ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ 1.10 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ಸರ್ಕಾರದ 6ನೇ ಗ್ಯಾರಂಟಿಯನ್ನು ಪೂರೈಸಿತು.

ಸಿರಿ ಧಾನ್ಯಗಳ ನಾಮಫಲಕ ಅನಾವರಣಗೊಳಿಸುವ ಮೂಲಕ ಹಾವೇರಿ ನಗರದ ಹೊರವಲಯದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಚಾಲನೆ ನೀಡಿದರು. ಜೊತೆಗೆ, ಭೂ ಗ್ಯಾರಂಟಿ ಸಮರ್ಪಣಾ ಘೋಷವಾಕ್ಯವುಳ್ಳ ನಾಮಫಲಕ ಅನಾವರಣಗೊಳಿಸಿದರು. ಈ ವೇಳೆ ಭೂ ಗ್ಯಾರಂಟಿ ಪುಸ್ತಕ ಬಿಡುಗಡೆ ಮಾಡಲಾಯಿತು. ಜೊತೆಗೆ, ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಉತ್ತಮ ಕೆಲಸ ಮಾಡಿದ ತಹಶೀಲ್ದಾರ್‌ರನ್ನು ಸನ್ಮಾನಿಸಲಾಯಿತು.

ಇದೇ ವೇಳೆ, ವೇದಿಕೆಯ ಬಲಭಾಗದಲ್ಲಿ ಇಡಲಾಗಿದ್ದ ವಿಧಾನಸೌಧದ ಮುಂದೆ ನಿಂತಿರುವ ಸಿಎಂ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅನಾವರಣಗೊಳಿಸಿದರು.

ಬಳಿಕ, ಹಾವೇರಿ ಸೇರಿದಂತೆ 9 ಜಿಲ್ಲೆಗಳಿಂದ ಆಗಮಿಸಿದ್ದ ಫಲಾನುಭವಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ 100 ಹಕ್ಕುಪತ್ರ ವಿತರಿಸಿದರು. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಭೂ ಸಮರ್ಪಣಾ ಸಮಾವೇಶಕ್ಕೆ ಒಂದೂ ಕಾಲು ಲಕ್ಷ ಜನ ಸಾಕ್ಷಿಯಾದರು.


ಜಿಡಿಪಿಯಲ್ಲಿ ನಾವೇ ನಂಬರ್‌ ಒನ್‌:

ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸರ್ಕಾರದ ಇತರ ಸಚಿವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸತತವಾಗಿ ಆಗುತ್ತಿರುವ ಅನ್ಯಾಯದ ವಿರುದ್ಧ ಕಿಡಿ ಕಾರಿದರು. ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನಗಳನ್ನು ಬಿಡಿಬಿಡಿಯಾಗಿ ವಿವರಿಸಿದರು.

ಸಿದ್ದರಾಮಯ್ಯ ಮಾತನಾಡಿ, ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ದಾಖಲೆ ನಿರ್ಮಿಸಿದ್ದೇವೆ. ಗ್ಯಾರಂಟಿಗಳ ಅನುಷ್ಠಾನದ ಮೂಲಕ ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರನೆಂದು ಹೆಮ್ಮೆಯಿಂದ ಹೇಳಿದರು.

ಸರ್ಕಾರದ ಸಾಧನಾ ಸಮಾವೇಶ ಮಾಡುತ್ತಿರುವುದು ಸಾವಿರ ದಿನಾಚರಣೆಯ ಮೈಲಿಗಲ್ಲು ಅಲ್ಲ. ರಾಜ್ಯದ ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಮುಂದುವರಿಸಲು ಈ ಸಮಾವೇಶ ಆಯೋಜಿಸುತ್ತಿದ್ದೇವೆ ಎಂದರು.

ಏಳನೇ ಗ್ಯಾರಂಟಿಗೂ ಬದ್ಧ:

ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆಗೆ ಅನುಮತಿ ಕೊಟ್ಟರೆ ಏಳನೇದಾಗಿ ನೀರಿನ ಗ್ಯಾರಂಟಿ ನೀಡಲಾಗುವುದು ಎಂದು ಘೋಷಿಸಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಕೆ.ಜೆ.ಜಾರ್ಜ್‌, ಗೃಹ ಸಚಿವ ಡಾ। ಜಿ.ಪರಮೇಶ್ವರ, ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ, ಶಿವಾನಂದ ಪಾಟೀಲ, ಸತೀಶ ಜಾರಕಿಹೊಳಿ, ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಭೈರತಿ ಸುರೇಶ್‌, ಮಂಕಾಳ ವೈದ್ಯ, ಡಿ.ಸುಧಾಕರ್‌, ಶಿವರಾಜ ತಂಗಡಗಿ ಹಲವು ಸಚಿವರು, ಶಾಸಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

6.5 ಅಡಿ ಎತ್ತರದ ಸಿಎಂ ಪುತ್ಥಳಿ ಅನಾವರಣ:

ಇಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ವಿಧಾನಸೌಧದ ಮುಂದೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅನಾವರಣಗೊಳಿಸಿದರು. ವೇದಿಕೆಯ ಬಲಭಾಗದಲ್ಲಿ ಇಡಲಾಗಿದ್ದ ಸಿದ್ದರಾಮಯ್ಯ ಅವರ 6.5 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ ಡಿಕೆಶಿ, ಬಳಿಕ, ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.ತಮ್ಮ ಮೂರ್ತಿಯನ್ನು ನೋಡಿದ ಸಿದ್ದರಾಮಯ್ಯ ಸಂತಸಗೊಂಡು, ಬಹಳ ಉತ್ತಮವಾಗಿ ಮೂರ್ತಿ ರಚಿಸಿದ್ದಾರೆ ಎಂದು ಖುಷಿ ಹಂಚಿಕೊಂಡರು. ನಾನೇ ನಿಂತಂತೆ ಕಾಣುತ್ತದೆ ಎಂದು ವೇದಿಕೆಯಲ್ಲೇ ಸಂತಸ ಹಂಚಿಕೊಂಡರು.ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯ ಕೆಳಗಿಳಿದು ಬಂದು ತಮ್ಮ ಮೂರ್ತಿಯನ್ನು ಕಣ್ತುಂಬಿಕೊಂಡರು. ಎದುರು ನಿಂತು ಫೋಟೋಗೆ ಪೋಸ್‌ ನೀಡಿದರು. ಬಳಿಕ ರಾಕ್‌ ಗಾರ್ಡನ್‌ನ ವೇದಾರಣಿ ಪ್ರಕಾಶ ದಾಸನೂರ ಅವರನ್ನು ಅಭಿನಂದಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 1 ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಸಮೀಪದ ಗೊಟಗೋಡಿಯ ಉತ್ಸವ ರಾಕ್‌ ಗಾರ್ಡನ್‌ನವರು ಈ ಮೂರ್ತಿ ತಯಾರಿಸಿದ್ದಾರೆ.ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ನಿಂತಂತೆ ಮೂರ್ತಿ ರಚನೆಯಾಗಿದೆ. ಗೊಟಗೋಡಿ ರಾಕ್ ಗಾರ್ಡನ್ ಮುಖ್ಯಸ್ಥ ದಾಸನೂರ್ ಅವರು ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂರ್ತಿಯನ್ನು ರಾಕ್‌ ಗಾರ್ಡನ್‌ನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.