ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬೆಳವಾಡಿ ಅಕ್ಕಪಕ್ಕದ ಗ್ರಾಮಗಳ ಬಳಿ ಇರುವ ಭೂಮಿಯನ್ನು ಕಬಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಅಂಬೇಡ್ಕರ್ ಸಮಿತಿ ಸದಸ್ಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಸಮಿತಿ ರಾಜ್ಯಾಧ್ಯಕ್ಷ ಸಂದೇಶ್ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ಆಗಮಿಸಿ ಅಕ್ರಮದಲ್ಲಿ ಭಾಗಿಯಾಗಿರುವ ತಾಲೂಕು ಆಡಳಿತದ ಕ್ರಮ ಖಂಡಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳವಾಡಿ ವ್ಯಾಪ್ತಿಯ ತರಿಪುರ ಸರ್ವೇ ನಂಬರ್ 4ರಲ್ಲಿ 4 ಎಕರೆ 4 ಗುಂಟೆ ಹಾಗೂ ಹೆಬ್ಬಾಡಿ ಸರ್ವೇ ನಂಬರ್ 11ರಲ್ಲಿ 6 ಎಕರೆ ಜಮೀನನ್ನು ಕೆಲವು ರೈತರು ಹಲವು ವರ್ಷಗಳಿಂದ ದುಡಿಮೆ ಮಾಡಿಕೊಂಡು ಬಂದ ಜಮೀನನ್ನು ಮಾಲೀಕರಲ್ಲದವರಿಗೆ ಅಕ್ರಮವಾಗಿ ರೈತರ ಹೆಸರು ಕೈಬಿಟ್ಟು ಭೂಗಳ್ಳರ ಹೆಸರಿಗೆ ನಮೂದಿಸಿ ಪಹಣಿ ಪತ್ರಗಳನ್ನು ವರ್ಗಾವಣೆ ಮಾಡಿರುವುದು ಕಂಡು ಬಂದಿದೆ ಎಂದು ದೂರಿದರು.

ಕೂಡಲೇ ತಾಲೂಕು ತಹಸೀಲ್ದಾರ್ ದಾಖಲೆಗಳನ್ನು ಪರಿಶೀಲಿಸಿ ಈ ಹಿಂದಿನಿಂದಲೂ ದುಡಿಮೆ ಮಾಡಿಕೊಂಡು ಬಂದ ರೈತರಿಗೆ ನೀಡಬೇಕು. ಈಗಾಗಲೇ ನೂರಾರು ಎಕರೆ ಸರ್ಕಾರಿ ಜಮೀನನ್ನು ಹಾಗೂ ರೈತ ಮಾಲೀಕತ್ವದ ಜಮೀನನ್ನು ಪರಭಾರೆ ಮಾಡಿದ್ದು, ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಅಕ್ರಮಗಳನ್ನು ಸರಿ ಪಡಿಸಿ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಆಡಳಿತದ ವಿರುದ್ಧ ಶ್ರೀರಂಗಪಟ್ಟಣದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಸಂಘಟನೆ ನೂರಾರು ಕಾರ್ಯಕರ್ತರು ಹಾಗೂ ನೊಂದ ರೈತರು ಇದ್ದರು.