ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಏಷಿಯಾದಲ್ಲೇ ಅತಿದೊಡ್ಡ ಯೋಜನೆ ಎನಿಸಿಕೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಮೂರ್ನಾಲ್ಕು ದಶಕಗಳು ಕಳೆದರೂ 3ನೇ ಹಂತ ಪೂರ್ಣಗೊಳಿಸಲಾಗುತ್ತಿಲ್ಲ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಲಕ್ಷಾಂತರ ಕುಟುಂಬಗಳು ತಮ್ಮ ಹೊಲ-ಮನೆಗಳನ್ನು ಹಾಗೂ ಇಡಿ ಊರನ್ನೇ ಕೃಷ್ಣೆಗೆ ಅರ್ಪಿಸಿದ್ದಾರೆ. ತಮ್ಮ ಬದುಕನ್ನೇ ಕೃಷ್ಣೆಗೆ ಅರ್ಪಿಸಿದ ಬಳಿಕ ಇಂದಿಗೂ ಜೀವನ ಸಾಗಿಸಲು ಹೆಣಗಾಡುವಂತಾಗಿದೆ. ಬರೋಬ್ಬರಿ 6 ದಶಕಗಳಿಂದ ಕುಂಟುತ್ತ ಸಾಗಿರುವ ಜೀವನಾಡಿಯೊಂದಿಗಿನ ಸಂತ್ರಸ್ತರ ಬದುಕು ದುಸ್ತರವಾಗಿದೆ. ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿದಂತೆ ಆರೇಳು ಜಿಲ್ಲೆಗಳಿಗೆ ವರವಾಗಿರುವ ಕೃಷ್ಣೆಯ ಒಡಲು ಸಂತ್ರಸ್ತರ ಪಾಲಿಗೆ ಶಾಪವಾದಂತಿದೆ.
ಆರ್ಥಿಕ ಹೊರೆ ತಗ್ಗಿಸಲು ಸರ್ಕಾರಗಳ ಹುನ್ನಾರ:ಈಗಿರುವ 519.60 ಮೀಟರ್ ಎತ್ತರದಿಂದ 524.256 ಮೀಟರ್ ಎತ್ತರಕ್ಕೆ ಏರಿಸುವ ಯೋಜನೆ ಮೊದಲಿನಿಂದಲೂ ಇದ್ದು, ಅದಕ್ಕೆ ಬೇಕಾಗುವ ₹2 ಲಕ್ಷ ಕೋಟಿ ಹಣವಿಲ್ಲ ಎಂದು ಸರ್ಕಾರಗಳು ಯೋಜನೆಯನ್ನು ಮಾಡಲು ಆಗದೆ ಬಿಡಲೂ ಆಗದೆ ತಟಸ್ಥವಾಗಿವೆ. ಈ ಮಧ್ಯೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಈ ಆಲಮಟ್ಟಿ ಜಲಾಶಯವನ್ನು 524ರ ಬದಲಿಗೆ 522ಕ್ಕೆ ಏರಿಸಿದರೆ ಹೇಗೆ ಎಂಬ ಆಂತರಿಕ ಚರ್ಚೆಗಳು ಕೂಡ ಆರಂಭಗೊಂಡಿವೆ. ಹೀಗೆ ಮಾಡುವುದರಿಂದ ಅರ್ಧದಷ್ಟು ಹೊರೆಯನ್ನು ಇಳಿಸಿಕೊಳ್ಳಬಹುದು ಎಂದು ಒಳಗೊಳಗೆ ಯೋಜನೆ ನಡೆದಿದೆ ಎನ್ನಲಾಗಿದೆ.
ಸಂತ್ರಸ್ತರ, ಅನ್ನದಾತರ ಆಕ್ರೋಶ:ಈಗಾಗಲೇ 519.60 ಮೀಟರ್ ಎತ್ತರದಿಂದ 524.256 ಮೀಟರ್ ಎತ್ತರಕ್ಕೆ ಯುಕೆಪಿ 3ನೇ ಹಂತದ ಯೋಜನೆ ರೂಪಿಸಿರುವುದರಿಂದ ಅಷ್ಟು ಎತ್ತರವನ್ನು ಮಾಡಲೇಬೇಕು ಅಥವಾ ಈಗಿರುವ ಎತ್ತರವನ್ನೇ ಅಂತಿಮಗೊಳಿಸಬೇಕು ಎಂದು ಸಂತ್ರಸ್ತರು ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ. ಹೀಗಾಗಿಯೇ ಬಾಗಲಕೋಟೆಯಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಇದಕ್ಕೆ ತಾರ್ಕಿಕ ಅಂತ್ಯ ಕಾಣುವ ವರೆಗೂ ಕೈ ಬಿಡಬಾರದು ಎಂದು ಹೋರಾಟ ಸಮಿತಿಗಳು ಹಾಗೂ ಸಂಘ-ಸಂಸ್ಥೆಗಳು ಪಣತೊಟ್ಟು ನಿಂತಿವೆ.
