ಕನ್ನಡಪ್ರಭ ವಾರ್ತೆ ರಾಮನಗರ

ಕೋಟಿ ಕೋಟಿ ಹಣವಿದ್ದರೂ ತುಂಡು ಭೂಮಿ ದಾನ ಮಾಡಲು ಹಿಂದೆ- ಮುಂದೆ ನೋಡುವ ಮತ್ತು ನೂರು ಬಾರಿ ಯೋಚಿಸುವ ಈ ಕಾಲದಲ್ಲಿ ಇಲ್ಲೊಬ್ಬರು ಊರಿನವರ ಆರೋಗ್ಯಕ್ಕಾಗಿ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಜಮೀನನ್ನು ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ದಾನವಾಗಿ ನೀಡಿ ಔದಾರ್ಯ ಮೆರೆದಿದ್ದಾರೆ.

ಮೂಲತಃ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಗಂಗವಾಡಿ ಗ್ರಾಮದ ವಾಸಿಯಾದ ರಾಮನಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ, ಗ್ರಾಮದಲ್ಲಿರುವ ತಮ್ಮ ಸ್ವಂತ 5 ಗುಂಟೆ ಜಮೀನನ್ನು ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ದಾನವಾಗಿ ನೀಡಿದವರು.

ಡಿ.ಎಂ.ಮಹದೇವಯ್ಯರವರು ಜನಪ್ರತಿನಿಧಿಯಾಗಿದ್ದು ಮಾತ್ರವಲ್ಲದೆ ಉದ್ಯಮಿಯೂ ಆಗಿದ್ದಾರೆ. 50 ವರ್ಷಗಳ ಹಿಂದೆ ಬೆಂಗಳೂರು ಸೇರಿದರೂ ಹುಟ್ಟೂರು ದೊಡ್ಡಗಂಗವಾಡಿ ಜೊತೆಗಿನ ಸಂಬಂಧ ಕಳೆದುಕೊಂಡಿಲ್ಲ. ಆ ಊರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾತ್ರವಲ್ಲದೆ ಜಾಲಮಂಗಲ ಕ್ಷೇತ್ರದಿಂದ ಗೆದ್ದು ರಾಮನಗರ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇನ್ನು ಮಹದೇವಯ್ಯರವರ ಪತ್ನಿ ಲಕ್ಷ್ಮೀ ದೇವಮ್ಮರವರು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಕಳೆದ ಅವಧಿಯಲ್ಲಿ ದೊಡ್ಡಗಂಗವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಮಹದೇವಯ್ಯರವರು ಗ್ರಾಮದ ಅಭಿವೃದ್ಧಿ ವಿಚಾರ ಬಂದಾಗ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ.


ಈಗ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಅವಶ್ಯಕತೆ ಇತ್ತು. ಆದರೆ, ಸರ್ಕಾರಿ ಜಮೀನು ಲಭ್ಯವಾಗಲಿಲ್ಲ. ಹೀಗಾಗಿ ಮಹದೇವಯ್ಯರವರು ತಮ್ಮ ಸ್ವಂತ 5 ಗುಂಟೆ ಜಮೀನನ್ನು ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ:

ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಡಿ.ಎಂ.ಮಹದೇವಯ್ಯ,

ದೊಡ್ಡಗಂಗವಾಡಿಯಲ್ಲಿ ಆರೋಗ್ಯ ಕೇಂದ್ರ ಇರಲಿಲ್ಲ. ಗ್ರಾಮದ ಜನರು ಅನಾರೋಗ್ಯ ಪೀಡಿತರಾದರೆ ಜಾಲಮಂಗಲ, ಅಕ್ಕೂರು ಗ್ರಾಮದ ಆಸ್ಪತ್ರೆಗೆ ಹೋಗಬೇಕಾಗಿತ್ತು. ಇದನ್ನು ಶಾಸಕ ಬಾಲಕೃಷ್ಣ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೂ ತರಲಾಗಿತ್ತು. ಆದರೆ, ಜಾಗದ ಸಮಸ್ಯೆಯಿಂದ ಆರೋಗ್ಯ ಕೇಂದ್ರ ನಿರ್ಮಾಣ ಕಾರ್ಯ ಸಾಧ್ಯವಾಗಿರಲಿಲ್ಲ ಎಂದರು.

