ಹಂಪಿ ಉತ್ಸವದಲ್ಲಿ ಧ್ವನಿ, ಬೆಳಕಿನ ರಸದೌತಣ

| Published : Jan 30 2024, 02:03 AM IST

ಸಾರಾಂಶ

ಹಂಪಿ ಉತ್ಸವದಲ್ಲಿ ಫೆ. 2ರಿಂದ ಏಳು ದಿನಗಳವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಫೆ. 2ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಹಂಪಿ ಉತ್ಸವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಗಜಶಾಲೆ ಆವರಣದಲ್ಲಿ ನಡೆಯಲಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಧ್ವನಿ ಮತ್ತು ಬೆಳಕಿನಲ್ಲಿ ಸ್ಥಳೀಯ ಕಲಾವಿದರೇ ಕಟ್ಟಿಕೊಡುವ ಈ ಕಾರ್ಯಕ್ರಮಕ್ಕೆ ಭಾರೀ ಬೇಡಿಕೆ ಇದೆ. ಹಾಗಾಗಿ ಜಿಲ್ಲಾಡಳಿತ ಆಸ್ಥೆವಹಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಿದೆ.

ಹಂಪಿ ಉತ್ಸವದಲ್ಲಿ ಫೆ. 2ರಿಂದ ಏಳು ದಿನಗಳವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಫೆ. 2ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ, ಸಾಮ್ರಾಜ್ಯದ ವಿಸ್ತರಣೆ, ಪ್ರಜೆಗಳ ಸುಭಿಕ್ಷೆ, ಸಂಪದ್ಭರಿತ ನಾಡು, ಸಾಹಿತಿ, ಕಲಾವಿದರಿಗೆ ಪ್ರೋತ್ಸಾಹ ಸೇರಿದಂತೆ ವಿಜಯನಗರ ಸಾಮ್ರಾಜ್ಯದ ಸಮಗ್ರ ಕಥನವನ್ನು ಕಲಾವಿದರು ಉಣಬಡಿಸಲಿದ್ದಾರೆ. ಹಾಗಾಗಿ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವ ಈ ಕಾರ್ಯಕ್ರಮ ಈಗ ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.

ಜೀವಂತ ಆನೆ, ಕುದುರೆ ಬಳಕೆ: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ಜೀವಂತ ಆನೆ ಹಾಗೂ ಕುದುರೆಗಳನ್ನು ಬಳಕೆ ಮಾಡಿಕೊಡಲಾಗುತ್ತದೆ. ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ 125 ಕಲಾವಿದರು ಭಾಗವಹಿಸಲಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನ ವೀಕ್ಷಿಸುತ್ತಾರೆ. ಹಂಪಿ ಉತ್ಸವ ನಾಡಿನ ಕಲೆಯನ್ನು ಅನಾವರಣಗೊಳಿಸುತ್ತದೆ. ಅದರಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವಿಜಯನಗರ ಸಾಮ್ರಾಜ್ಯದ ಗತವೈಭವ ಕಟ್ಟಿಕೊಡುತ್ತದೆ. ವಿಜಯನಗರ ಸಾಮ್ರಾಜ್ಯದ ಪತನದ ಕಥನ ಕೂಡ ಈ ಕಾರ್ಯಕ್ರಮ ಒಳಗೊಂಡಿದೆ. ಹಾಗಾಗಿ ಇತಿಹಾಸಪ್ರಿಯರು, ಸಾಹಿತ್ಯಾಸಕ್ತರು, ಸಂಶೋಧಕರು, ಸಂಶೋಧನಾರ್ಥಿಗಳು, ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು, ವಕೀಲರು ಈ ಕಾರ್ಯಕ್ರಮದ ವೀಕ್ಷಣೆಗೆ ಹಾತೊರೆಯುತ್ತಾರೆ. ಹಂಪಿ ಉತ್ಸವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಬೇಡಿಕೆ ಇರುವುದನ್ನು ಗಮನಿಸಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರು ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ, ಈ ಕಾರ್ಯಕ್ರಮದ ಆಯೋಜನೆಗೆ ಕಾರಣಿಭೂತರಾಗಿದ್ದಾರೆ.

