ಸಾರಾಂಶ
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದರು. ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎಂದು ಬೆದರಿಕೆಯೊಡ್ಡಿದ್ದರು. ಬಿಜೆಪಿಯವರ ಮಟ್ಟಕ್ಕೆ ನಾವು ಇಳಿಯಲ್ಲ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ ಬಗ್ಗೆ ಮಾತನಾಡುವ ಬಿಜೆಪಿಯವರು ತಮ್ಮ ಪಕ್ಷದ ಮುಖಂಡರ ನಡವಳಿಕೆ, ಹೇಳಿಕೆಗಳನ್ನು ಮೊದಲು ನೋಡಿಕೊಳ್ಳಲಿ. ಬಿಜೆಪಿ ನಾಯಕರು ಇಳಿದ ಮಟ್ಟಕ್ಕೆ ನಾವು ಇಳಿಯಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಎಂಎಲ್ಸಿ ಹರೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐವನ್ ಡಿಸೋಜ ಅವರು ಅರಾಜಕತೆ ವಿಷಯದ ಕುರಿತು ಮಾತನಾಡುವಾಗ ಬಾಂಗ್ಲಾ ಪ್ರಸ್ತಾಪ ಮಾಡಿದ್ದಾರೆ, ಅವರ ಹೇಳಿಕೆಯಲ್ಲಿ ಅಂಥ ಘಟನೆ ನಡೆಯಬಾರದು ಎಂಬ ಉದ್ದೇಶ ಇತ್ತೇ ಹೊರತು ತಾವು ಹಾಗೆ ಮಾಡುವುದಾಗಿ ಹೇಳಿಲ್ಲ ಎಂದರು.
ಬೆಳ್ತಂಗಡಿಯಲ್ಲಿ ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಸ್ಟೇಶನ್‌ಗೆ ತೆರಳಿ ಪೊಲೀಸರನ್ನೇ ಅವಹೇಳನ ಮಾಡಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಸ್ಟೇಶನ್ ನಿಮ್ಮಪ್ಪಂದಾ ಎಂದು ಬೆದರಿಕೆಯೊಡ್ಡಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದರು. ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎಂದು ಬೆದರಿಕೆಯೊಡ್ಡಿದ್ದರು. ಬಿಜೆಪಿಯವರ ಮಟ್ಟಕ್ಕೆ ನಾವು ಇಳಿಯಲ್ಲ ಎಂದು ಹೇಳಿದರು.ರಾಜ್ಯಪಾಲರ ಧೋರಣೆ ಖಂಡಿಸಿ ಇತ್ತೀಚೆಗೆ ನಡೆಸಿದ ಪ್ರತಿಭಟನೆ ವೇಳೆ ಖಾಸಗಿ ಬಸ್ಸಿಗೆ ಕಲ್ಲು ತೂರಾಟ ಆಗಿರುವುದು ನಿಜ. ಶಾಂತಿಯುತವಾಗಿಯೇ ಪ್ರತಿಭಟನೆ ಆಯೋಜಿಸಿದ್ದೆವು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಬಾರದಿತ್ತು. ಆದರೆ ಆಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಎಚ್‌ಡಿಕೆ ಪ್ರಾಸಿಕ್ಯೂಶನ್ ವಿಳಂಬ ಏಕೆ: ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಲೋಕಾಯುಕ್ತ ತನಿಖೆ ಆಗಿ ತನಿಖಾ ಸಂಸ್ಥೆಯೇ ಪ್ರಾಸಿಕ್ಯೂಶನ್‌ಗೆ ಕೇಳಿದರೂ ರಾಜ್ಯಪಾಲರು ನೀಡಿರಲಿಲ್ಲ. ಇದೀಗ ಎಸ್‌ಐಟಿ ಸಂಸ್ಥೆಯು ಪ್ರಾಸಿಕ್ಯೂಶನ್‌ಗೆ ಮತ್ತೆ ರಾಜ್ಯಪಾಲರ ಅನುಮತಿ ಕೋರಿದೆ. ಕುಮಾರಸ್ವಾಮಿ ವಿಚಾರದಲ್ಲಿ ಅಧಿಕೃತ ತನಿಖಾ ಸಂಸ್ಥೆಯೇ ಕೇಳಿರುವಾಗ ವಿಳಂಬ ಮಾಡೋದೇಕೆ? ಕೂಡಲೆ ಎಚ್.ಡಿ.ಕೆ. ವಿರುದ್ಧ ಪ್ರಾಸಿಕ್ಯೂಶನ್‌ಗೆ ಅವಕಾಶ ನೀಡಲಿ ಎಂದು ಹರೀಶ್ ಕುಮಾರ್ ಒತ್ತಾಯಿಸಿದರು.ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್., ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಶುಭೋದಯ ಆಳ್ವ, ಎಂ.ಜಿ. ಹೆಗಡೆ, ನೀರಜ್‌ಪಾಲ್, ವಿಶ್ವಾಸ್‌ಕುಮಾರ್ ದಾಸ್, ಸಬಿತಾ ಮಿಸ್ಕಿತ್, ಶಬೀರ್ ಸಿದ್ದಕಟ್ಟೆ ಮತ್ತಿತರರಿದ್ದರು.