ಚಿಕ್ಕಮಗಳೂರುನಗರಸಭೆ ಅಧ್ಯಕ್ಷರಾಗಿದ್ದ ಜೆಡಿಎಸ್‌ನ ಶೀಲಾ ದಿನೇಶ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರಾಗಿದ್ದ ಲಲಿತಾ ರವಿ ನಾಯ್ಕ್ ಶುಕ್ರವಾರ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರಸಭೆ ಅಧ್ಯಕ್ಷರಾಗಿದ್ದ ಜೆಡಿಎಸ್‌ನ ಶೀಲಾ ದಿನೇಶ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರಾಗಿದ್ದ ಲಲಿತಾ ರವಿ ನಾಯ್ಕ್ ಶುಕ್ರವಾರ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಜೆಡಿಎಸ್ ಹಾಗೂ ಬಿಜೆಪಿ ಪರಸ್ಪರ ತಲಾ 10 ತಿಂಗಳು ಅಧಿಕಾರ ನಡೆಸುವ ಒಪ್ಪಂದ ಮಾಡಿಕೊಂಡಿದ್ದಂತೆ ಇದೀಗ ಜೆಡಿಎಸ್‌ನ ಶೀಲಾ ದಿನೇಶ್ ಅವರ 10 ತಿಂಗಳ ಅಧಿಕಾರ ಗುರುವಾರಕ್ಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಬಿಜೆಪಿಯಿಂದ ಯಾರು ಅಧ್ಯಕ್ಷರಾಗಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ, ಶುಕ್ರವಾರ ಹಂಗಾಮಿ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷೆ ಲಿಲಿತಾ ರವಿ ನಾಯ್ಕ್ ಅವರನ್ನು ನೇಮಿಸಿದ್ದು, ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಲಲಿತಾ ರವಿ ನಾಯ್ಕ್ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷೆ ಶೀಲಾ ದಿನೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ, ಬಿಜೆಪಿ ನಗರಾಧ್ಯಕ್ಷ ಕೆ.ಎಸ್. ಪುಷ್ಪರಾಜ್ ಮತ್ತಿತರರು ಶುಭ ಕೋರಿದರು.
ಈ ವೇಳೆ ಮಾತನಾಡಿದ ನಗರಸಭೆ ಪ್ರಭಾರ ಅಧ್ಯಕ್ಷೆ ಲಲಿತಾ ರವಿ ನಾಯ್ಕ್, ಬಿಜೆಪಿ ನಾಯಕರು ಸಣ್ಣ ಸಮುದಾಯವನ್ನು ಗುರುತಿಸಿ ಪ್ರಭಾರ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ನಂಬಿಕೆಗೆ ಲೋಪವಾಗದಂತೆ ಸಿಕ್ಕಿರುವ ಸಣ್ಣ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ. ನನ್ನ ಈ ಬೆಳವಣಿಗೆಗೆ ಪಕ್ಷದ ಸಣ್ಣ ಸಣ್ಣ ಕಾರ್ಯಕರ್ತರು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.ನಗರ ಸಭೆ ನಿಕಟಪೂರ್ವ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಈ ಹಿಂದಿನ ಒಪ್ಪಂದದಂತೆ 10 ತಿಂಗಳ ಕಾಲ ಜನರು ಮೆಚ್ಚುವಂತೆ ಕೆಲಸ ಮಾಡಿದ್ದೇನೆ. ನಮ್ಮ ನಾಯಕರಾದ ಎಸ್.ಎಲ್. ಭೋಜೇಗೌಡ ಸೇರಿದಂತೆ ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮಾರ್ಗದರ್ಶನದಂತೆ ಉತ್ತಮ ಕೆಲಸ ಮಾಡಿದ್ದೇನೆ ಎಂಬ ಖುಷಿ ನನಗಿದೆ ಎಂದರು.