ಧ್ವನಿ ಮತ್ತು ಬೆಳಕು: ಹಂಪಿ ಉತ್ಸವ ಫೆ. 2,3,4ರಂದು ನಡೆಯಲಿದೆ. ಹಂಪಿ ಉತ್ಸವದ ಮುಗಿದ ಬಳಿಕವೂ ಫೆ. 8ರ ವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ. ಆನೆಲಾಯದ ಪ್ರಾಂಗಣದಲ್ಲಿ ಸುಮಾರು 10ರಿಂದ 12 ಕಿರು ವೇದಿಕೆಗಳಲ್ಲಿ ನೂರಕ್ಕೂ ಅಧಿಕ ಕಲಾವಿದರು ಕಲಾರಸಿಕರ ಮನಸೂರೆಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕ, ರಥಬೀದಿಯಲ್ಲಿ ವಜ್ರ ವೈಢೂರ್ಯ ಮಾರಾಟ, ಶ್ರೀಕೃಷ್ಣದೇವರಾಯರ ಕುಸ್ತಿ ಪಂದ್ಯಾವಳಿ, ಸೈನಿಕರ ಓಡಾಟ, ಅರಮನೆ ವೈಭೋಗ ಸೇರಿದಂತೆ ಸಾಮ್ರಾಜ್ಯದ ಗತವೈಭವವನ್ನು ಈ ಕಾರ್ಯಕ್ರಮ ಉಣಬಡಿಸಲಿದೆ.

ನಾಡಿನ ಐತಿಹ್ಯವನ್ನು ಪರಿಚಯಿಸುವ ಉದ್ದೇಶದಿಂದ ಸರ್ಕಾರ 1970ರಲ್ಲಿ ಮೊದಲ ಬಾರಿಗೆ ಕಮಲ ಮಹಲ್‌ನಲ್ಲಿ ಉತ್ಸವವನ್ನು ಆಯೋಜಿಸಿತ್ತು. ಹಂಪಿ ಉತ್ಸವದ ರೂವಾರಿ ಎಂ.ಪಿ. ಪ್ರಕಾಶ್ ಅವರು ಮುತುವರ್ಜಿ ವಹಿಸಿದ್ದರಿಂದ 1996ರಿಂದ ಹಂಪಿ ಉತ್ಸವದಲ್ಲಿ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಪ್ರದರ್ಶನ ಆರಂಭಗೊಂಡಿತು. ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ನಾಟಕ ಅಕಾಡೆಮಿಯಿಂದ ಪರವಾನಗಿ ದೊರೆತಾಗ ಮಾತ್ರ; ಬೆಳಕು, ಧ್ವನಿ ಸಂಯೋಜಿತ ತಂತ್ರಜ್ಞಾನದ ಪರಿಕರಗಳನ್ನು ಒದಗಿಸಲಾಗುತ್ತದೆ. ಉತ್ಸವಕ್ಕೂ ಒಂದು ತಿಂಗಳ ಮುನ್ನ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಕಡ್ಡಾಯವಾಗಿದೆ. ಕಲಾವಿದರಿಗೆ ತರಬೇತಿಯೂ ಆರಂಭಗೊಂಡಿದೆ. ಕೇಂದ್ರ ಸರ್ಕಾರದ ನಾಟಕ ಅಕಾಡೆಮಿಯಿಂದ ದೆಹಲಿ, ಹೈದರಾಬಾದ್, ಚೆನ್ನೈ, ಪುಣೆ ಹಾಗೂ ಬೆಂಗಳೂರು ಕೇಂದ್ರಗಳಿಂದ ತಂತ್ರಜ್ಞರು ಪರಿಕರಗಳೊಂದಿಗೆ ಬಂದಿದ್ದಾರೆ. ಹಂಪಿ ಉತ್ಸವ ರಂಗೇರಿಸಲಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪ್ರೇಕ್ಷಕರನ್ನು ಹಿಡಿದಿಡುವುದರಲ್ಲಿ ಸಂಶಯವಿಲ್ಲ.ಕಲಾವಿದರು ಸಜ್ಜು: ಹಂಪಿ ಉತ್ಸವದಲ್ಲಿ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಕಲಾವಿದರು ಸಜ್ಜಾಗಿದ್ದಾರೆ. ಗಜಶಾಲೆ ಆವರಣದಲ್ಲಿ ಕಿರುವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಏಳು ದಿನಗಳವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ತಿಳಿಸಿದರು.