ಸರ್ಕಾರಿ ಜಮೀನುಗಳ ಒತ್ತುವರಿ ಪತ್ತೆಗೆ ಲ್ಯಾಂಡ್‌ಬೀಟ್ ಯೋಜನೆ: ಸಚಿವ ಕೃಷ್ಣ ಭೈರೇಗೌಡ

| Published : Aug 16 2024, 12:59 AM IST / Updated: Aug 16 2024, 11:58 AM IST

ಸಾರಾಂಶ

ಲ್ಯಾಂಡ್‌ಬೀಟ್‌ ಯೋಜನೆ ಮೂಲಕ ಸರ್ಕಾರಿ ಜಮೀನುಗಳ ಒತ್ತುವರಿಯನ್ನು ಗುರುತಿಸಲು ಕಂದಾಯ ಇಲಾಖೆ ಕ್ರಮ ವಹಿಸಿದೆ.

ಬಳ್ಳಾರಿ: ಲ್ಯಾಂಡ್‌ಬೀಟ್‌ ಯೋಜನೆ ಮೂಲಕ ಸರ್ಕಾರಿ ಜಮೀನುಗಳ ಒತ್ತುವರಿಯನ್ನು ಗುರುತಿಸಲು ಕಂದಾಯ ಇಲಾಖೆ ಕ್ರಮ ವಹಿಸಿದೆ. ಈ ಸಂಬಂಧ ಗ್ರಾಮವಾರು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಸ್ವಾತಂತ್ರ್ಯೋತ್ಸವ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14.32 ಲಕ್ಷ ಎಕರೆ ಸರ್ಕಾರಿ ಜಾಗವನ್ನು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪತ್ತೆ ಮಾಡಲಾಗಿದೆ. ಇವುಗಳ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ. ಈಗಾಗಲೇ 13.04 ಲಕ್ಷ ಎಕರೆ ಜಮೀನುಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಪೈಕಿ 91 ಸಾವಿರ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು "ಲ್ಯಾಂಡ್ ಬೀಟ್ " ಮೊಬೈಲ್ ತಂತ್ರಾಂಶದ ಮೂಲಕ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಜಮೀನುಗಳನ್ನು ಸರ್ವೆ ವ್ಯಾಪ್ತಿಗೆ ತರಲಾಗುವುದು. ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಜಮೀನು ಸಹ ಗುರುತಿಸುವ ಚಿಂತನೆ ನಡೆದಿದೆ. ಲ್ಯಾಂಟ್‌ಬೀಟ್ ಯೋಜನೆ ಅನುಷ್ಠಾನದಿಂದ ಸರ್ಕಾರಿ ಜಮೀನು ಒತ್ತುವರಿಯಾಗದಂತೆ ಶಾಶ್ವತವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.

ಭೂ ಸುರಕ್ಷಾ ಯೋಜನೆ ಜಾರಿ:

ಭೂ ಸುರಕ್ಷಾ ಕಾರ್ಯಕ್ರಮದಡಿ ರಾಜ್ಯದ 31 ತಾಲೂಕಿನಲ್ಲಿ ಈವರೆಗೆ 4.43 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಪ್ರಾಯೋಗಿಕವಾಗಿ 31 ತಾಲೂಕುಗಳನ್ನು ತೆಗೆದುಕೊಳ್ಳಲಾಗಿದೆ. ಬಳಿಕ ಉಳಿದ ತಾಲೂಕುಗಳನ್ನು ಸೇರಿಸಿಕೊಳ್ಳಲಾಗುವುದು. ಬಳ್ಳಾರಿ ಜಿಲ್ಲೆಯ ಕುರುಗೋಡು, ಬಳ್ಳಾರಿ ತಾಲೂಕನ್ನು ಮೊದಲ ಹಂತದ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಮುಂದಿನ ವರ್ಷದೊಳಗೆ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ದಾಖಲೆಗಳನ್ನು ಒದಗಿಸುವುದರ ಜೊತೆಗೆ, ದಾಖಲೆಗಳ ತಿರುಚುವಿಕೆ, ದಾಖಲೆಗಳ ನಾಪತ್ತೆ ಮೊದಲಾದವುಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

ಪಹಣಿ-ಆಧಾರ್ ಜೋಡಣೆ:

ಜಮೀನು ಮಾರಾಟದಲ್ಲಿ ವಂಚನೆ ತಡೆಗೆ ಪಹಣಿ-ಆಧಾರ್ ಜೋಡಣೆ ಕೈಗೊಳ್ಳಲಾಗಿದೆ. ಯಾರದೋ ಹೆಸರಿನ ಜಮೀನನ್ನು ಮತ್ಯಾರೋ ತಮ್ಮ ಹೆಸರಿಗೆ ಮಾಡಿಕೊಳ್ಳುವ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ರಾಜ್ಯ ಸರ್ಕಾರ ಪಹಣಿಗೆ ಆಧಾರ್ ಜೋಡಣೆ ಮಾಡುತ್ತಿದೆ. ಈಗಾಗಲೇ ರಾಜ್ಯದಲ್ಲಿ 2.75 ಕೋಟಿ ಪಹಣಿಗಳಿಗೆ ಆಧಾರ್ ಜೋಡಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 5,23,542 ರೈತರ ಜಮೀನುಗಳ ಪೈಕಿ 4,12,084 ಭೂ ಮಾಲೀಕರ ಜಮೀನನ್ನು ಅವರ ಆಧಾರ ಸಂಖ್ಯೆಗೆ ಜೋಡಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಗೆ ಕಡಿವಾಣ ಹಾಕಲು ಈ ಕ್ರಮ ಅಗತ್ಯವಿತ್ತು ಎಂದರು.

ಸರ್ವೇಯರ್ ನೇಮಕಕ್ಕೆ ಒಪ್ಪಿಗೆ:

ಸರ್ವೇಯರ್ ಹುದ್ದೆಗಳು ಖಾಲಿ ಇದ್ದು ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರುತ್ತಿದ್ದಂತೆಯೇ 750 ಸರ್ವೇಯರ್ ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಎಡಿಎಲ್‌ಆರ್, ಸರ್ವೇಯರ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಶಾಸಕ ನಾರಾ ಭರತ್ ರೆಡ್ಡಿ, ವಿಪ ಶಾಸಕ ವೈ.ಎಂ.ಸತೀಶ್, ಡಾ.ಬಾಬು ಜಗಜೀವನರಾಮ್, ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ ಇದ್ದರು.ಗ್ಯಾರಂಟಿ ಯೋಜನೆಯ ಅಪಸ್ವರವಿಲ್ಲ:ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಅಪಸ್ವರಗಳಿಲ್ಲ. ಯೋಜನೆಗಳ ಪರಿಷ್ಕರಣೆಯ ಬಗ್ಗೆಯೂ ಚರ್ಚೆಯಾಗಿಲ್ಲ. ಗ್ಯಾರಂಟಿಗಳ ಕುರಿತು ಅನೇಕರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿಪ್ರಾಯ ಮಂಡಿಸಲು ಅವಕಾಶವಿದೆ. ಆದರೆ, ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ. ರಾಜ್ಯದ ಬಜೆಟ್‌ನ ಅನುದಾನ ಕಡಿತಗೊಳಿಸಿ ಗ್ಯಾರಂಟಿಗಳಿಗೆ ನೀಡಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದರು.

ವಾಲ್ಮೀಕಿ ನಿಗಮ ಕೇಸು: ತಪ್ಪಾಗಿರುವುದು ನಿಜ:

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಪ್ಪಾಗಿರುವುದು ನಿಜ. ಯಾವುದೇ ತಪ್ಪಾಗಿಲ್ಲ ಎಂದು ನಾನು ಸಮರ್ಥಿಸಿಕೊಳ್ಳುವುದಿಲ್ಲ. ₹84.5 ಕೋಟಿಯಲ್ಲಿ ಈಗಾಗಲೇ ₹45 ಕೋಟಿ ವಶಪಡಿಸಿಕೊಳ್ಳಲಾಗಿದೆ. ತಪ್ಪು ಯಾರು ಮಾಡಿದರೂ ತಪ್ಪೇ. ಹಗರಣದಲ್ಲಿ ಯಾರೇ ತಪ್ಪೆಸಗಿದ್ದರೂ ಕ್ರಮವಾಗುತ್ತದೆ. ಮುಡಾ ಹಗರಣದಲ್ಲಿ ವಿನಾಕಾರಣ ಪ್ರತಿಪಕ್ಷಗಳು ಬೊಬ್ಬೆ ಹೊಡೆಯುವುದು ಸರಿಯಲ್ಲ. ತನಿಖೆಯಾಗಲಿ. ತಪ್ಪಾಗಿದ್ದರೆ ಕ್ರಮವಾಗುತ್ತದೆ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಕುಟುಂಬದ ಹೆಸರಿನಲ್ಲಿನ 97 ಎಕರೆ ಜಮೀನು ಒತ್ತುವರಿಯಾಗಿರುವ ಕುರಿತು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಹೈಕೋರ್ಟ್‌ ನಲ್ಲಿ ದಾವೆ ಹೂಡಿದ್ದಾರೆ. ಹೈಕೋರ್ಟ್‌ಗೆ ಸರ್ಕಾರದಿಂದ ಅಗತ್ಯ ದಾಖಲೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.