ಜೀವಜಲ ಕಾರ್ಯಪಡೆ ಅಭಿವೃದ್ಧಿಪಡಿಸಿದ ಕೆರೆ, ಶಿರಸಿ ನಗರಸಭೆಯಿಂದ ಮೀನು ಸಾಕಾಣಿಕೆಗೆ ಹರಾಜು?

| Published : Jan 30 2024, 02:03 AM IST

ಜೀವಜಲ ಕಾರ್ಯಪಡೆ ಅಭಿವೃದ್ಧಿಪಡಿಸಿದ ಕೆರೆ, ಶಿರಸಿ ನಗರಸಭೆಯಿಂದ ಮೀನು ಸಾಕಾಣಿಕೆಗೆ ಹರಾಜು?
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ ಜೀವಜಲ ಕಾರ್ಯಪಡೆ ಹೂಳೆತ್ತಿ ಅಭಿವೃದ್ಧಿಗೊಳಿಸಿರುವ ಕೆರೆಗಳನ್ನು ಮೀನು ಸಾಕಾಣಿಕೆದಾರರಿಗೆ ಟೆಂಡರ್ ಮೂಲಕ ನೀಡಲು ನಗರಸಭೆ ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಿರಸಿ: ಶಿರಸಿ ಜೀವಜಲ ಕಾರ್ಯಪಡೆ ಹೂಳೆತ್ತಿ ಅಭಿವೃದ್ಧಿಗೊಳಿಸಿರುವ ಕೆರೆಗಳನ್ನು ಮೀನು ಸಾಕಾಣಿಕೆದಾರರಿಗೆ ಟೆಂಡರ್ ಮೂಲಕ ನೀಡಲು ನಗರಸಭೆ ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ನಗರದ ಬಸಟ್ಟಿ ಕೆರೆಯನ್ನು ಕಳೆದೊಂದು ವರ್ಷದಿಂದ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ತಮ್ಮ ಸ್ವಂತ ಹಣದಿಂದ ಅಭಿವೃದ್ಧಿಗೊಳಿಸುತ್ತಿದ್ದಾರೆ. ಆದರೆ ಇದನ್ನು ತಮ್ಮ ವ್ಯಾಪ್ತಿಗೆ ಒಳಪಟ್ಟ ಕೆರೆ ಎಂಬ ಏಕೈಕ ಉದ್ದೇಶದಿಂದ ಕೆರೆಯನ್ನು ಮೀನು ಸಾಕಾಣಿಕೆದಾರರಿಗೆ ಹರಾಜಿನಲ್ಲಿ ನೀಡಲು ಶಿರಸಿ ನಗರಸಭೆ ಪ್ರಯತ್ನ ನಡೆಸಿದೆ. ಕಳೆದ ೬ ವರ್ಷಗಳಿಂದ ಶಿರಸಿ ಜೀವಜಲ ಕಾರ್ಯಪಡೆಯಿಂದ ಶಿರಸಿ ನಗರದ ಆನೆಹೊಂಡ, ಬೆಳ್ಳಕ್ಕಿ ಕೆರೆ, ರಾಯನ ಕೆರೆ, ತಾಲೂಕಿನ ಜೈನ ಮಠದ ಕೆರೆ ಹೀಗೆ ಹತ್ತು ಹಲವಾರು ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಅದರಲ್ಲೂ ಶಿರಸಿಯ ಶಂಕರಹೊಂಡದ ಅಭಿವೃದ್ಧಿಯಿಂದ ಸಾವಿರಾರು ಭಕ್ತರಿಗೆ, ಸಾರ್ವಜನಿಕರಿಗೆ ಅನುಕೂಲ ಆಗಿದೆ. ಜತೆಗೆ ಪ್ರತಿ ತಿಂಗಳು ₹೨೦ರಿಂದ ೨೫ ಸಾವಿರ ಹಣವನ್ನು ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಖರ್ಚು ಮಾಡುತ್ತಿದ್ದು, ಎಲ್ಲವೂ ಸಾರ್ವಜನಿಕ ಕೆಲಸವಾಗಿದೆ.ಅದೇ ರೀತಿ ಹಾಳು ಬಿದ್ದಿದ್ದ ಬಸಟ್ಟಿ ಕೆರೆಯನ್ನು ಕಳೆದೊಂದು ವರ್ಷದಿಂದ ಅಭಿವೃದ್ಧಿ ಪಡಿಸುತ್ತಿದ್ದು, ಸ್ವತಃ ಹೆಬ್ಬಾರ್ ಅವರೇ ನಿಂತು ಕೆರೆ ಏರಿ ಮಾಡಿ ಹೂಳು ತೆಗೆಯುವ ಕೆಲಸ ಮಾಡಲಾಗುತ್ತಿದೆ. ಬಸಟ್ಟಿ ಕೆರೆ ಅಂದಾಜು ೩ ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಅದರ ಅಭಿವೃದ್ಧಿಗೆ ಈಗಾಗಲೇ ಜೀವಜಲ ಕಾರ್ಯಪಡೆಯಿಂದ ಹೆಬ್ಬಾರ್ ಅವರು ₹೬೦ ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದ್ದಾರೆ. ಜತೆಗೆ ಕೆರೆ ನೀರು ಸ್ವಚ್ಛವಾಗಲೆಂದು ಮೀನುಗಳನ್ನೂ ಬಿಡಲಾಗಿದೆ. ಇನ್ನೂ ಹೂಳೆತ್ತುವುದು ಬಾಕಿಯಿದ್ದು, ಅಭಿವೃದ್ಧಿ ಕೆಲಸ ಮಾಡುವುದೂ ಹೆಬ್ಬಾರ್ ಅವರ ಆಲೋಚನೆಯಲ್ಲಿದೆ ಎಂದು ನಿಕಟವರ್ತಿಗಳು ತಿಳಿಸಿದ್ದಾರೆ. ಈಗ ನಗರಸಭೆಯಿಂದ ಕೆರೆಯನ್ನು ೩ ವರ್ಷಗಳ ಕಾಲ ಟೆಂಡರ್ ಕೊಡಲು ತೀರ್ಮಾನಿಸಲಾಗಿದೆ ಎಂದು ಕೆಲವು ನಗರಸಭೆ ಸದಸ್ಯರು ತಿಳಿಸಿದ್ದಾರೆ. ಈ ತೀರ್ಮಾನ ಸರಿಯಲ್ಲ, ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಈ‌ ಬಗ್ಗೆ ಪರಿಶೀಲನೆ ನಡೆಸಲಿ ಎಂಬ ಆಗ್ರಹ ವ್ಯಕ್ತವಾಗಿದೆ.