ ಕಾಮಗಾರಿ ಆರಂಭಗೊಂಡಿದ್ದು, ಒಟ್ಟು 160 ಕ್ವಾಟ್ರಸ್‌ಗಳಿವೆ. ಇದೀಗ ಉದ್ಘಾಟನೆಗೆ ಸಜ್ಜಾಗಿ ನಿಂತಿರುವಾಗ ಕಾಮಗಾರಿಯೇ ಕಳಪೆಯಾಗಿರುವುದು ಬೆಳಕಿಗೆ ಬಂದಿದೆ. ಜನರು ಅಪರಾಧ ಕೃತ್ಯ ನಡೆದಾಗ ಪೊಲೀಸ್ ಠಾಣೆ ಕದ ತಟ್ಟುತ್ತಾರೆ. ಆದರೆ ಈಗ ಪೊಲೀಸ್ ವಸತಿ ಸಮುಚ್ಚಯದಲ್ಲೇ ಕಳಪೆ ಕಾಮಗಾರಿ ನಡೆದಿದೆ.ಮೇಲಿನ ಮಹಡಿ ಬಿರುಕು ಬಿಟ್ಟಿರುವುದಕ್ಕೆ ಪರ್ಯಾಯವಾಗಿ ಶೀಟ್ ಅಳವಡಿಸಬೇಕು. ಅಲ್ಲದೆ, ಕಳಪೆ ಕಾಮಗಾರಿ ತನಿಖೆ ನಡೆಸುವಂತೆ ಆಗ್ರಹ ಕೇಳಿಬಂದಿದೆ.
ಹಳೆ ಕ್ವಾಟ್ರಸ್‌ನಲ್ಲೂ ಬಿರುಕು:ಪೊಲೀಸ್ ಲೇನ್‌ನಲ್ಲಿ 2019ರ ಡಿ.10ರಂದು ಕೋಟಿ ಚೆನ್ನಯ ಎ ಮತ್ತು ಬಿ ಬ್ಲಾಕ್, ರಾಣಿ ಅಬ್ಬಕ್ಕ ಪೊಲೀಸ್ ಸಿಬ್ಬಂದಿ ವಸತಿ ಸಮುಚ್ಚಯವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದ್ದರು. ಆದರೆ ಉದ್ಘಾಟನೆ ನಡೆದು ಇನ್ನೂ 5 ವರ್ಷ ಪೂರ್ತಿಯಾಗಿಲ್ಲ. ಈಗಲೇ ವಸತಿ ಸಮುಚ್ಚಯದ ಗೋಡೆಗಳು ಬಿರುಕುಬಿಟ್ಟಿವೆ, ಮಹಡಿಯೂ ಸೋರುತ್ತಿದೆ. ಇಲ್ಲಿರುವ ಕೆಲವು ಪೊಲೀಸ್ ಸಿಬ್ಬಂದಿ ಈಗಾಗಲೇ ಕ್ವಾಟ್ರಸ್ ತೆರವು ಮಾಡಿ ನಗರದಲ್ಲೇ ಬೇರೆ ಕಡೆ ವಾಸವಾಗಿದ್ದಾರೆ.