ಕನಕಾಚಲಪತಿ ದೇಗುಲದಲಿ ಬೆಳಗಿದ ಲಕ್ಷ ದೀಪಗಳು

| Published : Dec 13 2023, 01:00 AM IST

ಸಾರಾಂಶ

ಕನಕಗಿರಿತಾಲೂಕಾಡಳಿತ, ಕನಕಾಚಲಪತಿ ವ್ಯವಸ್ಥಾಪನಾ ಸಮಿತಿಯ ಸಹಯೋಗದಲ್ಲಿ ಮೊದಲನೇ ಬಾರಿಗೆ ನಡೆದ ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಬೆಳಕಿನ ವೈಭವ ಕಣ್ತುಂಬಿಕೊಂಡರು.ಲಕ್ಷ ದೀಪೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ಅನ್ನಬಲಿ ಹಾಕುವುದು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ದೇವಸ್ಥಾನದಲ್ಲಿ ಹಣತೆಗಳಿಗೆ ಸಾಲುಗಂಬ ಆಕಾರ ಹೊಂದಿದ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ದೀಪ ಬೆಳಗಿಸಿದರು.

ಕನಕಗಿರಿ

ತಾಲೂಕಾಡಳಿತ, ಕನಕಾಚಲಪತಿ ವ್ಯವಸ್ಥಾಪನಾ ಸಮಿತಿಯ ಸಹಯೋಗದಲ್ಲಿ ಮೊದಲನೇ ಬಾರಿಗೆ ನಡೆದ ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಬೆಳಕಿನ ವೈಭವ ಕಣ್ತುಂಬಿಕೊಂಡರು.

ಲಕ್ಷ ದೀಪೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ಅನ್ನಬಲಿ ಹಾಕುವುದು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ದೇವಸ್ಥಾನದಲ್ಲಿ ಹಣತೆಗಳಿಗೆ ಸಾಲುಗಂಬ ಆಕಾರ ಹೊಂದಿದ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ದೀಪ ಬೆಳಗಿಸಿದರು.

ಹೀಗೆ ಯುವಕ, ಯುವತಿಯರ ಬಳಗದಿಂದ ಓಂ, ಶ್ರೀ, ಕನಕಾಚಲನ ಹೆಸರು ಬರೆದು ಬಣ್ಣ-ಬಣ್ಣದ ರಂಗೋಲಿ ಹಾಕಿ ಅದರ ಮೇಲೆ ದೀಪ ಬೆಳಗಿಸುವುದು. ದೀಪೋತ್ಸವಕ್ಕೆ ಮತ್ತಷ್ಟು ಮೆರಗು ತಂದಿತು. ದೇವಸ್ಥಾನದಿಂದ ವಾಲ್ಮೀಕಿ ವೃತ್ತದವರೆಗೆ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು.

ಗೋಪುರಗಳು, ಪೌಳಿಗಳು, ದೇವಸ್ಥಾನ ಪ್ರಾಂಗಣವೂ ದೀಪಾಲಂಕಾರದಿಂದ ಕಂಗೊಳಿಸಿದವು. ಇದೇ ಮೊದಲ ಬಾರಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ರಾಜ್ಯವಲ್ಲದೆ, ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣದಿಂದಲೂ ನೂರಾರು ಭಕ್ತರು ಆಗಮಿಸಿ ದೀಪ ಹಚ್ಚಿದರು.

ಮೆರಗು ತಂದ ಕೋಲಾಟ:

ದೀಪೋತ್ಸವದ ನಿಮಿತ್ತ ಸಿಂಧನೂರು ತಾಲೂಕಿನ ಕೆ. ಹಂಚಿನಾಳದ ಮರುಳಿ ಕೃಷ್ಣ ಕೋಲಾಟ ತಂಡದಿಂದ ನಡೆದ ಕೋಲಾಟವು ಮೆರವಣಿಗೆಗೆ ಹೊಸ ಮೆರಗು ತಂದಿತು. ಶಂಕ್ರಪ್ಪ ಬಿನ್ನಾಳ ಶಿಷ್ಯರಿಂದ ಭಕ್ತಿ ಸುಧೆ, ಕನಕಾಚಲ ಭಜನಾ ಮಂಡಳಿಯಿಂದ ಭಜನಾ ಹಾಡುಗಳು, ಅಂತಾರಾಷ್ಟ್ರೀಯ ಗಾಯಕ ಹುಸೇನದಾಸ ಹಾಗೂ ವೆಂಕಟೇಶ ಕಲ್ಬುರ್ಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಈಡೇರಿದ ಭಕ್ತರ ಆಸೆ:

ಕಾರ್ತಿಕ ಮಾಸದಲ್ಲಿ ಲಕ್ಷ ದಿಪೋತ್ಸವ ನಡೆಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು. ಆದರೆ, ಕೊರೋನಾ, ನೂತನ ರಥ ಹೀಗೆ ನಾನಾ ಕಾರಣಗಳಿಗಾಗಿ ಆಚರಿಸಲಾಗಿರಲಿಲ್ಲ. ಇನ್ನು ಈ ವರ್ಷ ಆಚರಿಸಬೇಕೆಂಬ ಒತ್ತಾಯ ಹಲವರಿಂದ ಕೇಳಿ ಬಂದಿದ್ದು, ಹಲವು ಸಂಘಟನೆಗಳು, ಭಕ್ತರು ಮನವಿಯನ್ನೂ ಸಲ್ಲಿಸಿದ್ದರು. ಆದರೆ, ಸಮ್ಮತಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದು, ಕೊನೆಗೆ ಭಕ್ತರೇ ಸೆಡ್ಡು ಹೊಡೆದು ಲಕ್ಷ ದೀಪೋತ್ಸವ ಆಚರಣೆಗೆ ಮುಂದಾಗಿದ್ದರು. ಅಂತಿಮವಾಗಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದಲೇ ದೀಪೋತ್ಸವ ಆಚರಿಸಲಾಗುತ್ತಿದ್ದು, ಭಕ್ತರು ಸಹಕರಿಸಲು ಕೋರಿದ್ದರಿಂದ ಹಲವು ವರ್ಷಗಳ ಬೇಡಿಕೆ ಅಮವಾಸ್ಯೆ ದಿನವೇ ಈಡೇರಿದಂತಾಗಿದೆ.