ಕೋಟೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ

| Published : Aug 22 2024, 01:00 AM IST

ಸಾರಾಂಶ

ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಬೀಳುತ್ತಿದ್ದ ಮಳೆ ಮಂಗಳವಾರ ರಾತ್ರಿ ತುಸು ಜೋರಾಗಿಯೇ ಅಬ್ಬರಿಸಿದೆ. ಕಾತ್ರಾಳು , ಮನೆಮೈನಹಟ್ಟಿ, ಚಂದ್ರವಳ್ಳಿ ಕೆರೆಗಳು ಭರ್ತಿಯಾಗಿವೆ. ಐತಿಹಾಸಿಕ ಸಂತೆ ಹೊಂಡ ತುಂಬಿ ತುಳುಕಾಡುತ್ತಿದೆ.

ಕನ್ನಡಪ್ರಭವಾರ್ತೆ ಚಿತ್ರದುರ್ಗಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಬೀಳುತ್ತಿದ್ದ ಮಳೆ ಮಂಗಳವಾರ ರಾತ್ರಿ ತುಸು ಜೋರಾಗಿಯೇ ಅಬ್ಬರಿಸಿದೆ. ಕಾತ್ರಾಳು , ಮನೆಮೈನಹಟ್ಟಿ, ಚಂದ್ರವಳ್ಳಿ ಕೆರೆಗಳು ಭರ್ತಿಯಾಗಿವೆ. ಐತಿಹಾಸಿಕ ಸಂತೆ ಹೊಂಡ ತುಂಬಿ ತುಳುಕಾಡುತ್ತಿದೆ.ಚಳ್ಳಕೆರೆ ತಾಲೂಕಿನೆಲ್ಲೆಡೆ ಕಳೆದ ರಾತ್ರಿ ಧಾರಕಾರ ಮಳೆ ಸುರಿದು, ಜಮೀನು ಹಾಗೂ ಮನೆಗಳಿಗೆ ನುಗ್ಗಿರುವ ನೀರಿನಿಂದಾಗಿ ಅಪಾರ ಪ್ರಮಾಣದ ಬೆಳೆ ಮತ್ತು ಅಪಾರ ಪ್ರಮಾಣದ ದಾಸ್ತಾನು ನಾಶವಾಗಿದೆ. ಮನಮೈನಹಟ್ಟಿ ಗ್ರಾಮದ ಕೆರೆ ಕೋಡಿ ಬಿದ್ದು ನಾಯಕನಹಟ್ಟಿಗೆ ತೆರಳುವ ಪ್ರಮುಖ ರಸ್ತೆ ಪೂರ್ಣ ಜಲಾವೃತಗೊಂಡಿದೆ. ಗ್ರಾಮದ ಬಹುತೇಕ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದೆ.

ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ರಸ್ತೆ ದಾಟುವುದಕ್ಕೆ ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಕೆರೆ ಕೋಡಿ ಬಿದ್ದಿದ್ದರಿಂದ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿರುವುದರಿಂದ ಶಾಲಾ ಮಕ್ಕಳಿಗೂ ಪರದಾಡುವಂತಾಗಿದೆ. ಇದರಿಂದ ಆತಂಕದಲ್ಲೇ ಶಾಲಾ ಮಕ್ಕಳು ಹಾಗೂ ಜನರು ರಸ್ತೆ ದಾಟುವಂತಾಗಿದೆ.ಮತ್ತೊಂದೆಡೆ ನಾಯಕನಹಟ್ಟಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಪೊಲೀಸ್ ಠಾಣೆ ಆವರಣ ಸಂಪೂರ್ಣ ಜಲಾವೃತವಾಗಿದೆ. ಹೆಚ್ಚು ನೀರು ನಿಂತಿದ್ದರಿಂದ ಪೊಲೀಸ್ ಸಿಬ್ಭಂದಿಗಳೇ ಹೊರಗಡೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಕಷ್ಟಗಳನ್ನು ಹೇಳಿಕೊಳ್ಳಲು ಬಂದ ಜನರು ಠಾಣೆಯ ಮುಂಭಾಗದಲ್ಲೇ ನಿಂತು, ದೂರು ಹೇಳುವ ಪರಿಸ್ಥಿತಿ ಕಂಡುಬಂದಿತು.ಕೃಷಿ ಇಲಾಖೆ ಅಂಕಿಅಂಶಗಳ ಪ್ರಕಾರ ಒಂದೇ ರಾತ್ರಿ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ 69 ಮೀ.ಮೀ ಮಳೆಯಾಗಿದೆ. ಭೀಮಗೊಂಡನಹಳ್ಳಿ ಬಳಿಯ ಎರಡು ಚೆಕ್‌ಡ್ಯಾಂ, ಜಾಗನೂರಹಟ್ಟಿ ಬಳಿಯ ಎರಡು ಚೆಕ್ ಡ್ಯಾಂ ಹಾಗೂ ಗೌಡಗೆರೆ ಗ್ರಾಮದ ಬಳಿಯ ಚೆಕ್ ಡ್ಯಾಂಗಳು ತುಂಬಿ ಕೋಡಿ ಹರಿದ ಪರಿಣಾಮ ಚಿಕ್ಕಕೆರೆಯಲ್ಲಿ ಎರಡು ಅಡಿಯಷ್ಟು ನೀರು ಸಂಗ್ರಹಗೊಂಡಿದೆ. ಬಹಳ ವರ್ಷಗಳ ನಂತರ ಚಿಕ್ಕ ಕೆರೆಯಲ್ಲಿ ನೀರು ಸಂಗ್ರಹದ ದೃಶ್ಯ ಕಂಡು ಹಟ್ಟಿ ಜನರು ಸಂಭ್ರಮಿಸಿದರು. ಮನುಮೈನಹಟ್ಟಿಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಡಿಆರ್‌ಡಿಒ ಸಮೀಪ ಇರುವ ಕೆರೆ ಕೋಡಿ ಬಿದ್ದಿದೆ. ಐತಿಹಾಸಿಕ ನಾಯಕನಹಟ್ಟಿಯ ಹಿರೇಕೆರೆಯು 18 ಅಡಿಯಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಈಗ ಸದ್ಯ 6 ಅಡಿಯಷ್ಟು ನೀರಿನ ಸಂಗ್ರಹ ಆಗಿದೆ. ಕೆರೆ ಕೋಡಿ ಬಿದ್ದರೆ ತೆಪ್ಪೋತ್ಸವ ಆಚರಣೆಯ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದಾರೆ.

ಚಿತ್ರದುರ್ಗದ ಐತಿಹಾಸಿಕ ಚಂದ್ರವಳ್ಳಿ ಕೆರೆಯೂ ಕೋಡಿ ಬಿದ್ದಿದ್ದು, ನೀರು ರಾಜ ಕಾಲುವೆ ಮೂಲಕ ಮಲ್ಲಾಪುರ ಕೆರೆಗೆ ಹರಿದಿದೆ. ಚಂದ್ರವಳ್ಳಿ ಕೆರೆ ಕೋಡಿ ಬಿದ್ದ ನೀರು ಬಂಡೆ ಮೇಲೆ ಹರಿಯುವ ದೃಶ್ಯ ನೋಡುಗರ ಕಣ್ಮನ ಸೆಳೆದಿದೆ. ಮಲ್ಲಾಪುರ ಕೆರೆ ಕೂಡಾ ಕೋಡಿ ಬಿದ್ದಿದ್ದು ನೀರು ಚಳ್ಳಕೆರೆ ತಾಲೂಕಿನ ಕಡೆ ಮುಖ ಮಾಡಿದೆ. ಮುರುಘಾಮಠದ ಮುಂಭಾಗದ ಕೆರೆ ಕೂಡಾ ಭರ್ತಿಯಾಗಿದೆ. ಕಾತ್ರಾಳು ಕೆರೆ ಕೋಡಿ ಬಿದ್ದು ಜಿನಿಗಿ ಹಳ್ಳ ರಭಸವಾಗಿ ಹರಿಯುತ್ತಿದೆ.

ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಚಿತ್ರದುರ್ಗ ಹೃದಯ ಭಾಗದಲ್ಲಿರುವ ಸಂತೆ ಹೊಂಡ ಭರ್ತಿಯಾಗಿದೆ. ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿರುವ ಗೋಪಾಲಸ್ವಾಮಿ ಹೊಂಡ ಕೋಡಿ ಬಿದ್ದ ಪರಿಣಾಮ ಸಿಹಿನೀರು ಹೊಂಡ ತುಂಬಿ ತುಳುಕಾಡಿದೆ. ಅಲ್ಲಿಂದ ಅಂತರ್ಮುಖಿಯಾಗಿ ಹರಿದು ಬಂದ ನೀರು ಸಂತೆ ಹೊಂಡ ಸೇರಿದೆ. ಚಿತ್ರದುರ್ಗ ನ್ಯಾಯಾಲಯದ ಆವರಣದಲ್ಲಿ ಬೇವಿನಮರವೊಂದು ಉರುಳಿ ಬಿದ್ದಿದೆ.