ಸಾರಾಂಶ
ರಾಜ್ಯ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ಪ್ರಮುಖರು ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯದ ಕಾಂಗ್ರೆಸ್ ಸರ್ಕಾರ ‘ವಕ್ಫ್ ಮಂಡಳಿ’ಯನ್ನು ಬಳಸಿಕೊಂಡು ರಾಜ್ಯ ವ್ಯಾಪಿ ಬಡವರ್ಗದ ಮಂದಿಯ ಜಾಗವನ್ನು ಕಬಳಿಸುವ ಪ್ರಯತ್ನಕ್ಕೆ ಮುಂದಾಗುತ್ತಿರುವುದಾಗಿ ಆರೋಪಿಸಿ, ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ವಾಪಂಡ ರವಿ ಕಾಳಪ್ಪ, ಎಂಎಲ್‌ಸಿ ಸುಜಾ ಕುಶಾಲಪ್ಪ ನೇತೃತ್ವದಲ್ಲಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಬಡ ಮಂದಿಯ ಜಾಗದ ಆರ್.ಟಿ.ಸಿಯಲ್ಲಿ “ವಕ್ಫ್ ಆಸ್ತಿ” ಎಂದಿರುವುದನ್ನು ತೆಗೆದು, ವಕ್ಫ್ ನಿಯಮಾವಳಿಗಳನ್ನು ಬದಲಿಸುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.ಈ ಸಂದರ್ಭ ಎಂಎಲ್‌ಸಿ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಬಿಜೆಪಿ ಪ್ರಮುಖರಾದ ರಾಬಿನ್ ದೇವಯ್ಯ, ಶಾಂತೆಯಂಡ ರವಿ ಕುಶಾಲಪ್ಪ, ಅನಿತಾ ಪೂವಯ್ಯ, ಸುವಿನ್ ಗಣಪತಿ, ವಿ.ಕೆ.ಲೋಕೇಶ್, ಮಹೇಶ್ ಜೈನಿ, ಕಾಂಗೀರ ಸತೀಶ್, ಕನ್ನಂಡ ಸಂಪತ್, ಕೆ.ಎಸ್.ರಮೇಶ್, ತಳೂರು ಕಿಶೋರ್ ಕುಮಾರ್, ಉಮೇಶ್ ಸುಬ್ರಮಣಿ, ಬಿ.ಬಿ.ಭಾರತೀಶ್, ಡೀನ್ ಬೋಪಣ್ಣ, ಅರುಣ್ ಶೆಟ್ಟಿ, ಬಿ.ಕೆ.ಜಗದೀಶ್, ಬಿ.ಕೆ.ಅರುಣ್ ಕುಮಾರ್, ಮನು ಮಂಜುನಾಥ್, ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಮೆರವಣಿಗೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.