ಎಲ್ಲೆಡೆ ಭೂ ಕುಸಿತ: ಅಪಾಯದ ಕರೆ ಗಂಟೆ

| Published : Aug 05 2024, 12:32 AM IST

ಸಾರಾಂಶ

ಶೃಂಗೇರಿ, ಮಡಿಕೇರಿ, ಕೊಡಗು, ಶಿರೂರು ವಯನಾಡು ಗುಡ್ಡಬೆಟ್ಟಗಳ ಕುಸಿತದಂತಹ ಘಟನೆಗಳ ನಂತರ ಇದೀಗ ಶಾಂತವಾಗಿದ್ದ ಮಲೆನಾಡು ಪ್ರದೇಶಗಳಲ್ಲಿಯೂ ಬೆಟ್ಟಗುಡ್ಡ, ರಸ್ತೆ ಸೇರಿದಂತೆ ಆಗುತ್ತಿರುವ ಭೂ ಕುಸಿತಗಳು ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿವೆ. ಬೆಟ್ಟಗುಡ್ಡಗಳು ಜಾರಿ ಕೆಳ ಬರುತ್ತಿದೆ, ರಸ್ತೆಗಳು ಕುಸಿದು ಕಂದಕಕ್ಕೆ ಉರುಳುತ್ತಿವೆ. ಬೆಟ್ಟಗುಡ್ಡಗಳ ಅಂಚಿನ ಜನರು ಜೀವಭೀತಿಯಿಂದ ಬದುಕುವ ಆತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆಯಲ್ಲಿ ಜೆಸಿಬಿಗಳ ಸದ್ದು । ಮಳೆಗಾಲದಲ್ಲಿ ಘರ್ಜಿಸುತ್ತಿದೆ ಮಲೆನಾಡಿನ ಬೆಟ್ಟಗುಡ್ಡಗಳು ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಡಿಕೇರಿ, ಕೊಡಗು, ಶಿರೂರು ವಯನಾಡು ಗುಡ್ಡಬೆಟ್ಟಗಳ ಕುಸಿತದಂತಹ ಘಟನೆಗಳ ನಂತರ ಇದೀಗ ಶಾಂತವಾಗಿದ್ದ ಮಲೆನಾಡು ಪ್ರದೇಶಗಳಲ್ಲಿಯೂ ಬೆಟ್ಟಗುಡ್ಡ, ರಸ್ತೆ ಸೇರಿದಂತೆ ಆಗುತ್ತಿರುವ ಭೂ ಕುಸಿತಗಳು ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿವೆ. ಬೆಟ್ಟಗುಡ್ಡಗಳು ಜಾರಿ ಕೆಳ ಬರುತ್ತಿದೆ, ರಸ್ತೆಗಳು ಕುಸಿದು ಕಂದಕಕ್ಕೆ ಉರುಳುತ್ತಿವೆ. ಬೆಟ್ಟಗುಡ್ಡಗಳ ಅಂಚಿನ ಜನರು ಜೀವಭೀತಿಯಿಂದ ಬದುಕುವ ಆತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ರಸ್ತೆಗಳ ನಡುವೆ ಬಿರುಕು ಬಿಟ್ಟು ಕಂದಕಗಳು ಸೃಷ್ಠಿಯಾಗುತ್ತಿದೆ. ರಸ್ತೆಯೇ ಕುಸಿದು ಪ್ರಪಾತಕ್ಕೆ ಸೇರುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಜೀವ ಅಂಗೈಯಲ್ಲಿಟ್ಟು ಓಡಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಎಲ್ಲಿ ಬೆಟ್ಟಗುಡ್ಡ ಕುಸಿದು ರಸ್ತೆ ಮೇಲೆ ಉರುಳಿ ಬೀಳುತ್ತದೆಯೋ, ರಸ್ತೆಯೇ ಕುಸಿದು ಪ್ರಪಾತಕ್ಕೆ ಸೇರುತ್ತದೆಯೋ ಎಂಬ ಆತಂಕದ ಛಾಯೆ ಜನರಲ್ಲಿ ಆವರಿಸಿದೆ.

ಕಳೆದ ಕೆಲ ವರ್ಷಗಳಿಂದ ಮಲೆನಾಡಿನ ಬೆಟ್ಟಗುಡ್ಡಗಳು ಸೇರಿದಂತೆ ಪ್ರದೇಶಗಳಲ್ಲಿ ಬೇಸಿಗೆಯೆಲ್ಲಾ ಜೆಸಿಬಿ ಯಂತ್ರ ಗಳದ್ದೇ ಸದ್ದು ಮಾರ್ದನಿಸುತ್ತಿತ್ತು. ಬೆಟ್ಟಗುಡ್ಡಗಳನ್ನು ಕೊರೆದು ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣದಂತಹ ಅಭಿವೃದ್ಧಿ ಕಾಮಗಾರಿಗಳು ಎಗ್ಗಿಲ್ಲದೇ ನಡೆಯಿತು. ಬಹುತೇಕ ಅವೈಜ್ಞಾನಿಕ ಕಾಮಗಾರಿಯೂ ನಡೆಯಿತು. ಕೆಲವೆಡೆ ಗುಡ್ಡಗಳಲ್ಲಿ ಇದ್ದ ಬಂಡೆಗಳನ್ನು ಸ್ಪೋಟಕ ಬಳಸಿ ಒಡೆದು ಹಾಕಲಾಯಿತು. ಇದೀಗ ಮಳೆ ಅಬ್ಬರಕ್ಕೆ ಬೆಟ್ಟಗುಡ್ಡಗಳಲ್ಲಿ ಜಲ ಸಹಿತ ಮಣ್ಣು ಜಾರುತ್ತಿದ್ದು ಮಲೆನಾಡಿನಲ್ಲಿ ಪ್ರಕೃತಿ ಮುನಿದು ಎಚ್ಚರಿಕೆಯ ಗಂಟೆ ಭಾರಿಸಲಾರಂಬಿಸಿದೆ.

ಕಳೆದ ಕೆಲ ವರ್ಷಗಳ ಹಿಂದೆ ಶೃಂಗೇರಿ, ಆಗುಂಬೆ, ಉಡುಪಿ ಸಂಪರ್ಕದ ನೇರಳಕೊಡಿಗೆ ಬಳಿ ರಾಜ್ಯ ಹೆದ್ದಾರಿ ರಾತ್ರೋ ರಾತ್ರಿ ಭಾರೀ ಸದ್ದಿನೊಂದಿಗೆ ರಸ್ತೆಯೇ ಸುಮಾರು 50 ಕ್ಕೂ ಹೆಚ್ಚು ಅಡಿಗಳ ಪ್ರಪಾತಕ್ಕೆ ಸೇರಿತು. ನಂತರ ಹಂತಹಂತ ವಾಗಿ ರಸ್ತೆ ಕುಸಿಯಲಾರಂಭಿಸಿತು.ಮೇಲ್ಬಾಗದಲ್ಲಿ ಬೆಟ್ಟಗುಡ್ಡ ಕೊರೆದು ರಸ್ತೆ ಅಗಲೀಕರಣ ಮಾಡಿದ ಪರಿಣಾಮವೇ ರಸ್ತೆ ಸಂಪರ್ಕವೇ ಬಂದ್ ಆಗಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.

ಇಂತಹ ಒಂದು ಘಟನೆ ಕಣ್ಣೆದುರು ನಡೆದರೂ ಮತ್ತೆ ಮಲೆನಾಡಿನ ಪ್ರದೇಶಗಳಲ್ಲಿ ಜೆಸಿಬಿ ಯಂತ್ರಗಳ ಸದ್ದು ಹೆಚ್ಚತೊಡಗಿತು. ಕಂಡಕಂಡಲ್ಲಿ ರಸ್ತೆಗಳ ಅಭಿವೃದ್ಧಿಗೆ ಅವೈಜ್ಞಾನಿಕವಾಗಿ ಬೆಟ್ಟಗುಡ್ಡಗಳನ್ನು ಕೊರೆಯಲಾಯಿತು. ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ಕೊಪ್ಪದಿಂದ ಶೃಂಗೇರಿ ನೆಮ್ಮಾರು ತನಿಕೋಡುವರೆಗೂ ರಸ್ತೆ ಅಗಲೀಕರಣ ಕಾಮಗಾರಿ ವೇಳೆಯಲ್ಲಿ ಕಳೆದ 3-4 ವರ್ಷಗಳಿಂದ ರಸ್ತೆ ಬದಿಯ ಗುಡ್ಡಗಳನ್ನು ಕೊರೆದು, ಬಂಡೆಗಳನ್ನು ಪುಡಿ ಮಾಡಿ ಅಗಲೀಕರಣ ಮಾಡಲಾಯಿತು.

ನೆಮ್ಮಾರು ತನಿಕೋಡು ಸಮೀಪ ಕಳೆದ ವರ್ಷ ಗುಡ್ಡಕೊರೆದು ರಸ್ತೆ ಅಗಲೀಕರಣ ಮಾಡುತ್ತಿರುವಾಗ ಬೇಸಿಗೆಯಲ್ಲಿಯೇ ಇಡೀ ಗುಡ್ಡವೇ ಕುಸಿದು ರಸ್ತೆ ಮೇಲೆ ಬಿದ್ದು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿ, ಓರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ದಾರುಣ ಘಟನೆ ಸಂಭವಿಸಿತ್ತು. ತನಿಕೋಡಿನಿಂದ ನೆಮ್ಮಾರಿನ ಉದ್ದಕ್ಕೂ ಬೆಟ್ಟಗುಡ್ಡ ಕೊರೆದು ರಸ್ತೆ ಅಗಲ ಮಾಡಿದ್ದು, ಇದೀಗ ಗುಡ್ಡಕುಸಿದು ಅಪಾಯದಂಚಿನಲ್ಲಿದೆ. ನೆಮ್ಮಾರು ಮಾಡಿಬೈಲು, ತ್ಯಾವಣ, ಆನೆಗುಂದ ಬಳಿ ರಸ್ತೆಯ ಮೇಲೆ ಗುಡ್ಡ ಕುಸಿಯುತ್ತಾ ಅಪಾಯದ ಕರೆಗಂಟೆ ಭಾರಿಸುತ್ತಿದೆ.

