ಚಾಂಗದೇವರ ಭಕ್ತರಿಗೆ ನೀರಿನ ಕೊರತೆ

| Published : Apr 01 2024, 12:48 AM IST

ಸಾರಾಂಶ

ಮಲಪ್ರಭಾ ನದಿಯಿಂದ ಪ್ರತಿವರ್ಷ ನೀರು ಹರಿಸಲಾಗುತ್ತದೆ. ಇದರಿಂದಾಗಿ ಹೋಳಿ ಹುಣ್ಣಿಮೆ ಹಾಗೂ ಚಾಂಗ್‌ದೇವರ ಜಾತ್ರೆಯ ಭಕ್ತರಿಗೆ ನೀರಿನ ಕೊರತೆಯಾಗಲ್ಲ. ಆದರೆ ಈ ವರ್ಷ ಸರ್ಕಾರ ನೀರು ಹರಿಸುವ ಗೋಜಿಗೆ ಹೋಗಿಲ್ಲ. ಇದರ ಪರಿಣಾಮ ಹಳ್ಳದಲ್ಲಿ ನೀರೇ ಇಲ್ಲ. ಇರುವ ಅಲ್ಪಸ್ವಲ್ಪ ನೀರಲ್ಲಿ ಭಕ್ತಗಣ ಸ್ನಾನ ಮಾಡಿ ಹೋಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಯಮನೂರು ಚಾಂಗದೇವರ ಭಕ್ತರು ಈ ವರ್ಷ ನೀರಿಗಾಗಿ ಪರದಾಡುವಂತಾಗಿದೆ. ಚಾಂಗದೇವರ ಜಾತ್ರೆಯ ವೇಳೆ ಮಲಪ್ರಭಾ ನದಿಯಿಂದ ಬೆಣ್ಣಿಹಳ್ಳಕ್ಕೆ ನೀರು ಬಿಟ್ಟಿಲ್ಲ. ಇದರಿಂದಾಗಿ ಪರದಾಡುವಂತಾಗಿದೆ.

ಯಮನೂರು ಚಾಂಗದೇವರ ಜಾತ್ರೆ ಈ ಭಾಗದಲ್ಲಿ ಅತ್ಯಂತ ವಿಶೇಷತೆಯಿಂದ ಕೂಡಿದೆ. ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಕರ್ನಾಟಕದ ಕಲಬುರಗಿ, ಯಾದಗಿರಿ, ಬೆಳಗಾವಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ.

ಸರಿಸುಮಾರು ತಿಂಗಳ ಕಾಲ ಜಾತ್ರೆ ನಡೆಯುತ್ತಲೇ ಇರುತ್ತದೆ. ಈ ಭಾಗದಲ್ಲಿ ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡಿ ಚಾಂಗದೇವರ ದರ್ಶನ ಪಡೆದರೆ, ಚರ್ಮರೋಗ ಬರಲ್ಲ ಎಂಬ ನಂಬುಗೆ ಇಲ್ಲಿನ ಭಕ್ತರದು. ಹೀಗಾಗಿ ಚಾಂಗದೇವರ ಜಾತ್ರೆಗೆ ಬರುವ ಭಕ್ತರ ದಂಡು ಇಲ್ಲಿ ಸ್ನಾನ ಮಾಡುವುದು ಮಾಮೂಲಿ. ಈ ಕಾರಣಕ್ಕಾಗಿಯೇ

ಮಲಪ್ರಭಾ ನದಿಯಿಂದ ಪ್ರತಿವರ್ಷ ನೀರು ಹರಿಸಲಾಗುತ್ತದೆ. ಇದರಿಂದಾಗಿ ಹೋಳಿ ಹುಣ್ಣಿಮೆ ಹಾಗೂ ಚಾಂಗ್‌ದೇವರ ಜಾತ್ರೆಯ ಭಕ್ತರಿಗೆ ನೀರಿನ ಕೊರತೆಯಾಗಲ್ಲ. ಆದರೆ ಈ ವರ್ಷ ಸರ್ಕಾರ ನೀರು ಹರಿಸುವ ಗೋಜಿಗೆ ಹೋಗಿಲ್ಲ. ಇದರ ಪರಿಣಾಮ ಹಳ್ಳದಲ್ಲಿ ನೀರೇ ಇಲ್ಲ. ಇರುವ ಅಲ್ಪಸ್ವಲ್ಪ ನೀರಲ್ಲಿ ಭಕ್ತಗಣ ಸ್ನಾನ ಮಾಡಿ ಹೋಗುತ್ತಿದೆ.

ಆಕ್ರೋಶ:

ಚಾಂಗದೇವರ ಜಾತ್ರೆಗೆ ಎಲ್ಲೆಲ್ಲಿಂದಲೂ ಜನರು ಬರುತ್ತಾರೆ. ಪ್ರತಿವರ್ಷ ಹಳ್ಳಕ್ಕೆ ನೀರು ಹರಿಸಲಾಗುತ್ತದೆ. ಆದರೆ ಈ ವರ್ಷ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಖಂಡನೀಯ. ಜಿಲ್ಲಾಡಳಿತ ಹಾಗೂ ಶಾಸಕರು ಕೂಡಲೇ ಬೆಣ್ಣಿಹಳ್ಳಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ.

ಭಕ್ತರಲ್ಲಿ ಮನವಿ:

ಇನ್ನು ಇಲ್ಲಿಗೆ ಬರುವ ಭಕ್ತರು ತಾವು ತೊಟ್ಟ ಬಟ್ಟೆಯ ತ್ಯಾಜ್ಯವನ್ನು ದಂಡೆಯ ಮೇಲೆ ಎಲ್ಲೆಂದರಲ್ಲಿ ಬಿಸಾಡಿರುತ್ತಾರೆ. ಬಟ್ಟೆ ಬರೆ ಸೇರಿದಂತೆ ಮತ್ತಿತರರ ತ್ಯಾಜ್ಯವನ್ನು ಬೆಣ್ಣಿಹಳ್ಳದ ದಂಡೆಯಲ್ಲೇ ಪ್ರತ್ಯೇಕ ಜಾಗದಲ್ಲಿಡುವ ಕೆಲಸವಾಗಬೇಕು. ಜತೆಗೆ ಇಲ್ಲಿನ ಸ್ಥಳೀಯ ಆಡಳಿತ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಮಹಾರಾಷ್ಟ್ರದ ಭಕ್ತ ರಮೇಶ ಎಂಬುವವರ ಒತ್ತಾಯ.