ವಕ್ಫ್‌ ಬೋರ್ಡ್‌ಗೆ ಕೆರೆ ಜಾಗ ಖಾತೆ

| Published : Nov 11 2024, 11:49 PM IST

ಸಾರಾಂಶ

ವಕ್ಫ್ ಬೋರ್ಡ್‌ ಹೆಸರಿಗೆ ಸರ್ಕಾರಿ ಕೆರೆಯನ್ನ ಖಾತೆ ಮಾಡಿರುವುದನ್ನ ಖಂಡಿಸಿ ಪಟ್ಟಣದ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು. ಖಾತೆ ರದ್ದುಗೊಳ್ಳದಿದ್ದರೆ ಅರಕಲಗೂಡು ಬಂದ್‌ಗೆ ಕರೆ ಕೊಡುವ ಎಚ್ಚರಿಕೆ ನೀಡಿದರು. ನಾಗರಿಕರು ತಾಲೂಕು ಕಚೇರಿಯ ಮುಂದೆ ಪ್ರತಿಭಟಿಸಿ ಖಾತೆ ರದ್ದತಿಗೆ ಉಪತಹಸೀಲ್ದಾರ್‌ ಮಲ್ಲಿಕಾರ್ಜುನ್‌ರವರ ಮೂಲಕ ಮನವಿ ಸಲ್ಲಿಸಿ 15 ದಿನಗಳಲ್ಲಿ ಖಾತೆ ರದ್ದಾಗದಿದ್ದರೆ ಅರಕಲಗೂಡು ಬಂದ್‌ಗೆ ಕರೆಕೊಡುವುದಾಗಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ವಕ್ಫ್ ಬೋರ್ಡ್‌ ಹೆಸರಿಗೆ ಸರ್ಕಾರಿ ಕೆರೆಯನ್ನ ಖಾತೆ ಮಾಡಿರುವುದನ್ನ ಖಂಡಿಸಿ ಪಟ್ಟಣದ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು. ಖಾತೆ ರದ್ದುಗೊಳ್ಳದಿದ್ದರೆ ಅರಕಲಗೂಡು ಬಂದ್‌ಗೆ ಕರೆ ಕೊಡುವ ಎಚ್ಚರಿಕೆ ನೀಡಿದರು.

ಪಟ್ಟಣದ ಹೊಳೆನರಸೀಪುರ ರಸ್ತೆಯಲ್ಲಿರುವ ಸರ್ವೆ ನಂ 120ರಲ್ಲಿ ನಾಲ್ಕು ಎಕರೆ ಹತ್ತು ಗುಂಟೆ ಪ್ರದೇಶ ಭೂಮಿಯನ್ನ ಸಕಲೇಶಪುರ ಉಪವಿಭಾಗಾಧಿಕಾರಿಗಳು ಏಕಾಏಕಿ ವಕ್ಫ್‌ ಬೋರ್ಡ್‌ಗೆ ಖಾತೆ ಮಾಡಿರುವುದು ಕಾನೂನುಬಾಹಿರವಾಗಿದೆ. ಈ ಸ್ಥಳವು ತಲತಲಾಂತರದಿಂದಲೂ ಸರ್ಕಾರಿ ಕೆರೆಯಾಗಿದ್ದು, ಈ ಸ್ಥಳದಲ್ಲಿ ಪ್ರತೀ ವರ್ಷ ಸುತ್ತ ಮುತ್ತಲಿನ ಜನರು ಗೌರಿ ವಿಸರ್ಜನೆ ಮಾಡುತ್ತಾ ಬರುತ್ತಿದ್ದರೂ ಇಂತಹ ಪವಿತ್ರ ಸ್ಥಳವನ್ನ ಈಗ ವಕ್ಫ್‌ ಬೋರ್ಡ್‌ಗೆ ಖಾತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳ ನಡೆಯ ವಿರುದ್ಧ ಕಿಡಿಕಾರಿದ ನಾಗರಿಕರು ತಾಲೂಕು ಕಚೇರಿಯ ಮುಂದೆ ಪ್ರತಿಭಟಿಸಿ ಖಾತೆ ರದ್ದತಿಗೆ ಉಪತಹಸೀಲ್ದಾರ್‌ ಮಲ್ಲಿಕಾರ್ಜುನ್‌ರವರ ಮೂಲಕ ಮನವಿ ಸಲ್ಲಿಸಿ 15 ದಿನಗಳಲ್ಲಿ ಖಾತೆ ರದ್ದಾಗದಿದ್ದರೆ ಅರಕಲಗೂಡು ಬಂದ್‌ಗೆ ಕರೆಕೊಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ವಾಟಾಳ್ ರಮೇಶ್, ಸರ್ಕಾರದ ಆಸ್ತಿಯನ್ನ ರಕ್ಷಿಸಿಕೊಳ್ಳಬೇಕಾದವರೇ ಕಾನೂನು ಬಾಹಿರವಾಗಿ ಯಾವುದೋ ಒಂದು ಸಮುದಾಯಕ್ಕೆ ಖಾತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಈ ಪ್ರಕರಣ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶಕ್ಕಾಗಿ ಕಾಯ್ದಿರಸಲಾಗಿದ್ದರೂ ಏಕಾಏಕಿ ಖಾತೆ ಮಾಡಿರುವುದು ಸರಿಯಲ್ಲ. ಈ ಸ್ಥಳದಲ್ಲಿ ಈಗಾಗಲೇ ಅಕ್ರಮವಾಗಿ 4-5 ಮನೆಗಳನ್ನು ನಿರ್ಮಿಸಲಾಗಿದೆ ಇದನ್ನು ಸಹ ಸಂಬಂಧಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರುಗಳಾದ ದೊಡ್ಡಮ್ಮ ಸೇವಾ ಸಮಿತಿಯ ಅಧ್ಯಕ್ಷ ಎ.ಎಸ್. ರಾಮಸ್ವಾಮಿ, ಕಾರ್ಯದರ್ಶಿ ಶಶಿಕುಮಾರ್, ಹಿರಿಯ ಪತ್ರಕರ್ತ ಸುಬ್ಬರಾವ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎನ್. ರವಿಕುಮಾರ್‌, ಪ್ರಶಾಂತ್ (ಕಚ್ಚೆ) ನಾಗೇಂದ್ರ, ವಕಾರೇ, ರಘು ಮೊದಲಾದವರು ಉಪಸ್ಥಿತರಿದ್ದರು.