ಕೊಪ್ಪ ಶೃಂಗೇರಿ ಸಂಪರ್ಕ ಆನೆಗುಂದ , ತ್ಯಾವಣ ಬಳಿ ಉಂಟಾಗುತ್ತಿರುವ ಗುಡ್ಡಕುಸಿತ ನಿರಂತರ ಮುಂದುವರಿದಿದ್ದು ಬೃಹತ್ ಗುಡ್ಡಗಳಾದ ಇವನ್ನು ನಿರ್ಲಕ್ಷಿಸಿದಲ್ಲಿ ಶಿರೂರು ಘಟನೆಯಂತಹ ಘಟನೆ ಇಲ್ಲಿಯೂ ಮರುಕಳಿಸುವಲ್ಲಿ ಅನುಮಾನವಿಲ್ಲ. ಪಟ್ಟಣದ ಈಶ್ವರಿಗಿರಿ ಬೆಟ್ಟದ ಬಡುದಲ್ಲಿಯೂ ಕುಸಿತ ಉಂಟಾಗುತ್ತಿದೆ. ಇನ್ನು ಮಲೆನಾಡಿನ ಬುಕುಡಿ ಬೈಲು, ಶಂಕ್ಲಾಪುರ, ಮಲ್ನಾಡ್ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಗುಡ್ಡಗಳು ಕುಸಿದು ಬೀಳುತ್ತಿವೆ. ರಸ್ತೆ, ಭೂಕುಸಿತ ನಿರಂತರವಾಗಿ ಸಾಗಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಮಲೆನಾಡಿಗೆ ಮತ್ತಷ್ಟು ಕಂಟಕ ಕಾಡಲಿದೆ.

ಬಾಕ್ಸ್--

ಅಪಾಯ ಅರಿತು ಮುನ್ನೆಚ್ಚರಿಕೆ ಅಗತ್ಯ:

ಈಗಾಗಲೇ ಮಲೆನಾಡಿನಲ್ಲು ಗುಡ್ಡಕುಸಿತ, ಭೂಕುಸಿತ, ರಸ್ತೆ ಕುಸಿತಗಳು ಉಂಟಾಗುತ್ತಿದ್ದು ಜನರ ನಿದ್ದೆಗೆಡಿಸುತ್ತಿದೆ. ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಿದ್ದರೆ ಇಂತಹ ಘಟನೆಗಳಿಗೆ ಅವಕಾಶ ವಿರುತ್ತಿರಲಿಲ್ಲ. ಕೊಪ್ಪ ಶೃಂಗೇರಿ ಸಂಪರ್ಕ ರಾಷ್ಟ್ರೀಯ ಹೆದ್ದಾರಿ ಆನೆಗುಂದ ಬಳಿ ದೊಡ್ಡ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗುತ್ತಿದೆ. ಕೂಡಲೇ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

- ಕೆ.ಎಂ.ರಾಮಣ್ಣ ಕರುವಾನೆ.ಆನೆಗುಂದ

ತುರ್ತು ಕ್ರಮ ಅನಿವಾರ್ಯ:

ಮಲೆನಾಡು ಪ್ರದೇಶಗಳಲ್ಲಿ ,ಭೂಕುಸಿತ, ಗುಡ್ಡಕುಸಿತದಂತದ ಘಟನೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪರಿಣಾಮ ಬೀರಬಹುದು.ಆ ನಿಟ್ಟಿನಲ್ಲಿ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

-ಟಿ.ಕೆ.ಗೋಪಾಲ್ ನಾಯಕ್

ತೊರೊಳ್ಳಿ, ತಾಲೂಕು ಕಿಸಾನ್ ಸೆಲ್ ಅಧ್ಯಕ್ಷ 4 ಶ್ರೀ ಚಿತ್ರ 1-

ಶೃಂಗೇರಿ ರಾ.ಹೆ.169 ರ ಮಂಗಳೂರು ಶೃಂಗೇರಿ ತ್ಯಾವಣ ಬಳಿ ಗುಡ್ಡಕುಸಿದುರಸ್ತೆಗೆ ಬೀಳುತ್ತಿರುವುದು.

4 ಶ್ರೀ ಚಿತ್ರ 2-

ಶೃಂಗೇರಿ ಆನೆಗುಂದ ಸಮೀಪ ಬೃಹತ್ ಗುಡ್ಡ ಜಾರಿ ರಸ್ತೆಯ ಅಂಚಿಗೆ ಬೀಳುತ್ತಿರುವುದು.

4 ಶ್ರೀ ಚಿತ್ರ 3-

ಕೆ.ಎಂ.ರಾಮಣ್ಣ

4 ಶ್ರೀ ಚಿತ್ರ 4-

ಟಿ.ಕೆ.ಗೋಪಾಲ್ ನಾಯಕ್.