ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಕರ ಸಂಕ್ರಾಂತಿ ನಿಮಿತ್ತ 34 ನೇ ವರ್ಷದ ಲಕ್ಷ ದೀಪೋತ್ಸವ ಸಡಗರ ಸಂಭ್ರಮದಿಂದ ಸೋಮವಾರ ಸಂಜೆ ನಡೆಯಿತು.ಲಕ್ಷ ದೀಪೋತ್ಸವದ ನಿಮಿತ್ತ ದೇವಾಲಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರದ ಜೊತೆ ಪಟ್ಟಣದ ಬಾತುಕೋಳಿ ವೃತ್ತದವರೆಗೆ ಸುಮಾರು 300 ಮೀಟರ್ ನಷ್ಟು ದೂರದವರೆಗೆ ಸುಮಾರು ಲಕ್ಷಾಂತರ ಮಣ್ಣಿನ ದೀಪಗಳನ್ನು ಹೊತ್ತಿಸಿ ಭಕ್ತಿ ಭಾವ ಮೆರೆದರು. ಇದರಿಂದಾಗಿ ದೇವಾಲಯದ ಅಂಗಳ ಬೆಳಕಿನೊಂದಿಗೆ ಕಂಗೊಳಿಸುತ್ತಿತ್ತು.
ಬಿದಿರು ದಬ್ಬಗಳಿಂದ ಮಾಡಿದ ಪಟ್ಟಿಗಳ ಮೇಲೆ ಸಗಣಿ ಇಟ್ಟು ಮಣ್ಣಿನ ದೀಪಗಳನ್ನು ಜೋಡಿಸಿ ಅವುಗಳಿಗೆ ಎಣ್ಣೆ ಬತ್ತಿಗಳನ್ನು ಹಾಕಿ ದೀಪಗಳನ್ನು ಹೊತ್ತಿಸುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.ಪಟ್ಟಣದ ಕೋಟೆ ಬಾಗಿಲಿಗೆ ಸಂಕ್ರಾಂತಿ ಹಬ್ಬದ ಲಕ್ಷ ದೀಪೋತ್ಸವದ ಕಮಾನು ಹಾಕಲಾಗಿತ್ತು. ಬಸ್ ನಿಲ್ದಾಣ, ಪೇಟೆ ಬೀದಿಗಳನ್ನು ಸೇರಿದಂತೆ ಪುರಸಭ ವೃತ್ತ, ಅಂಬೇಡ್ಕರ್ ವೃತ್ತ, ಬಾತು ಕೋಳಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.
ಭಕ್ತರ, ದಾನಿಗಳು ನೆರವಿನಿಂದ ಲಕ್ಷ ದೀಪೋತ್ಸವ ಸಮಿತಿ ಕಾರ್ಯಕರ್ತರು ಎಣ್ಣೆ, ದೀಪಗಳನ್ನು ಸಂಗ್ರಹಲಾಗಿತ್ತು. ಬೆಳಗ್ಗೆ ಶ್ರೀರಂಗನಾಥಸ್ವಾಮಿ ದೇವರಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಸಂಜೆ ಸೂರ್ಯಾಸ್ತಮ ಸಮಯಕ್ಕೆ ದೇವಾಲಯದ ಆವರಣದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಜೈ ಶ್ರೀರಾಮ್ ಎಂದು ದೀಪಗಳಲ್ಲಿ ನಾಮಸ್ಮರಣೆ ಮಾಡಿದ್ದು ಗಮನ ಸೆಳೆಯಿತು.ಮಂಡ್ಯ, ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಲಕ್ಷಾಂತರ ಭಕ್ತರು ಆಗಮಿಸಿ ಲಕ್ಷದೀಪ ಹಾಗೂ ಶ್ರೀರಂಗನಾಥನ ದರ್ಶನ ಪಡೆದರು.
ಸಂಕ್ರಾಂತಿ ದಿನದಂದು ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವರ್ಷಕ್ಕೊಮ್ಮೆ ತೆಗೆಯುವ ಸ್ವರ್ಗದ ಬಾಗಿಲನ್ನು ತೆಗೆದು ಭಕ್ತರಿಗೆ ಒಳ ಪ್ರವೇಶಿಸಲು ಅವಕಾಶ ಮಾಡಲಾಗಿತ್ತು. ಇದಕ್ಕಾಗಿ ಸಹಸ್ರಾರು ಭಕ್ತರು ಸಾಲುಗಟ್ಟಿ ಸ್ವರ್ಗದ ಬಾಗಿಲನ್ನು ಪ್ರವೇಶಿಸಲು ದೇವಾಲಯದ ಒಳಗೆ ನಿಂತಿದ್ದ ದೃಶ್ಯ ಕಂಡು ಬಂತು.ಲಕ್ಷ ದೀಪೋತ್ಸವದ ನಿಮಿತ್ತ ಸಹಸ್ರಾರು ಭಕ್ತರು ಆಗಮಿಸುವುದರಿಂದ ಪ್ರವೇಶ ದ್ವಾರ ಸೇರಿದಂತೆ ದೇವಾಲಯದ ಮುಂಭಾಗದ ದಕ್ಷಿಣ ಭಾಗ ಹಾಗೂ ಉತ್ತರ ಭಾಗದಲ್ಲಿನ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳ ದಟ್ಟಣೆ ಹೆಚ್ಚಾಗದಂತೆ ಜೊತೆಗೆ ಯಾವುದೇ ಅಹಿತಕರ ಘಟನೆಗಳು ಜರುಗಂತೆ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿತ್ತು.