ಸಾರಾಂಶ
ಕನ್ನಡಪ್ರಭ ವಾರ್ತೆ ಉಚ್ಚಿಲ
ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಆಯೋಜನೆಯಲ್ಲಿ ಇಲ್ಲಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆಯುತ್ತಿರುವ 3ನೇ ವರ್ಷದ ಉಡುಪಿ-ಉಚ್ಚಿಲ ದಸರಾವು ಹೆಸರಿಗೆ ತಕ್ಕಂತೆ ವೈವಿಧ್ಯಮಯವಾಗಿ ವೈಭವಯುತವಾಗಿ ನಡೆಯುತ್ತಿದೆ.ಶನಿವಾರ ರಾತ್ರಿ ನಡೆದ ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಸುತ್ತಲೂ ಏಕಕಾಲದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 50ಕ್ಕೂ ಅಧಿಕ ತಂಡಗಳ 2 ಸಾವಿರಕ್ಕೂ ಅಧಿಕ ಮಂದಿ ಗಟ್ಟಿಯಾಗಿ ಭಜನೆ ಹಾಡುತ್ತಾ ಕುಣಿಯುತ್ತಾ, ಪರಿಸರವನ್ನು ಅಪೂರ್ವ ಭಕ್ತಿಯ ತಾಣವನ್ನಾಗಿ ಮಾಡಿದ್ದರು. ಈ ದಸರದ ರೂವಾರಿ ನಾಡೋಜ ಡಾ. ಜಿ. ಶಂಕರ್ ಈ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು.
ಭಾನುವಾರವಂತೂ ಸಾಲುಗಟ್ಟಿ ಉಭಯ ಜಿಲ್ಲೆಗಳಿಂದ ಬರುತ್ತಿದ್ದ ಭಕ್ತರ ಮನದಣಿಸಲು ಒಂದೆಡೆ ಕುಸ್ತಿ ಪಂದ್ಯಾಟವನ್ನು ಆಯೋಜಿಸಲಾಗಿದ್ದರೆ, ಇನ್ನೊಂದೆಡೆ ಮಹಿಳೆಯರಿಗಾಗಿಯೇ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ ರೋಮಾಂಚನಕಾರಿಯಾಗಿ ನಡೆಯಿತು.ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯನ್ನು ಪ್ರಾಯೋಜಕತ್ವ ವಹಿಸಿದ್ದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಉದ್ಘಾಟಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ತುಳು ಸಿನಿಮಾ ನಟ ಅರ್ಜುನ್ ಕಾಪಿಕಾಡ್ ಆಗಮಿಸಿದ್ದರು.
ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಮತ್ತು 42 ಮಂದಿ ವೈಯಕ್ತಿಕ ಸ್ಪರ್ಧಿಗಳು ವೇದಿಕೆ ಹುಡಿಹಾರುವಂತೆ ಕುಣಿದು ಕುಪ್ಪಳಿಸಿದರು. ತಾಸೆಯ ಸದ್ದು ಇಡಿ ದೇವಳದ ಪರಿಸರವನ್ನು ಆವರಿಸಿಕೊಂಡಿತ್ತು.ನಾಡೋಜ ಜಿ.ಶಂಕರ್ ಬಹುಮಾನಗಳನ್ನು ವಿತರಿಸಿದರು. ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೆರ, ಪ್ರಮುಖರಾದ ವಾಸುದೇವ ಸಾಲ್ಯಾನ್, ದಿನೇಶ್ ಮೂಳೂರು, ಗುಂಡು ಅಮೀನ್, ಆನಂದ್ ಸಿ.ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))