ಸಾರಾಂಶ
ಚಾಮರಾಜನಗರದಲ್ಲಿ ಅಮಚವಾಡಿ ಗ್ರಾಪಂ ಉಪಾಧ್ಯಕ್ಷ ಎಂ.ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಗ್ರಾಪಂ ಸದಸ್ಯರಾದ ಎಂ.ರಾಮು, ಲಿಂಗರಾಜು ಇದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಅಮಚವಾಡಿ ಗ್ರಾಮ ಪಂಚಾಯಿತಿಯಲ್ಲಿ ೧೫ನೇ ಹಣಕಾಸು ಯೋಜನೆಯಡಿ ಸೇರಿದಂತೆ, ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಕೆ. ಶ್ರೀನಿವಾಸ್ ಲಕ್ಷಾಂತರ ರು.ಗಳನ್ನು ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ಗ್ರಾಪಂ ಉಪಾಧ್ಯಕ್ಷ ಎಂ. ಕುಮಾರ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂನಲ್ಲಿ ವಿಶೇಷ ಚೇತನರಿಗಾಗಿ ಮೀಸಲಿರಿಸಿದ್ದ ಅನುದಾನದಲ್ಲಿ ೭ಲಕ್ಷಕ್ಕೂ ಹೆಚ್ಚು ಹಣವನ್ನು ಕ್ರಿಯಾಯೋಜನೆ ರೂಪಿಸಿಕೊಂಡು ೪೫ ಶ್ರವಣ ಉಪಕರಣಗಳ ಖರೀದಿಗೆ ೬ ಲಕ್ಷಕ್ಕೂ ಹೆಚ್ಚು ಹಣವನ್ನು ಬೆಂಗಳೂರಿನ ಕಂಪನಿಗೆ ಪಾವತಿಸಿ, ದಾಸ್ತಾನು ವಹಿಯನ್ನು ಪರಿಶೀಲನಾ ವೇಳೆಯಲ್ಲಿ ಹಾಜರುಪಡಿಸಿಲ್ಲ. ಇಲ್ಲಿ ಕೆಟಿಟಿಪಿ ನಿಯಮ ಉಲ್ಲಂಘನೆಯಾಗಿದೆ ಎಂದರು. ವಿಶೇಷ ಚೇತನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಶ್ರವಣ ಉಪಕರಣಕ್ಕಾಗಿ ವೆಚ್ಚ ಮಾಡಿ ಅವ್ಯವಹಾರ ನಡೆಸಿದ್ದಾರೆ ಎಂದರು.ಕುಡಿಯುವ ನೀರು, ಬೀದಿ ದೀಪ, ಕೈ ಪಂಪ್ ರಿಪೇರಿ, ತೊಂಬೆಗಳ ರಿಪೇರಿ, ಸ್ವಚ್ಛತೆಗಾಗಿ ಬಳಸಿದ ೨೪ ಲಕ್ಷಕ್ಕೂ ಹೆಚ್ಚು ಹಣದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ದೂರು ನೀಡಿದ ಅನ್ವಯ ಪಂಚಾಯತ್ ರಾಜ್‌ನ ಸಹಾಯಕ ಲೆಕ್ಕಾಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಪಂಗೆ ಭೇಟಿ ನೀಡಿ ಪರಿಶೀಲಿಸಿದಾಗ ಸುಮಾರು ೧೮ ಬಿಲ್ಲುಗಳ ಯಾವುದೇ ವೋಚರ್‌ಗಳನ್ನು ಪರಿಶೀಲನಾ ವೇಳೆಯಲ್ಲಿ ಹಾಜರುಪಡಿಸಿಲ್ಲ ಎಂದರು.ಗ್ರಾಪಂ ಅಧ್ಯಕ್ಷರು ಸಹ ನನ್ನ ಗಮನಕ್ಕೆ ಬಾರದೇ ಹಣ ಪಾವತಿಯಾಗಿದೆ ಎಂದು ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ, ಪ್ರಕಟಣೆ, ದರಪಟ್ಟಿ, ತುಲನಾತ್ಮಕ ಸಜಬರಾಜು ಕಡತದಲ್ಲಿದ್ದರೂ ಸಹ ಕ್ರಮಬದ್ದವಾಗಿ ನಿರ್ವಹಣೆ ಮಾಡಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿದ ತಂಡ ತನಿಖಾ ಸಮಯದಲ್ಲಿ ಒದಗಿಸಿದ ದಾಖಲೆಗಳ ಆಧಾರದ ಮೇಲೆ ವರದಿ ತಯಾರಿಸಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ ಎಂದರು.
ಗ್ರಾಮ ಸಭೆಗಳನ್ನು ನಡೆಸದೇ ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ, ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ, ತಕ್ಷಣ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಕೆ. ಶ್ರೀನಿವಾಸ್ ಮೇಲೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಎಂ.ರಾಮು, ಲಿಂಗರಾಜು ಇದ್ದರು.