ಸಾರಾಂಶ
ಹೊಸಪೇಟೆ: ಓಬವ್ವಳ ಅಗಾಧ ಧೈರ್ಯ ಮತ್ತು ಪ್ರತಿಕೂಲತೆಯಲ್ಲಿ ಹೋರಾಟ ಮಾಡುವ ಶಕ್ತಿ ನಮ್ಮ ರಾಜ್ಯದ ಮಹಿಳೆಯರಿಗೆ ಬರಲಿ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ನಗರದ ಛಲವಾದಿ ಕೇರಿಯಲ್ಲಿ ಸೋಮವಾರ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೀರವನಿತೆ ಒನಕೆ ಓಬವ್ವ ನಮ್ಮ ಇತಿಹಾಸದಲ್ಲಿ ಅಸಾಧಾರಣ ಶೌರ್ಯ ಮತ್ತು ಧೈರ್ಯದ ಸಂಕೇತವಾಗಿ ನೆನಪಾಗುವ ಮಹಾನ್ ಮಹಿಳೆ. ಓಬವ್ವಳ ಧೈರ್ಯ, ಆತ್ಮವಿಶ್ವಾಸ, ಪ್ರತಿಕೂಲತೆಯಲ್ಲಿ ಹೋರಾಟ ಮಾಡುವ ಶಕ್ತಿ ಮತ್ತು ಪರಿವಾರ ಮತ್ತು ಸಮಾಜದ ರಕ್ಷಣಾ ಬಾಧ್ಯತೆಯ ಗುಣಗಳು ರಾಜ್ಯದ ಎಲ್ಲ ಮಹಿಳೆಯರು ರೂಢಿಸಿಕೊಳ್ಳಬೇಕು ಎಂದರು.
ಚಿತ್ರದುರ್ಗ ಕೋಟೆಯನ್ನು ಹಲವಾರು ರಾಜ ಮನೆತನಗಳು ಆಳಿದರು, ಪಾಳೆಗಾರರು ಚಿತ್ರದುರ್ಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು. ಓಬವ್ವ ಯಾವುದೇ ಹುದ್ದೆಯಲ್ಲಿ ಇಲ್ಲದಿದ್ದರು, ತಮ್ಮ ಧೈರ್ಯ, ಸಾಹಸದಿಂದ ರಾಜ್ಯಕ್ಕೆ ಮಾದರಿಯಾಗಿದ್ದಾಳೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಮಾತನಾಡಿ, ನಾವು ವೀರ ವನಿತೆಯ ವೀರಗಾಥೆಯನ್ನು ಕೇಳುತ್ತಾ ಬೆಳೆದವರು. ಹೈದರಾಲಿಯು ಚಿತ್ರದುರ್ಗದ ಮೇಲೆ ಹಠಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಓಬವ್ವ ಇಂದಿಗೂ ನಮ್ಮ ಮನಗಳಲ್ಲಿ ಮರೆಯಲಾಗದ ಮಾಣಿಕ್ಯವಾಗಿದ್ದಾರೆ ಎಂದರು.
ಓಬವ್ವ ಭಾವ ಚಿತ್ರ ಮೆರವಣಿಗೆ:ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಕಲಾ ತಂಡಗಳನ್ನು ಒಳಗೊಂಡ ಮೆರವಣಿಗೆಯು ನಗರದ ಛಲವಾದಿ ಓಣಿಯಿಂದ ಮದಕರಿ ನಾಯಕ ವೃತ್ತ, ನಗರಸಭೆ ಕಚೇರಿ, ಟೌನ್ ಪೊಲೀಸ್ ಠಾಣೆ, ಪುನೀತ್ ಸರ್ಕಲ್ ಮತ್ತು ಅಂಬೇಡ್ಕರ್ ವೃತ್ತದ ವರೆಗೆ ವೀರವನಿತೆ ಓಬವ್ವ ಭಾವ ಚಿತ್ರದ ಮೆರವಣಿಗೆ ನಡೆಯಿತು.
ಸಹಾಯಕ ಆಯುಕ್ತ ವಿವೇಕಾನಂದ.ಪಿ, ತಹಸೀಲ್ದಾರ್ ಶೃತಿ ಎಂ.ಎಂ., ನಗರಸಭೆ ಪೌರಾಯುಕ್ತ ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ಹಾಗೂ ಛಲವಾದಿ ಕೇರಿ ಮುಖಂಡರು ಇದ್ದರು.ಹೊಸಪೇಟೆಯಲ್ಲಿ ಸೋಮವಾರ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿದರು.