ಸಾರಾಂಶ
ಲಕ್ಷ್ಮೇಶ್ವರ: ಬುಧವಾರ ನಡೆದ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಗೂ ಪೂರ್ವ ಕಾಂಗ್ರೆಸ್ ಸೇರಿದ ಬಿಜೆಪಿ ಸದಸ್ಯೆ ಯಲ್ಲವ್ವ ದುರುಗಣ್ಣವರ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು.
ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಯಲ್ಲವ್ವ ಗಂಗಪ್ಪ ದುರಗಣ್ಣವರ ಅಧ್ಯಕ್ಷರಾಗಿ ಮತ್ತ ಪಿರ್ಧೋಶ್ ಮೈನುದ್ದೀನ್ ಆಡೂರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.ಪಟ್ಟಣದ 10ನೇ ಅವಧಿಯ ಪುರಸಭೆಯ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಪುರುಷರಿಗೆ ಮೀಸಲಾಗಿತ್ತು. ಪುರಸಭೆಯ ಒಟ್ಟು 23 ಸದಸ್ಯರಲ್ಲಿ ಓರ್ವ ಸದಸ್ಯರು ನಿಧನರಾಗಿದ್ದರು. 22 ಸದಸ್ಯರಲ್ಲಿ 9 ಕಾಂಗ್ರೆಸ್ ಸದಸ್ಯರು ಹಾಗೂ 7 ಬಿಜೆಪಿ ಸದಸ್ಯರು, 2 ಜೆಡಿಎಸ್ ಸದಸ್ಯರು ಹಾಗೂ 5 ಜನ ಪಕ್ಷೇತರ ಸದಸ್ಯರ ಬಲ ಹೊಂದಿತ್ತು.
ಬಿಜೆಪಿಗೆ ಮುಖಭಂಗ8ನೇ ವಾರ್ಡಿನ ಸದಸ್ಯೆ ಯಲ್ಲವ್ವ ದುರಗಣ್ಣವರ ಬಿಜೆಪಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಯಲ್ಲವ್ವ ದುರಗಣ್ಣವರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದರು. ಆ ಮೂಲಕ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗ ಉಂಟು ಮಾಡಿದ ಘಟನೆ ನಡೆಯಿತು. ಕಾಂಗ್ರೆಸ್ ಪಕ್ಷದ ಯಲ್ಲವ್ವ ದುರಗಣ್ಣವರ ಅವರು 13 ಮತಗಳನ್ನು ಪಡೆದರೆ ಬಿಜೆಪಿ ಕವಿತಾ ಗೋವಿಂದಪ್ಪ ಶೆರಸೂರಿ 10 ಮತ ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 21ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಫಿರ್ಧೋಶ್ ಆಡೂರ ಅವರು 13 ಮತ ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ 9ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಬಿಜೆಪಿಯಿಂದ ಸ್ಪರ್ಧಿಸಿದ ಮಹಾದೇವಪ್ಪ ಅಣ್ಣಿಗೇರಿ ಅವರು 10 ಮತ ಪಡೆದು ಸೋಲನುಭವಿಸಿದರು.ಶಾಸಕ ಡಾ. ಲಮಾಣಿಗೆ ತೀವ್ರ ಮುಖಭಂಗ
ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಅಧಿಕಾರ ಹಿಡಿಯಬೇಕು ಎಂಬ ಆಸೆಯಿಂದ ಶಾಸಕರು ಮತ ಚಲಾಯಿಸಿದರು. ಆದರೆ, ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಕ್ಷದ ಪಾಲಾಗುವ ಮೂಲಕ ತೀವ್ರ ಮುಖಭಂಗ ಅನುಭವಿಸುವಂತಾಯಿತು.ಶಾಸಕ ಡಾ. ಚಂದ್ರು ಲಮಾಣಿ ಅವರು ತಮ್ಮ ಬೆಂಬಲಿಗರೊಂದಿಗೆ ಪುರಸಭೆಗೆ ಆಗಮಿಸಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಾಸ್ಸಾದರು.
ವಿಜಯೋತ್ಸವ:ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದ ಸುದ್ದಿ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಗುಲಾಲ್ ಎರಚಿ ಸಂಭ್ರಮಿಸಿದರು.
ಈ ವೇಳೆ ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಸಂದ ಜಯ ಇದಾಗಿದ್ದು. ಪಕ್ಷದ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಹೆಚ್ಚು ಸಂತಸ ಪಡುವಂತಾಗಿದೆ. ಪಟ್ಟಣದ ಅಭಿವೃದ್ದಿಗೆ ಕಾಂಗ್ರೆಸ್ ಸದಸ್ಯರು ತಮ್ಮ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವ ಮೂಲಕ ಮಾದರಿ ಪಟ್ಟಣವನ್ನಾಗಿ ಮಾಡಲಾಗುವುದು ಎಂದು ಹೇಳಿದರು.ಈ ವೇಳೆ ಮಹೇಶ ಹೊಗೆಸೊಪ್ಪಿನ, ಜಯಕ್ಕ ಕಳ್ಳಿ, ಜಯವ್ವ ಅಂದಲಗಿ, ರಾಜು ಕುಂಬಿ, ರಾಮು ಗಡದವರ, ಬಸವರಾಜ ಓದುನವರ, ಸಾಹೀಬ್‌ಜಾನ್ ಹವಾಲ್ದಾರ್, ದಾದಾಪೀರ್ ಮುಚ್ಚಾಲೆ, ಸಿದ್ದು ದುರಗಣ್ಣವರ. ನೀಲಪ್ಪ ಶರೆಸೂರಿ, ಬಸಣ್ಣ ಹೊಳಲಾಪೂರ, ಚನ್ನಪ್ಪ ಜಗಲಿ, ಅಫ್ಜಲ್ ರಿತ್ತಿ, ಪದ್ಮರಾಜ ಪಾಟೀಲ, ವಿ.ಜಿ. ಪಡಗೇರಿ, ಕಿರಣ ನವಲೆ, ಜಿ.ಆರ್. ಕೊಪ್ಪದ, ಅಂಬರೀಷ್ ತೆಂಬದಮನಿ, ಮಹಾದೇವಪ್ಪ ನಂದೆಣ್ಣವರ, ಸದಾನಂದ ನಂದೆಣ್ಣವರ, ತಿಪ್ಪಣ್ಣ ಸಂಶಿ, ನೂರಅಹ್ಮದ್ ನಿಡುಗುಂದಿ, ನೀಲಪ್ಪ ಪಡಗೇರಿ, ಬಸವರಾಜ ಹೊಳಲಾಪೂರ ಸೇರಿದಂತೆ ಅನೇಕರು ಇದ್ದರು.ಬಿಜೆಪಿ ಪಕ್ಷದಿಂದ ಯಲ್ಲವ್ವ ದುರಗಣ್ಣವರ ಉಚ್ಛಾಟನೆ
ಲಕ್ಷ್ಮೇಶ್ವರ: ಪಟ್ಟಣದ 8ನೇ ವಾರ್ಡಿನ ಬಿಜೆಪಿ ಸದಸ್ಯೆ ಯಲ್ಲವ್ವ ದುರಗಣ್ಣವರ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದರಿಂದ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.ಪಟ್ಟಣದ ರಂಭಾಪುರಿ ಸಮುದಾಯ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯೆ ಯಲ್ಲವ್ವ ದುರಗಣ್ಣವರ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರವಾಗಿ ಮತ ಚಲಾವಣೆ ಮಾಡಿದ್ದರಿಂದ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಅವರ ಆದೇಶದ ಮೇಲೆ ಪಕ್ಕದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು.