ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ತಾಲೂಕಿನ ರೋಣಿಹಾಳ ಬಳಿ ಮಲಘಾಣ ರಸ್ತೆಯ ಪಕ್ಕದಲ್ಲಿರುವ ಜಮೀನುಗಳಿಗೆ ಹಾಗೂ ಮನೆಗೆ ಕಾಲುವೆಗೆ ಬಿಟ್ಟಿರುವ ನೀರು ನುಗ್ಗಿದ್ದು, ಬಿತ್ತಿದ ಬೆಳೆ ಜಲಾವೃತಗೊಂಡಿದೆ. ಮನೆಯ ಸುತ್ತ ಮುತ್ತ ನೀರು ನಿಂತು ಜವಳು ಹಿಡಿದಂತಾಗಿದೆ. ಶನಿವಾರ ತಡರಾತ್ರಿ ರೋಣಿಹಾಳ ಹತ್ತಿರದ ಮುಳವಾಡ ಏತ ನೀರಾವರಿ ಕಾಲುವೆಗೆ ನೀರನ್ನು ಹರಿಸಲಾಗಿದೆ. ಕಾಲುವೆ ಮೂಲಕ ಬಿಟ್ಟ ನೀರು ರೋಣಿಹಾಳ ಗ್ರಾಮದ ರೈತರಾದ ನಾಗಯ್ಯ ಹಿರೇಮಠ, ವಿನೋದ ಪಾರಗೊಂಡ ಎಂಬುವರ ಜಮೀನುಗಳಿಗೆ ನುಗ್ಗಿದ ಪರಿಣಾಮ ಮೆಕ್ಕೆಜೋಳ ಬೆಳೆ ಜಲಾವೃತವಾಗಿದೆ. ಬಸಪ್ಪ ಪಾರಗೊಂಡ ಅವರ ಮನೆಯಲ್ಲಿ ನೀರು ನುಗ್ಗಿ ಮನೆಯು ಜವಳು ಹಿಡಿದಿದೆ. ಇದರಿಂದ ರೈತರು ಆಕ್ರೋಶಗೊಂಡು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ನಾಗಯ್ಯ ಎಂಬುವರು ನಾಲ್ಕೈದು ದಿನಗಳ ಹಿಂದೆ ತಮ್ಮ 8 ಎಕರೆ ಜಮೀನಿನಲ್ಲಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ಬಿತ್ತನೆ ಮಾಡಿದ 8 ಎಕರೆ ಜಮೀನಿನಲ್ಲಿ ಕಿರುಕಾಲುವೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡದ ಹಿನ್ನೆಲೆ ಕಾಲುವೆ ನೀರು ಜಮೀನಿಗೆ ನುಗ್ಗಿ ಬಿತ್ತಿದ ಮೆಕ್ಕೆಜೋಳ ಹಾಗೂ ಗೊಬ್ಬರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ಹಾನಿಯಾಗಿದೆ. ಇದರಿಂದ ಆಕ್ರೋಶಗೊಂಡ ನಾಗಯ್ಯ ಕಾಲುವೆ ನಿರ್ಮಿಸಿದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಿಗೆ ಹಾಗೂ ಎಂಜಿನಿಯರ್‌ಗಳು ದೂರವಾಣಿ ಮೂಲಕ ಕರೆ ಮಾಡಿದರು ಸ್ಪಂದಿಸಿಲ್ಲ. ನಷ್ಟವುಂಟಾಗಿದ್ದು, ತನಗೆ ತಹಸೀಲ್ದಾರ್ ಮತ್ತು ಶಾಸಕರು ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.ಅವೈಜ್ಞಾನಿಕ ಕಾಮಗಾರಿ: ರೋಣಿಹಾಳ ಬಳಿ ನಾಗಯ್ಯ ಅವರ ಜಮೀನಿನಲ್ಲಿ ಅವೈಜ್ಞಾನಿಕವಾಗಿ ಕಿರು ಕಾಲುವೆಯನ್ನು ನಿರ್ಮಿಸಲಾಗಿದೆ. ಕಾಲುವೆಯನ್ನು ಸಮನಾಗಿ ಮಾಡದೆ ತಗ್ಗು ಮಾಡಿದ್ದಾರೆ. ಕಾಲುವೆ ಮಾಡುವಾಗ ಅದನ್ನು ಸಮತಟ್ಟಾಗಿ ಕಾಲುವೆಯನ್ನು ನಿರ್ಮಿಸಲು ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟರು ಅಸಮರ್ಪಕ ಕಾಲುವೆಯನ್ನು ನಿರ್ಮಿಸಿದ್ದಾರೆ. ಇದರಿಂದ ಪ್ರತಿ ವರ್ಷ ಕಾಲುವಗೆ ಬಿಟ್ಟ ನೀರು ಜಮೀನುಗಳಿಗೆ ನುಗ್ಗಿ ಹಾನಿಯನ್ನುಂಟು ಮಾಡುತ್ತಿದೆ. ಕೂಡಲೇ ಸಂಭಂಧಿಸಿದ ಅಧಿಕಾರಿಗಳು ಕಿರುಕಾಲುವೆಯನ್ನು ಸಮರ್ಪಕವಾಗಿ ನಿರ್ಮಿಸಿಕೊಡುವಂತೆ ನಾಗಯ್ಯ ಒತ್ತಾಯಿಸಿದ್ದಾರೆ.