ಭೂ ಸ್ವಾಧೀನದ ಪರಿಹಾರ ಶೀಘ್ರ ನೀಡಿ ರಸ್ತೆ ವಿಸ್ತರಣೆ: ಎಂ.ಶ್ರೀನಿವಾಸ್

| Published : Nov 24 2025, 01:45 AM IST

ಸಾರಾಂಶ

ನರಸಿಂಹರಾಜಪುರ, ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರ ಹಾಗೂ ಪಟ್ಟಣ ಪಂಚಾಯಿತಿಯಿಂದ ಸುಂಕದ ಕಟ್ಟೆವರೆಗಿನ ಭೂ ಸ್ವಾಧೀನಕ್ಕೆ ಪರಿಹಾರ ನೀಡಿ ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

- ಪ್ರವಾಸಿ ಮಂದಿರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರ ಹಾಗೂ ಪಟ್ಟಣ ಪಂಚಾಯಿತಿಯಿಂದ ಸುಂಕದ ಕಟ್ಟೆವರೆಗಿನ ಭೂ ಸ್ವಾಧೀನಕ್ಕೆ ಪರಿಹಾರ ನೀಡಿ ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

ಶನಿವಾರ ಪ್ರವಾಸಿ ಮಂದಿರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ರಸ್ತೆ ವಿಸ್ತರಣೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಸ್ತೆ ವಿಸ್ತರಣೆಗೆ ₹60 ಕೋಟಿ ಮಂಜೂರಾಗಿದ್ದು ಈ ಅನುದಾನ ಲೋಕೋಪ ಯೋಗಿ ಇಲಾಖೆಗೆ ಖಾತೆಗೆ ಜಮಾ ಆಗಿದೆ. ಭೂ ಸ್ವಾಧೀನ ಅಧಿಕಾರಿಯಾಗಿ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಅವರನ್ನು ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆವ ರಸ್ತೆ ವಿಸ್ತರಣೆಗೆ ತಮ್ಮ ಜಾಗ ಬಿಟ್ಟು ಕೊಡುವ ಖಾತೆ ದಾರರಿಗೆ ಸರ್ಕಾರದ ನಿಯಮದಂತೆ ಪರಿಹಾರ ನೀಡಲಾಗುತ್ತದೆ. ನಂತರ ಖಾತೆದಾರರಿಂದ ಸ್ವಾಧೀನಕ್ಕೆ ಪಡೆದುಕೊಂಡ ಜಾಗಕ್ಕೆ ಪರಿಹಾರದ ಮೊತ್ತವನ್ನು ಖಾತೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಪರಿಹಾರದ ಮೊತ್ತ ಎಷ್ಟು ಸಿಗಲಿದೆ ಎಂಬ ಲೆಕ್ಕಾಚಾರ ಮಾಡಬೇಕಾದರೆ ಅಳತೆ ಮಾಡಬೇಕಾಗಿದೆ. ಕೆಲವರು ಅಳತೆ ಮಾಡಲು ಸಹಕರಿಸುತ್ತಿಲ್ಲ. ಸಹಕಾರ ನೀಡಿದರೆ ಹಂಚಿನಮನೆ, ಆರ್.ಸಿ.ಸಿ. ಮನೆ, ಖಾಲಿ ಮನೆ, ಖಾಲಿ ನಿವೇಶನ, ನೆಲ ಹಾಸು ಸೇರಿದಂತೆ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಪರಿಹಾರ ಮೊತ್ತ ನಿರ್ಧರಿಸಲಾಗುವುದು ಎಂದರು.

ಸರ್ಕಾರ ಸಚಿವ ಸಂಪುಟ ಸಭೆಯಲ್ಲಿಯೇ ರಸ್ತೆ ವಿಸ್ತರಣೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದೆ. ಆದರೆ, ಕೆಲವರು ಪರಿಹಾರ ನೀಡಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.ಇದಕ್ಕೆ ಯಾರೂ ಕಿವಿಕೊಡ ಬಾರದು. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಸಂಪೂರ್ಣ ಮನೆ ಕಳೆದುಕೊಳ್ಳುವ 3- 4 ಜನರಿಗೆ ಪರಿಹಾರದ ಜೊತೆಗೆ ಆಶ್ರಯ ಬಡಾವಣೆಯಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಗಿದೆ. ವ್ಯಾಪಾರ, ವ್ಯವಹಾರ ಮಾಡುವವರು ಅಂಗಡಿ, ಮಳಿಗೆ ಕಳೆದುಕೊಂಡರೆ ಮತ್ತೆ ಕಟ್ಟಡ ಕಟ್ಟಿಕೊಳ್ಳುವವರೆಗೆ ತಾತ್ಕಾಲಿಕವಾಗಿ ಪಟ್ಟಣ ಪಂಚಾಯಿತಿಗೆ ಸೇರಿದ ಖಾಲಿ ಮಳಿಗೆಗಳನ್ನು ಮಾರುಕಟ್ಟೆ ದರದಲ್ಲಿ ಬಾಡಿಗೆಗೆ ನೀಡುವ ಬಗ್ಗೆ ತೀರ್ಮಾನಿಸಿದ್ದೇವೆ. ರಸ್ತೆ ವಿಸ್ತರಣೆಗೆ ಈಗಾಗಲೇ ಬಹುತೇಕ ಖಾತೆದಾರರು ಒಪ್ಪಿಗೆ ಪತ್ರ ನೀಡಿದ್ದು ನಿಯಮದಂತೆ ಅವರಿಗೆ ಸಂಬಂಧಪಟ್ಟ ಭೂಮಿ ಸ್ವಾಧೀನ ಪಡಿಸಿಕೊಂಡು ಅವರ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದರು.

ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ತಮ್ಮ ಆಸ್ತಿ ಉಳಿಸಿಕೊಳ್ಳಲು ರಸ್ತೆ ವಿಸ್ತರಣೆ ಆಗದಂತೆ ತಡೆಗಟ್ಟಲು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ನನಗೆ ಬೇಸರ ತಂದಿದೆ. ರಸ್ತೆ ವಿಸ್ತರಣೆಯಲ್ಲಿ ನಾನು ಹುಟ್ಟಿದ ಮನೆ ಅರ್ಧ ಭಾಗವೇ ಹೋಗಲಿದೆ. ಯಾರೇ ಅಡ್ಡಿ ಪಡಿಸಿದರೂ ರಸ್ತೆ ವಿಸ್ತರಣೆ ಮಾಡುವುದು ಶತಃ ಸಿದ್ಧ ಎಂದರು.

ಸಭೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್. ತಹಸೀಲ್ದಾರ್ ಡಾ.ನೂರಲ್ ಹುದಾ, ಪಪಂ ಮುಖ್ಯಾಧಿಕಾರಿ ಆರ್ ವಿ.ಮಂಜುನಾಥ್, ಲೋಕೋಪಯೋಗಿ ಎಂಜಿನಿಯರ್ ಸತೀಶ್ ಕುಮಾರ್, ದಿನೇಶ್ ನಾಯಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಮಾಜಿ ಅಧ್ಯಕ್ಷೆ ಜುಬೇದ, ಮಾಜಿ ಸದಸ್ಯರಾದ ಪ್ರಶಾಂತಶೆಟ್ಟಿ, ಸುನೀಲ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ ಇದ್ದರು.