ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಭೂಕುಸಿತದಿಂದ ತಮ್ಮ ಮನೆಗಳನ್ನು ರಕ್ಷಣೆ ಮಾಡಿಕೊಳ್ಳಲು ಸೂಕ್ತ ತಡೆಗೋಡೆ ನಿರ್ಮಿಸುವಂತೆ ಬ್ರಾಹ್ಮಣ ಬೇದೂರು ಗ್ರಾಮಸ್ಥರು ಉಪ ವಿಭಾಗಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ.ತಾಲ್ಲೂಕಿನ ಬ್ರಾಹ್ಮಣ ಬೇದೂರು ಗ್ರಾಮದ ಸರ್ವೆ ನಂ.೭೪ರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗುಡ್ಡದ ಮೇಲೆ ಅಕ್ರಮ ಗಣಿಗಾರಿಕೆ ನಡೆದಿದೆ. ಗಣಿಗಾರಿಕೆ ಹೆಸರಿ ನಲ್ಲಿ ಕಲ್ಲುಗಳನ್ನು ಕಿತ್ತೊಗೆದು ದೊಡ್ಡದೊಡ್ಡ ಹೊಂಡಗಳನ್ನು ಮಾಡಲಾಗಿದೆ. ಹೊಂಡವನ್ನು ಮುಚ್ಚುವ ಕೆಲಸ ಈತನಕ ಮಾಡಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಗುಡ್ಡದ ಆಸುಪಾಸು ಅಕ್ರಮ ಗಣಿಗಾರಿಕೆ ನಡೆದ ಪರಿಣಾಮವಾಗಿ ಮಳೆಗಾಲದಲ್ಲಿ ವಿಪರೀತ ಗಾಳಿ ಮಳೆಗೆ ಗುಡ್ಡ ಕುಸಿಯುತ್ತಿದೆ. ಎರಡು ಮೂರು ವರ್ಷಗಳ ಹಿಂದೆ ಭೂ ಕುಸಿತದಿಂದ ನಮ್ಮ ಗ್ರಾಮದ ನಾಲ್ಕು ಮನೆಗಳು ಸಂಪೂರ್ಣ ನಾಶವಾಗಿತ್ತು. ಸರ್ಕಾರದ ಸಹಾಯಧನದಿಂದ ಮನೆ ನಿರ್ಮಿಸಿಕೊಳ್ಳಲಾಗಿದೆ. ಕಳೆದ ವರ್ಷ ಭೂ ಕುಸಿತ ಉಂಟಾಗಿ ಒಂದು ಮನೆ ಹಾನಿಯಾಗಿದೆ. ಆ ಸಂದರ್ಭದಲ್ಲಿ ತಡೆಗೋಡೆ ನಿರ್ಮಿಸಿ ಉಳಿದ ಮನೆಗಳನ್ನು ರಕ್ಷಣೆ ಮಾಡುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು. ಗಾಳಿ ಮಳೆಗೆ ದಿನದಿಂದ ದಿನಕ್ಕೆ ಗುಡ್ಡ ಕುಸಿಯುತ್ತಿದೆ. ಗ್ರಾಮಸ್ಥರು ಆತಂಕದಲ್ಲಿ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನೆ ಕಳೆದುಕೊಂಡವರಿಗೆ ಶೀಘ್ರ ಪರಿಹಾರಕ್ಕೆ ಆಗ್ರಹ
ಸಾಗರ: ಮಳೆಯಿಂದ ಮನೆ ಕಳೆದುಕೊಂಡವರಿಗೆ ಅನಧಿಕೃತ, ಅಧಿಕೃತ ಎಂಬ ಬೇಧವೆಣಿಸದೆ ೫ ಲಕ್ಷ ರು. ಪರಿಹಾರ ತಕ್ಷಣ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮನವಿ ಮಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಳೆದುಕೊಂಡವರಿಗೆ ನಿಗದಿತ ಅವಧಿಯಲ್ಲಿ ಪರಿಹಾರ ನೀಡಿದರೆ ಅವರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗು ತ್ತದೆ. ೨೦೨೦-೨೧ರಲ್ಲಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಈ ತನಕ ಪೂರ್ಣ ಪ್ರಮಾಣದ ಪರಿಹಾರದ ಮೊತ್ತ ದೊರೆತಿಲ್ಲ. ಸರ್ಕಾರದಿಂದ ೫ ಲಕ್ಷ ರು. ಪರಿಹಾರ ಬರುತ್ತದೆ ಎಂದು ಸಾಲ ಮಾಡಿ, ಬಂಗಾರ ಅಡವಿಟ್ಟು ಮನೆ ಕಟ್ಟಿಕೊಂಡಿದ್ದಾರೆ. ಈ ತನಕ ಅವರಿಗೆ ಪರಿಹಾರ ಬಂದಿಲ್ಲ. ಅಧಿಕಾರಿಗಳು ಸರ್ಕಾರ ಬದಲಾಗಿದೆ, ಹಣವಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಶಾಸಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಪ್ರತಿವರ್ಷ ನೆರೆ ಸಂದರ್ಭದಲ್ಲಿ ಬೀಸನಗದ್ದೆ ಭಾಗ ಜನಪ್ರತಿನಿಧಿಗಳಿಗೆ ಪಿಕ್ನಿಕ್ ಸ್ಪಾಟ್ ಆಗುತ್ತಿದೆ. ನೆರೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಸಚಿವರಾದ ಮೇಲೆ ಮಧು ಬಂಗಾರಪ್ಪ ಮೊದಲ ಬಾರಿಗೆ ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆರೆಪೀಡಿತ ಪ್ರದೇಶಕ್ಕೆ ಸಚಿವರು ಯಾವ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡು ಕೊಂಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು. ಸಂಸದರು, ಮಾಜಿ ಸಚಿವರು ಸಹ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿದು ಜನರನ್ನು ಸಂಕಷ್ಟದಿಂದ ಪಾರುಮಾಡಿ ಎಂದು ಹೇಳಿದರು.ಗೋಷ್ಠಿಯಲ್ಲಿ ಡಾ.ರಾಮಚಂದ್ರಪ್ಪ ಮನೆಘಟ್ಟ, ಶಿವು ಮೈಲಾರಿಕೊಪ್ಪ, ಜಗದೀಶ್ ಕುಮಾರ್, ರಾಮಚಂದ್ರ, ಚಂದ್ರು ಪೂಜಾರಿ ಹಾಜರಿದ್ದರು.