ಸಾರಾಂಶ
ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಸಾವಿರಾರು ಭಕ್ತರ ಜಯಘೋಷದ ನಡುವೆ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಚಾಮರಾಜನಗರ: ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಸಾವಿರಾರು ಭಕ್ತರ ಜಯಘೋಷದ ನಡುವೆ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಬಾಳೆಹಣ್ಣು, ವೀಳ್ಯದೆಲೆಯನ್ನು ರಥಕ್ಕೆ ಎಸೆದು ಮುಗಿಬಿದ್ದು ತೇರು ಎಳೆದರು. ವೀರಮಕ್ಕಳ ಕುಣಿತ, ನಂದಿಧ್ವಜ, ಬ್ಯಾಂಡು, ಕೊಂಬು ಕಹಳೆ, ಸತ್ತಿಗೆ, ಸೂರಪಾನಿ, ಮಂಗಳವಾದ್ಯ ಸಮೇತ ಬೆಳಗ್ಗೆ 10 ಗಂಟೆಯಲ್ಲಿ ನಾರಾಯಣಸ್ವಾಮಿ ದೇವಸ್ಥಾನದಿಂದ ಸಾಗಿದ ತೇರು ಪ್ರಮುಖ ಬೀದಿಗಳನ್ನು ದಾಟಿ ಮಧ್ಯಾಹ್ನ 12.30ರಲ್ಲಿ ಸ್ವಸ್ಥಾನ ಸೇರಿತು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.ಉರುಳು ಸೇವೆಯೊಂದಿಗೆ ಭಾನುವಾರ ಬೆಳಗಿನ ಜಾವ ಶ್ರೀ ಲಕ್ಷ್ಮೀದೇವಿ ಜಾತ್ರಾ ಕಾರ್ಯಕ್ರಮ ಶುರುವಾಗಿ ರಾತ್ರಿಯಿಡೀ ಅದ್ಧೂರಿ ಉತ್ಸವ ಜರುಗಿತು. ಸೋಮವಾರ ನಸುಕಿನಲ್ಲಿ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ ಮುಂಭಾಗ ಕೊಂಡೋತ್ಸವವಾಯಿತು.
ಈ ವೇಳೆ ವೈವಿಧ್ಯಮಯ ಪಟಾಕಿಗಳನ್ನು ಸಿಡಿಸಿ ಬಾಣ ಬಿರುಸುಗಳ ಬೆಳಕಿನ ಚಿತ್ತಾರ ಹರಿಸಲಾಯಿತು. ಬಳಿಕ ರಥೋತ್ಸವ ನಡೆಯುವುದರೊಂದಿಗೆ ಎರಡು ದಿನಗಳ ಜಾತ್ರೆ ಮುಕ್ತಾಯ ಕಂಡಿತು. ಬಿ.ಮಲ್ಲಯ್ಯನಪುರ, ಮೇಗಲಹುಂಡಿ, ಕೆರೆಹಳ್ಳಿ, ಪಾಳ್ಯ ಹೆಗ್ಗವಾಡಿ, ಭುಜಗನಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು. ಜಾತ್ರೆ ಅಂಗವಾಗಿ ಗ್ರಾಮದ ತಾವರೆಕೆರೆ ಏರಿ ಉದ್ದಕ್ಕೂ ಜಗಮಗಿಸುವಂತೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.