ಭರವಸೆಯಲ್ಲೇ ಕಳೆದುಹೋದ ಬದುಕು:ಈಗಿನ ಕಾಂಗ್ರೆಸ್ ಹಾಗೂ ಈ ಹಿಂದೆ ಆಳಿದ ಎಲ್ಲ ಸರ್ಕಾರಗಳೂ ಯುಕೆಪಿ 3ನೇ ಹಂತದ ಯೋಜನೆಗೆ ಲಕ್ಷಾಂತರ ಕೋಟಿ ಹಣವನ್ನು ಎಲ್ಲಿಂದ ತರುವುದು ಎಂದು ಯೋಚಿಸಿ ಸಂತ್ರಸ್ತರ ಬದುಕಿನಲ್ಲಿ ಕೇವಲ ಭರವಸೆಗಳನ್ನು ತುಂಬುತ್ತ ಬಂದಿದ್ದಾರೆ. ಆದರೆ, ಇದುವರೆಗೆ ಸಂತ್ರಸ್ತರ ಬದುಕು ನಿರ್ಮಾಣಗೊಂಡಿಲ್ಲ. ಬದುಕು ಕೃಷ್ಣಾರ್ಪಣವಾಗಿ ಹೋಗಿದೆ.
ಯುಕೆಪಿ ಹಂತ-3 ಯಾಕೆ ಬೇಕು?:ಯುಕೆಪಿ 3ನೇ ಹಂತದಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್ ಎತ್ತರ ಮಾಡುವುದರಿಂದ ಈ ಯೋಜನೆ ಪೂರ್ಣಗೊಂಡರೆ ಉಭಯ ಜಿಲ್ಲೆಗಳಷ್ಟೇ ಅಲ್ಲ, ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಈ ಭಾಗದ 16 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಇದರಿಂದ ರೈತರ ಬಾಳು ಹಸನಾಗಲಿದೆ. ಎರಡೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಗೆ ಬೇಕಾದ ಹಣವನ್ನು ಬಿಡುಗಡೆ ಮಾಡಬೇಕು ಅಷ್ಟೆ.
ಆಲಮಟ್ಟಿ ಜಲಾಶಯ ಎತ್ತರದಿಂದ ಮತ್ತೆ 22 ಹಳ್ಳಿಗಳ ಗ್ರಾಮಸ್ಥರು ಸಂತ್ರಸ್ತರಾಗಲಿದ್ದಾರೆ. ಅಲ್ಲದೆ 1.30 ಲಕ್ಷ ಎಕರೆ ರೈತರ ಜಮೀನು ಭೂಸ್ವಾಧೀನ ಆಗಲಿದೆ. ಇವರೆಲ್ಲರಿಗೂ ನ್ಯಾಯಯುತವಾಗಿರುವ ಈ ಯೋಜನೆಯನ್ನು ಕಾಲಮಿತಿಯಲ್ಲಿ ಸರ್ಕಾರ ಮಾಡಬೇಕಿದೆ.ಆಲಮಟ್ಟಿ ಜಲಾಶಯದಿಂದ ಬಾಧಿತರಾಗಿರುವ ರೈತರಿಗೆ, ಸಂತ್ರಸ್ತರಿಗೆ ಇದುವರೆಗೂ ಸರಿಯಾದ ನ್ಯಾಯವೇ ಸಿಗುತ್ತಿಲ್ಲ. ಡ್ಯಾಂನ ಎತ್ತರವನ್ನು 524 ಮೀ.ಗೆ ಸೇರಿಸಿದರೆ ಮತ್ತಷ್ಟು ಹಳ್ಳಿಗಳು ಹಾಗೂ ಜಮೀನುಗಳು ಮುಳುಗಡೆಯಾಗಲಿದ್ದು, ಅವುಗಳಿಗೆಲ್ಲ ಮೊದಲು ಪರಿಹಾರ ನೀಡಿದ ಬಳಿಕವೇ ನೀರು ನಿಲ್ಲಿಸುವ ವ್ಯವಸ್ಥೆ ಆಗಬೇಕು. ಕೃಷ್ಣೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ, ಸಂತ್ರಸ್ತರಿಗೆ ಅನ್ಯಾಯ ಆಗಬಾರದು.
ಡಾ.ಬಾಬುರಾಜೇಂದ್ರ ನಾಯಿಕ, ಕೃಷ್ಣೆಯ ಒಡಲಿನ ಬಾಧಿತರು.ಸಿಎಂ ಇಂದು ಸಂಜೆ 4 ಗಂಟೆಗೆ ಈ ಭಾಗದ ಶಾಸಕರು, ಸಂಸದರ ಸಭೆ ಕರೆದಿದ್ದಾರೆ. ನಾವೆಲ್ಲ ಶಾಸಕರು ಪಕ್ಷಾತೀತವಾಗಿ ಸಂತ್ರಸ್ತರ ದನಿಯಾಗಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಿದ್ದೇವೆ. ಅಲ್ಲದೇ, ಪ್ರಾಮಾಣಿಕವಾಗಿ ಸರ್ಕಾರದ ಗಮನ ಸೆಳೆಯುತ್ತೇವೆ. ಹೋರಾಟಕ್ಕೆ ಬೆಂಬಲ ನೀಡುತ್ತೇವೆ.
ಸುನೀಲಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ.