ಸಾರಾಂಶ
ಸಂಡೂರು: ಸಂಡೂರನ್ನು ಬೀಜಿಂಗ್, ಸಿಂಗಾಪುರ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರದಲ್ಲಿ ಹೇಳಿದ್ರು. ಹಾಗಾದರೆ ಗಂಗಾವತಿ ಯಾಕಿನ್ನು ಬೀಜಿಂಗ್, ಸಿಂಗಾಪುರ ಆಗಿಲ್ಲ? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಗಂಗಾವತಿಯನ್ನು ಸಿಂಗಾಪುರ ಮಾಡುವುದಾಗಿ ಹೇಳಿದ್ದರು. ಆದರೆ, ಯಾಕಿನ್ನು ಸಿಂಗಾಪುರ ಆಗಿಲ್ಲ? ಗಂಗಾವತಿ ಈಗ ಹೇಗಿದೆ? ಸಿಂಗಾಪುರ ಆಗಿದೆಯೇ? ಎಂದು ಕೇಳಿದರಲ್ಲದೆ, ಸಂಡೂರು ಬೀಜಿಂಗ್, ಸಿಂಗಾಪುರ ಆಗಲು ಸಾಧ್ಯವೇ? ಸುಮ್ಮನೆ ಮಾತನಾಡಿದರೆ ಏನೂ ಪ್ರಯೋಜನವಿಲ್ಲ. ಆಗೋದನ್ನಷ್ಟೇ ಮಾತನಾಡಬೇಕು. ಸಂಡೂರು ಕ್ಷೇತ್ರದ ಮತದಾರರು ಪ್ರಜ್ಞಾವಂತರಿದ್ದು, ರೆಡ್ಡಿಯ ಬೀಜಿಂಗ್, ಸಿಂಗಾಪುರ ಕನಸಿನ ಕನವರಿಕೆಯ ಮಾತುಗಳಿಗೆ ನಮ್ಮ ಜನರು ಮರುಳಾಗುವುದಿಲ್ಲ ಎಂದರು.ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಮಾಡಿದ್ದಾರೆ. ಚುನಾವಣೆ ಬಳಿಕವೂ ಸಂಡೂರಿನಲ್ಲಿಯೇ ಉಳಿಯುತ್ತಾರಾ? ಜನರನ್ನು ದಿಕ್ಕು ತಪ್ಪಿಸುವ ತಂತ್ರವನ್ನು ಬಿಜೆಪಿಯವರು ಮಾಡುತ್ತಾರೆ. ತುಕಾರಾಂ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಹಳ್ಳಿಹಳ್ಳಿಗಳಲ್ಲೂ ಕಾಂಗ್ರೆಸ್‌ನ ಅಭಿವೃದ್ಧಿಯ ಕೆಲಸಗಳು ಕಾಣುತ್ತವೆ. ಕ್ಷೇತ್ರದಲ್ಲಿ ಕೆಲಸ ಮಾಡುವವರು ಯಾರು? ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವವರು ಯಾರು ಎಂಬುದು ಮತದಾರರಿಗೆ ಮನವರಿಕೆಯಿದೆ. ಹೀಗಾಗಿ ಬಿಜೆಪಿಯವರು ಏನೇ ಸುಳ್ಳು ಹೇಳಿದರೂ ಮತದಾರರು ನಂಬುವುದಿಲ್ಲ. ಬಿಜೆಪಿ ಅಭ್ಯರ್ಥಿ ಸ್ಥಳೀಯರಲ್ಲ. ಕಾಂಗ್ರೆಸ್ ಅಭ್ಯರ್ಥಿ ಸ್ಥಳೀಯರು. ಸ್ಥಳೀಯರನ್ನು ಗೆಲ್ಲಿಸಿಕೊಳ್ಳಬೇಕು ಎಂದು ಮತದಾರರು ತೀರ್ಮಾನಿಸಿದ್ದಾರೆ.
ಸಂಡೂರು ಈ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ನ ಗೆಲುವಿನ ಓಟ ಮುಂದುವರಿಯಲಿದೆ ಎಂದು ಸಚಿವ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.ಸಿಎಂ, ಡಿಸಿಎಂ ಸೇರಿದಂತೆ ಪಕ್ಷದ ನಾಯಕರ ಆಗಮನ ಹಾಗೂ ಪ್ರಚಾರದಿಂದ ಸಾಕಷ್ಟು ಅನುಕೂಲವಾಗಿದೆ. ಕ್ಷೇತ್ರದ ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಕಾಂಗ್ರೆಸ್‌ಗೆ ಸಿಕ್ಕಿರುವ ಜನಬೆಂಬಲ ನೋಡಿ ಬಿಜೆಪಿಯವರಿಗೆ ಭಯ ಶುರುವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.