ಆರೋಗ್ಯ ಕೇಂದ್ರಕ್ಕಾಗಿ ನಾನೇ 5 ಗುಂಟೆ ಜಮೀನನ್ನು ದಾನ ಮಾಡಿ, ಶಾಸಕರ ಮೇಲೆ ಒತ್ತಡ ಹೇರಿ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿದ್ದೇನೆ. ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ವಿಶೇಷ ಕಾಳಜಿ ವಹಿಸಿದ್ದರು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸುಮಾರು ₹70 ಲಕ್ಷ ವೆಚ್ಚದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣವಾಗಲಿದೆ. ಆನಂತರ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಶಾಸಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಬಿಡದಿ- ಕೂಟಗಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಗಂಗಾಧರ್ ಗೌಡ ಮಾತನಾಡಿ, ದೊಡ್ಡಗಂಗವಾಡಿಯಲ್ಲಿ ಆರೋಗ್ಯ ಕೇಂದ್ರ ಇಲ್ಲದಿರುವ ಕಾರಣ ಗ್ರಾಮಸ್ಥರು ಜಾಲಮಂಗಲ ಮತ್ತು ಅಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದರು. ಇಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಿ ಜಮೀನು ಇರಲಿಲ್ಲ. ಇದನ್ನು ಮನಗಂಡು ಡಿ.ಎಂ.ಮಹದೇವಯ್ಯರವರು ತಮ್ಮ ಸ್ವಂತ 5 ಗುಂಟೆ ಜಮೀನನ್ನು ದಾನ ಮಾಡಿ ಔದಾರ್ಯ ಮೆರೆದಿದ್ದಾರೆ ಎಂದು ತಿಳಿಸಿದರು.

ಶಾಸಕ ಬಾಲಕೃಷ್ಣ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರ ಗಮನಕ್ಕೆ ತಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರಯತ್ನದಿಂದಾಗಿ ಆಯುಷ್ಮಾನ್ ಆರೋಗ್ಯ ಕೇಂದ್ರ ಸ್ಥಾಪನೆಯಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹುಚ್ಚಪ್ಪ, ಶ್ರೀಕಾಂತ್ , ಮೃತ್ಯುಂಜಯ್ಯ, ದಾಸಪ್ಪ, ರೇಣುಕಾ ಪ್ರಸಾದ್, ಉಮೇಶ್, ಶಾಸಕ ಬಾಲಕೃಷ್ಣರವರ ಆಪ್ತ ಸಹಾಯಕ ರವಿ (ರಂಗಸ್ವಾಮಿ) ಮತ್ತಿತರರು ಹಾಜರಿದ್ದರು.

ದೊಡ್ಡಗಂಗವಾಡಿ ಗ್ರಾಮ ನಮಗಾಗಿ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ ಗ್ರಾಮದ ಅಭಿವೃದ್ಧಿಗೆ ಕೈಲಾದ ಸೇವೆ ಮಾಡುವುದು ನಮ್ಮ ಕರ್ತವ್ಯ. ಇಲ್ಲಿನ ಜನರು ಅನಾರೋಗ್ಯಪೀಡಿತರಾದರೆ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆಗಾಗಿ ಆಯುಷ್ಮಾನ್ ಆರೋಗ್ಯ ಕೇಂದ್ರ ಅವಶ್ಯಕತೆ ಇತ್ತು. ಅದಕ್ಕಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ 5 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದೇನೆ.

- ಡಿ.ಎಂ.ಮಹದೇವಯ್ಯ, ಮಾಜಿ ಅಧ್ಯಕ್ಷರು, ತಾಪಂ, ರಾಮನಗರ.