ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಜಿಲ್ಲಾ- ತಾಲೂಕು ಕೇಂದ್ರದಲ್ಲಿ ನಿವೇಶನಗಳಿಗೆ ಅಗತ್ಯ ಪತ್ರಕರ್ತರ ಪಟ್ಟಿ ಮಾಡಿದರೆ ಲಭ್ಯತೆಯ ಅನುಸಾರ ಸೌಲಭ್ಯ ಕಲ್ಪಿಸಲಾಗುತ್ತದೆ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ತಾಲೂಕುವಾರು ಸೈಟ್‌ಗಳನ್ನು ಕೊಡಲು ರೂಪುರೇಷೆಗಳನ್ನು ಸಿದ್ಧಪಡಿಸಬಹುದಾಗಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಕೋಲಾರ
ಕೋಲಾರ ಕಾರ್ಯನಿರತ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಪದಗ್ರಹಣ ಹಾಗೂ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಸತ್ಯವನ್ನೇ ಬರೆಯುವ ಮೂಲಕ ಪ್ರಜಾಪ್ರಭುತ್ವದ ೪ನೇ ಅಂಗ ಎತ್ತಿಹಿಡಿಯಬೇಕಾಗಿದ್ದು, ಈ ದೆಸೆಯಲ್ಲಿ ಪತ್ರಕರ್ತರ ನಿವೇಶನಗಳಿಗೆ ಬೇಕಾದ ಜಮೀನನ್ನು ಒದಗಿಸುವುದರೊಂದಿಗೆ ಪತ್ರಕರ್ತರಿಗೆ ನ್ಯಾಯ ಕೊಡಲಾಗುವುದು, ಪತ್ರಕರ್ತರ ಭವನದ ಹಾಲ್‌ಅನ್ನು ನವೀಕರಣ ಮಾಡಿಸಿ ಎಸಿ ಅಳವಡಿಸಲು ನೆರವು ನೀಡುವುದಾಗಿ ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಜಿಲ್ಲಾ- ತಾಲೂಕು ಕೇಂದ್ರದಲ್ಲಿ ನಿವೇಶನಗಳಿಗೆ ಅಗತ್ಯ ಪತ್ರಕರ್ತರ ಪಟ್ಟಿ ಮಾಡಿದರೆ ಲಭ್ಯತೆಯ ಅನುಸಾರ ಸೌಲಭ್ಯ ಕಲ್ಪಿಸಲಾಗುತ್ತದೆ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ತಾಲೂಕುವಾರು ಸೈಟ್‌ಗಳನ್ನು ಕೊಡಲು ರೂಪುರೇಷೆಗಳನ್ನು ಸಿದ್ಧಪಡಿಸಬಹುದಾಗಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಜ್ಞಾನಾರ್ಜನೆಗೆ ಪತ್ರಿಕೆ ಪೂರಕ, ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸಲು ತಾವು ವೈಯಕ್ತಿಕವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಪತ್ರಿಕಾ ರಂಗ ಆಡಳಿತದ ಒಂದು ಭಾಗವಾಗಿದ್ದು ಅವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದನೆ ನೀಡಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ತೀವ್ರ ಮತ್ತು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದ್ದು, ಸಮಸ್ಯೆಗಳನ್ನು ಗಮನಕ್ಕೆ ತಂದರೆ ತಕ್ಷಣ ಪರಿಹರಿಸಲಾಗುತ್ತದೆ. ಅಧಿಕಾರದ ಅಹಂ ತೊರೆದು ಸಾರ್ವಜನಿಕ ಸೇವಕನಾಗಿ ದುಡಿಯಲು ಮುಂದಾದರೆ ಜನಪ್ರತಿನಿಧಿಗಳು- ಜನರ ಸಹಕಾರ ಸಿಕ್ಕೇ ಸಿಕ್ಕುತ್ತದೆ ಎಂದು ನುಡಿದರು.
ಸಂಘದ ಅಧ್ಯಕ್ಷ ವಿ.ಮುನಿರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ೨೮೦ ಪತ್ರಕರ್ತರಲ್ಲಿ ಶೇ.೫೦ ಮಂದಿ ಬಾಡಿಗೆ ಮನೆಯಲ್ಲಿದ್ದು ಅವರೆಲ್ಲರಿಗೆ ಸೂರು ಕಲ್ಪಿಸುವ ದೆಸೆಯಿಂದಾಗಿ ಸಂಘಕ್ಕೆ ಚಾಲನೆ ನೀಡಿದೆ, ಈ ಹಿಂದೆ ಮೈಸೂರು ಡೀಸಿಯಾಗಿದ್ದಾಗ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸಿರುವ ಜಿಲ್ಲಾಧಿಕಾರಿಯವರು, ತವರು ನೆಲದ ಪತ್ರಕರ್ತರಿಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಆಗ್ರಹಿಸಿದರು.ಕೊತ್ತೂರು ಮಂಜುನಾಥ್ ಶಾಸಕರಾಗುವ ಮೊದಲೇ ಕೋಲಾರ ಪತ್ರಕರ್ತರ ಸಂಘಕ್ಕೆ ₹೨೬.೫೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹಾಲ್ ಒದಗಿಸಿಕೊಡುವ ಮೂಲಕ ಪತ್ರಕರ್ತರ ಪರವಾಗಿ ನಿಂತಿದ್ದಾರೆ. ಜೋಡೆತ್ತುಗಳಂತೆ ಅಭಿವೃದ್ಧಿ ಮಾಡುತ್ತಿರುವ ಎಂಎಲ್ಸಿ ಅನಿಲ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್ ಪತ್ರಕರ್ತರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಮುನಿರಾಜು ಮನವಿ ಮಾಡಿದರು.ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್ , ಪತ್ರಕರ್ತರ ಸಂಘದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಸಂಘದ ನಿರ್ದೇಶಕರಾದ ಎನ್.ಮುನಿವೆಂಕಟೇಗೌಡ, ಜಿ.ಮಂಜುನಾಥಗೌಡ, ಕೆ.ಗೋಪಿಕಾ ಮಲ್ಲೇಶ್, ದೊರೈ ಅರಸು, ವೆಂಕಟೇಶಪ್ಪ, ಎಸ್.ನಾರಾಯಣಸ್ವಾಮಿ, ಡಿ.ಎನ್.ಲಕ್ಷ್ಮೀಪತಿ, ಎಚ್.ಎಲ್.ನಾಗರಾಜ್, ಸಿಇಒ ಕೆ.ಎಸ್.ಮಂಜುನಾಥರಾವ್ ಇದ್ದರು.
ಗೀತಾ ಶ್ರೀನಿವಾಸ್‌ರಿಂದ ಪ್ರಾರ್ಥನೆ, ಜೆ.ಜಿ.ಶ್ರೀನಿವಾಸಮೂರ್ತಿರಿಂದ ನಿರೂಪಣೆ, ಸಂಘದ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ ವಂದಿಸಿದರು.