ಸಾರಾಂಶ
ತಾಲೂಕಿನ ಕಲ್ಲುಕಂಬ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಕೆರೆಯ ಪಿಚ್ಚಿಂಗ್ (ತಡೆಗೋಡೆ) ಉದ್ಘಾಟನೆಗೆ ಮುನ್ನವೇ ಕುಸಿದಿದ್ದು, ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ.
ಒಂದೂವರೆ ವರ್ಷದ ಹಿಂದೆ ₹4.14 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಪೂರ್ಣ । ಕಳಪೆ ಕಾಮಗಾರಿ ಆರೋಪ
ಬಾದನಹಟ್ಟಿ ಪಂಪನಗೌಡಕನ್ನಡಪ್ರಭ ವಾರ್ತೆ ಕುರುಗೋಡು
ತಾಲೂಕಿನ ಕಲ್ಲುಕಂಬ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಕೆರೆಯ ಪಿಚ್ಚಿಂಗ್ (ತಡೆಗೋಡೆ) ಉದ್ಘಾಟನೆಗೆ ಮುನ್ನವೇ ಕುಸಿದಿದ್ದು, ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ.ಕೆರೆಕೆರೆ, ಲಕ್ಷ್ಮೀಪುರ, ಶ್ರೀನಿವಾಸ ಕ್ಯಾಂಪ್, ಮುಷ್ಟಗಟ್ಟೆ ಗ್ರಾಮಗಳನ್ನು ಕಲ್ಲುಕಂಬ ಗ್ರಾಮ ಪಂಚಾಯಿತಿ ಒಳಗೊಂಡಿದ್ದು, ೧೧೦೦೦ ಸಾವಿರ ಜನಸಂಖ್ಯೆ ಇದೆ.
ಕಲ್ಲುಕಂಬ ಗ್ರಾಪಂ ವ್ಯಾಪ್ತಿಯ ಕೆರೆ ಬಳಿ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸುಮಾರು 15 ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಕಳೆದ ನಾಲ್ಕೈದು ವರ್ಷದ ಹಿಂದೆ ಕೆರೆಯಲ್ಲಿ ಪಾಚಿ ಸೇರಿ ಇತರ ಗಿಡಗಂಟಿ ಬೆಳೆದು ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಜತೆಗೆ ಕೆರೆಗೆ ತಂತಿ ಬೇಲಿ ಇಲ್ಲದ ಪರಿಣಾಮ ಜನರು ನೀರು ಮಲಿನ ಮಾಡುವ ಜತೆಗೆ ಕುಡುಕರ ಅಡ್ಡೆಯಾಗಿತ್ತು. ಜಲ ಜೀವನ್ ವಿಷನ್ ಯೋಜನೆ ಅಡಿ ಸೆಪ್ಟೆಂಬರ್ 2023ರಲ್ಲಿ ಕೇಂದ್ರ ಹಾಗೂ ರಾಜ್ಯದ ತಲಾ ₹1.96 ಕೋಟಿ ಅನುದಾನ ಹಾಗೂ ಸಮುದಾಯ ವಂತಿಗೆ ₹20.70 ಲಕ್ಷ ಮತ್ತು ಇತರ ಅನುದಾನ ಸೇರಿ ಒಟ್ಟು ಅಂದಾಜು ₹4.14 