ಚಿಕ್ಕಮಗಳೂರಿನ ಶಾಸಕ ಎಚ್.ಡಿ.ತಮ್ಮಯ್ಯ ಅವರು ಸೈಕಲ್ ತುಳಿ ಸಮಸ್ಯೆ ತಿಳಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಾಗ ನಗರ ವ್ಯಾಪ್ತಿಯ ರಸ್ತೆಗಳ ದುಸ್ಥಿತಿ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೆ. ಶಾಸಕರು ಸಮಸ್ಯೆ ಪರಿಹರಿಸುವ ಜೊತೆಗೆ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.ಜೆಡಿಎಸ್ ಪಕ್ಷದಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದರೂ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಎಲ್ಲರ ಸಲಹೆ ಮೇರೆಗೆ ಉತ್ತಮ ಕೆಲಸ ಮಾಡಿದ್ದೇನೆ ಎನ್ನುವ ನಂಬಿಕೆ ಇದೆ. ನಗರದ ಸ್ವಚ್ಚತೆ ಬಗ್ಗೆ ಎಸ್.ಎಲ್.ಭೋಜೇಗೌಡ ಅವರು ಕಾಳಜಿ ವಹಿಸಿದ್ದರು. ಆದರಂತೆ ಚಿಕ್ಕಮಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇನೆ. ಇದಲ್ಲದೆ ಪ್ರತಿ ವಾರ್ಡ್ನಲ್ಲಿಯೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ತೃಪ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಕವಿತಾ ಶೇಖರ್, ಆಯುಕ್ತ ಬಿ.ಸಿ.ಬಸವರಾಜ್ ಮತ್ತಿತರರಿದ್ದರು... ಕೋಟ್....ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಒಂದು ಅವಧಿಗೆ ಜೆಡಿಎಸ್ ಗೆ ನೀಡಬೇಕು ಎಂದು ಒಪ್ಪಂದ ಮಾಡಿ ಕೊಂಡಿದ್ದವು. ಆದರಂತೆ ಶೀಲಾ ದಿನೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೆವು. ಆಂತರಿಕ ಒಪ್ಪಂದದಂತೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಪ್ರಭಾರ ಅಧ್ಯಕ್ಷರನ್ನಾಗಿ ಲಲಿತ ರವಿ ನಾಯಕ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ 10 ತಿಂಗಳ ಅವಧಿಗೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.
ಎಂ.ಆರ್.ದೇವರಾಜ ಶೆಟ್ಟಿ ಬಿಜೆಪಿ ಜಿಲ್ಲಾಧ್ಯಕ್ಷ... ಕೋಟ್...ಚಿಕ್ಕಮಗಳೂರು ನಗರಸಭೆಯಲ್ಲಿ ಕೆಲಗೊಂದಲಗಳ ಹೊರತಾಗಿ ಪಕ್ಷಾತೀತವಾಗಿ ಎಲ್ಲರೂ ಕಾರ್ಯ ನಿರ್ವಹಣೆ ಮಾಡುತ್ತಿ ದ್ದಾರೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ನಗರಸಭೆ ಯಲ್ಲಿ ಅತ್ಯದ್ಭುತವಾಗಿ ಕೆಲಸ ಮಾಡಿರುವ ಸದಸ್ಯರಿಗೆ ಅಧ್ಯಕ್ಷರ ಅಧಿಕಾರ ಸಿಗಲಿದೆ. ಮುಂದೆ ಅಧಿಕಾರ ಸ್ವೀಕರಿಸಲಿರುವ ಅಧ್ಯಕ್ಷರು ಉತ್ತಮ ಕೆಲಸ ಮಾಡಿ ಜನರಿಗೆ ಅನುಕೂಲ ಒದಗಿಸುವ ಜೊತೆಗೆ ನಮ್ಮ ಪಕ್ಷಕ್ಕೂ ಕೀರ್ತಿ ತರಲಿ.
-ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