ಸಾರಾಂಶ
ಕುಡಿತಿನಿ ಭಾಗದಲ್ಲಿ ಜಮೀನು ಕಳೆದುಕೊಂಡ ಭೂ ಸಂತ್ರಸ್ತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಮಂಗಳವಾರ 997ನೇ ದಿನಕ್ಕೆ ಮುಂದುವರಿದಿದೆ.
ಕನ್ನಡಪ್ರಭ ವಾರ್ತೆ ಕುರುಗೋಡು
ಕುಡಿತಿನಿ ಭಾಗದಲ್ಲಿ ಜಮೀನು ಕಳೆದುಕೊಂಡ ಭೂ ಸಂತ್ರಸ್ತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಮಂಗಳವಾರ 997ನೇ ದಿನಕ್ಕೆ ಮುಂದುವರಿದಿದೆ.ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ರೈತರಿಂದ ಬಲವಂತವಾಗಿ, ಕಡಿಮೆ ಬೆಲೆಗೆ ಕಂಪನಿಗಳು ಕಾರ್ಖಾನೆ ಸ್ಥಾಪಿಸುವುದಾಗಿ ಭೂಮಿ ವಶಪಡಿಸಿಕೊಂಡಿವೆ. ಉದ್ಯೋಗ ಭತ್ಯೆ ನೀಡದೆ ವಂಚಿಸಿವೆ. ಈ ಬಗ್ಗೆ ಅನೇಕ ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಭೂ ಸಂತ್ರಸ್ತರನ್ನು ಹಾಗೂ ಕಂಪನಿಯವರನ್ನು ಮಾತುಕತೆಗೆ ಸೇರಿಸಲು ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ್ದರು. ಆದರೂ ಇದುವರೆಗೂ ಯಾವುದೇ ಸಭೆ ಕರೆಯದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಸಿಎಂ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ಭೂ ಸಂತ್ರಸ್ತರಿಗೆ ಕಂಪನಿಗಳು ಕಾರ್ಖಾನೆ ಸ್ಥಾಪಿಸದೆ, ಉದ್ಯೋಗ ಭತ್ಯೆ ನೀಡದೆ, ಭೂಮಿಗಳನ್ನು ಮರು ನೀಡದೆ, ಸರ್ಕಾರದ ಭೂ ನ್ಯಾಯ ಬೆಲೆಗೆ ಖರೀದಿಸದೆ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇದರಿಂದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ಸಂಸದರು ಮತ್ತು ಶಾಸಕರು ಹೆಸರಿಗಷ್ಟೇ ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಜಂಗ್ಲಿ ಸಾಬ್, ಶ್ರೀಧರ್, ಅಂಜಿನಪ್ಪ, ಸಿದ್ದಪ್ಪ ಸೇರಿದಂತೆ ಗ್ರಾಮದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.