ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಚದರಗೊಳ್ಳ ಗ್ರಾಮದ ಸರ್ಕಾರಿ ಜಮೀನಿನ ಭೂ ವಿವಾದ ಬಗೆಹರಿಸಲು ಮಂಗಳವಾರ ಆಯೋಜಿಸಿದ್ದ ಸಂಧಾನ ಸಭೆಯು ತೀವ್ರ ಗೊಂದಲದ ಗೂಡಾಗಿ ಪರಿಣಮಿಸಿದೆ. ಸಭೆ ಮಧ್ಯೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಅಧಿಕಾರಿಗಳು ಬೇಸರದಿಂದಲೇ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದ ಘಟನೆ ನಡೆದಿದೆ.ಅಧಿಕಾರಿಗಳ ಎಡವಟ್ಟು:
ಗ್ರಾಮದ ಸರ್ವೆ ನಂ. ೬೨/೧ರಲ್ಲಿನ ೧೩.೩೧ ಎಕರೆ ಸರ್ಕಾರಿ ಜಮೀನಿನ ಹಂಚಿಕೆಯಲ್ಲಿ ಕಂದಾಯ ಅಧಿಕಾರಿಗಳು ನಿಯಮ ಗಾಳಿಗೆ ತೂರಿರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ನಿಯಮಾವಳಿಗಳ ಪ್ರಕಾರ ೧೦ ರಿಂದ ೨೦ ವರ್ಷಗಳಿಂದ ಸ್ಥಳದಲ್ಲಿ ವಾಸವಿದ್ದ ನಿವೇಶನರಹಿತರಿಗೆ ಮಾತ್ರ ಜಾಗ ನೀಡಬೇಕಿತ್ತು. ಆದರೆ, ಹಿಂದಿನ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮತ್ತು ಕಂದಾಯ ಅಧಿಕಾರಿಗಳು ಈಗಾಗಲೇ ಖಾಲಿ ನಿವೇಶನ ಹೊಂದಿದ್ದ ೯ ಮಂದಿಗೆ ನಕಲಿ ದಾಖಲೆಗಳ ಆಧಾರದ ಮೇಲೆ ತರಾತುರಿಯಲ್ಲಿ ಹಕ್ಕುಪತ್ರ ನೀಡಿದ್ದರು. ಅಧಿಕಾರಿಗಳ ಈ ಎಡವಟ್ಟಿನ ವಿರುದ್ಧ ಗ್ರಾಮಸ್ಥರು ಮಾರ್ಚ್ ತಿಂಗಳಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದರು.ಸಭೆಯಲ್ಲಿ ನಡೆದಿದ್ದೇನು?:
ಗ್ರಾಮಸ್ಥರ ತೀವ್ರ ವಿರೋಧದ ಹಿನ್ನೆಲೆ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಎಸಿ ಸಂತೋಷ್‌ಕುಮಾರ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸುಮಾರು ೩ ತಾಸು ಸುದೀರ್ಘ ಸಭೆ ನಡೆಸಿದರು. ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡ ಶಾಸಕರು, "ಈಗ ನೀಡಿರುವ ಹಕ್ಕುಪತ್ರಗಳನ್ನು ರದ್ದುಪಡಿಸಿ, ಹೊಸದಾಗಿ ವ್ಯವಸ್ಥಿತ ಲೇಔಟ್ ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು " ಎಂಬ ಮಹತ್ವದ ನಿರ್ಧಾರ ಪ್ರಕಟಿಸಿದರು.
ಶಾಸಕರ ಈ ಆಶ್ವಾಸನೆಗೆ ಶೇ.೯೯ರಷ್ಟು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರಾದರೂ, ಅದೇ ಗ್ರಾಮದ ಹನುಮಂತಪ್ಪ ಎಂಬ ವ್ಯಕ್ತಿ ತೀವ್ರ ವಿರೋಧ ವ್ಯಕ್ತಪಡಿಸಿದನು. "ನನಗೆ ಅನ್ಯಾಯವಾದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ... " ಎಂದು ಆತ ಸಭೆಯಲ್ಲೇ ಬಹಿರಂಗ ಬೆದರಿಕೆ ಹಾಕಿದಾಗ ಇಡೀ ಸಭೆ ಗದ್ದಲದ ಗೂಡಾಯಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡು ಬೇಸತ್ತ ಶಾಸಕರು ಮತ್ತು ಅಧಿಕಾರಿಗಳು ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ನಿರ್ಗಮಿಸಿದರು.
ತಪ್ಪಿತಸ್ಥರ ಅಮಾನತಿಗೆ ಸೂಚನೆ:ಪೂರ್ವಾಪರ ಪರಿಶೀಲಿಸದೇ ಬೇಕಾಬಿಟ್ಟಿ ಹಕ್ಕುಪತ್ರ ನೀಡಿ ಗ್ರಾಮದಲ್ಲಿ ಗೊಂದಲ ಸೃಷ್ಟಿಸಿದ ಅಧಿಕಾರಿಗಳ ವಿರುದ್ಧ ಶಾಸಕ ಬಿ.ದೇವೇಂದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಎಸಗಿದ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸ್ಥಳದಲ್ಲಿದ್ದ ಎಸಿ ಸಂತೋಷ್‌ಕುಮಾರ್ ಅವರಿಗೆ ಶಾಸಕರು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಗುರುಬಸವರಾಜಪ್ಪ, ತಾಪಂ ಇಒ ಕೆಂಚಪ್ಪ ಸೇರಿದಂತೆ ಚದರಗೊಳ್ಳ ಗ್ರಾಮದ ೩೦೦ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು.- - -
(ಕೋಟ್) ಸದ್ಯ ವಿವಾದಿತ ಸ್ಥಳದ ಮಹಜರ್ ಮಾಡಲಾಗಿದೆ. ಗ್ರಾಮದಲ್ಲಿ ಭಿನ್ನಾಭಿಪ್ರಾಯಗಳು ಇರುವುದರಿಂದ ಶೀಘ್ರದಲ್ಲೇ ಜಮೀನಿನ ಮರು ಸರ್ವೆ ಮಾಡಿಸಲಾಗುವುದು. ಕೇವಲ ಅರ್ಹರನ್ನು ಗುರುತಿಸಿ ಅವರಿಗೆ ಮಾತ್ರ ಹೊಸದಾಗಿ ಹಕ್ಕುಪತ್ರ ವಿತರಿಸಲಾಗುವುದು.- ಸಂತೋಷ್‌ಕುಮಾರ್, ಎಸಿ
- - - -09ಜೆ.ಜಿ.ಎಲ್.1: ಚದರಗೊಳ್ಳ ಗ್ರಾಮದ ಸರ್ಕಾರಿ ಜಮೀನಿನ ಭೂ ವಿವಾದ ಬಗೆಹರಿಸಲು ಮಂಗಳವಾರ ಶಾಸಕರು, ಉಪವಿಭಾಗಾಧಿಕಾರಿ, ಗ್ರಾಮಸ್ಥರ ನಡುವೆ ಸಂಧಾನ ಸಭೆ ನಡೆಯಿತು.