ಕೋಟಿ ವೆಚ್ಚದಲ್ಲಿ ಕೆರೆ ಪಿಚ್ಚಿಂಗ್ ಗ್ರಾವೆಲ್ ಸೇರಿ ಇತರ ಅಭಿವೃದ್ಧಿ ಕಾರ್ಯ ಮಾಡಲಾಗಿತ್ತು. ಒಂದೂವರೆ ವರ್ಷದ ಹಿಂದೆ ಪೂರ್ಣಗೊಳಿಸಲಾಗಿತ್ತು. ಆದರೆ ಉದ್ಘಾಟಿಸಿ ಗ್ರಾಪಂ ಹಸ್ತಾಂತರಿಸಬೇಕಾಗಿತ್ತು. ಆದರೆ ಇತ್ತೀಚೆಗೆ ಸುರಿದ ಮಳೆಗೆ ಪಿಚ್ಚಿಂಗ್ ಕುಸಿದು ಕೆರೆಯ ಒಡಲು ಸೇರಿದೆ. ಕೇವಲ ಒಂದೂವರೆ ವರ್ಷದಲ್ಲೇ ತಡೆಗೋಡೆ ಕುಸಿತ ಕಂಡಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಪ್ರತಿ ವರ್ಷ ಕಾಲುವೆಗೆ ನೀರು ಬಂದ ಸಂದರ್ಭದಲ್ಲಿ ನೀರು ಸೋರಿಕೆ ಆಗುವುದನ್ನು ತಡೆಗಟ್ಟಿದರೆ ಸ್ವಲ್ಪಮಟ್ಟಿಗೆ ನೀರಿನ ಸಮಸ್ಯೆ ನೀಗಿಸಬಹುದು. ಆದರೆ ಅದು ಆಗದೆ ಇರುವುದು ದುರಂತದ ಸಂಗತಿ. ಸೋರಿಕೆ ಆಗುವ ನೀರನ್ನು ಕೆಲವು ಖಾಸಗಿ ರೈತರು ಅಕ್ರಮವಾಗಿ ಕೆರೆಯ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ.ಕೆರೆಯಲ್ಲಿ ಪಾಚಿ, ಗಿಡಗಂಟೆ:
ಸೋಮಲಾಪುರ ಬಳಿ ಹಾದು ಹೋಗುವ ಎಲ್ಎಲ್‌ಸಿ ಕಾಲುವೆಯಿಂದ ಪೈಪ್ ಲೈನ್ ಮೂಲಕ ಕೆರೆಗೆ ನೀರು ತುಂಬಿಸಲಾಗುತ್ತದೆ. ಬಳಿಕ ನೀರನ್ನು ಫಿಲ್ಟರ್ ಮೂಲಕ ಗ್ರಾಮದ ಟ್ಯಾಂಕ್‌ಗೆ ಸರಬರಾಜು ಮಾಡುವ ಮೂಲಕ ಮನೆಯ ನಲ್ಲಿಗೆ ನೀರು ತಲುಪಿಸಲಾಗುತ್ತದೆ. ಸದ್ಯ ಕೆರೆಯಲ್ಲಿ ಮೂರು ಅಡಿ ನೀರು ಮಾತ್ರ ಇದ್ದು ಎಲ್ಲೆಂದರಲ್ಲಿ ಪಾಚಿ ಕಟ್ಟಿದೆ. ಹುಳು, ಗಿಡಗಂಟೆ ಬೆಳೆದಿದ್ದು ನೀರು ಮಲಿನವಾಗಿದೆ.ಲಕ್ಷ್ಮೀಪುರಕ್ಕೆ ತಲುಪದ ನೀರು:ಕಲ್ಲುಕಂಬ, ಕೆರೆಕೆರೆ ಗ್ರಾಮಕ್ಕೆ ಆಗೊಮ್ಮೆ, ಈಗೊಮ್ಮೆ ನೀರು ಸರಬರಾಜು ಬಿಟ್ಟರೆ ಈ ವರೆಗೂ ಲಕ್ಷ್ಮೀಪುರ ಗ್ರಾಮಕ್ಕೆ ಕೆರೆಯ ನೀರು ತಲುಪುತ್ತಿಲ್ಲ. ಕಾರಣ ಕೇಳಿದರೆ ಅಧಿಕಾರಿಗಳು ನೀರಿನ ಪಂಪ್ ಮತ್ತು ಪೈಪ್‌ಲೈನ್‌ನಲ್ಲಿ ದೋಷ ಇರುವ ಸಬೂಬು ಹೇಳುತ್ತಿದ್ದು, ಈ ವರೆಗೂ ಸರಿಪಡಿಸಿಲ್ಲ.