ಸಾರಾಂಶ
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳ ಅಭಿವೃದ್ಧಿಗೆ ಪ್ರತಿ ಚದರ ಅಡಿಗೆ 200 ರು. ನಿಗದಿ ಪಡಿಸಿರುವ ಸಂಬಂಧ ಸೇರಿದ್ದ ನಿವೇಶನರಾದರರಲ್ಲಿ ಮೂರ್ನಾಲ್ಕು ಮಂದಿಯನ್ನು ಹೊರತುಪಡಿಸಿದರೆ ಉಳಿದೆಲ್ಲರು ಶಾಸಕರು ಮತ್ತು ಪ್ರಾಧಿಕಾರದ ಅಧಿಕಾರಿಗಳ ಕ್ರಮಕ್ಕೆ ಬೆಂಬಲ ಸೂಚಿಸಿದರು.
ನಗರದಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ನಿವೇಶನದಾರರ ಸಭೆಯಲ್ಲಿ ನಿವೇಶನದಾರರ ಪರ ವಿರೋಧದಿಂದಾಗಿ ಕೆಲಕಾಲ ಗದ್ದಲ ಮತ್ತು ಗೊಂದಲ ಉಂಟಾದರೂ ಅಂತಿಮವಾಗಿ ನಿವೇಶನದಾರರು ಶಾಸಕ ಇಕ್ಬಾಲ್ ಹುಸೇನ್ ನಿರ್ಧಾರಕ್ಕೆ ಬದ್ಧರಾದರು.ಈ ಹಿಂದೆ ಇದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ಹಾಗೂ ಭ್ರಷ್ಟಾಚಾರದಿಂದ 2010ರಲ್ಲಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿದ್ದರೂ ಅಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡಲು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿರಲಿಲ್ಲ ಎಂದು ಇಕ್ಬಾಲ್ ಹುಸೇನ್ ವಿಷಾದಿಸಿದರು.
ನಾನು ಶಾಸಕನಾಗಿ ಆಯ್ಕೆಯಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಈ ಸಂಬಂಧ ಸುಮಾರು 15 ಸಭೆ ಮಾಡಿದ್ದೇನೆ. ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಹಾಗೂ ಆಯುಕ್ತ ಶಿವನಂಕಾರಿಗೌಡ ಅವರೊಂದಿಗೆ ಜಂಟಿ ನಿರ್ದೇಶಕ ರಾಕೇಶ್ ಸಿಂಗ್ ಅವರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಕಚೇರಿಗಳನ್ನು ಅಲೆದು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.ಮೂರು ಬಡಾವಣೆಗಳಿಗೆ ಮೂಲ ದಾಖಲೆಗಳೇ ಇರಲಿಲ್ಲ. ಕೇವಲ 2 ರು. ಹಾಗೂ 5 ರು. ಬಾಂಡ್ ಪೇಪರ್‌ಗಳಲ್ಲಿ ನೋಂದಣಿಯಾಗದ ಅಗ್ರಿಮೆಂಟ್ ಮಾಡಿಕೊಂಡು, ಯಾವುದೇ ಆಧಾರಗಳಿಲ್ಲದೆ ಜಮೀನು ಮಾಲೀಕರಿಗೆ ಕೋಟ್ಯಂತರ ಹಣ ಪಾವತಿ ಮಾಡಲಾಗಿತ್ತು. ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಫಲಾನುಭವಿಗಳ ಹೆಸರುಗಳೇ ಇಲ್ಲ, ಕೆಲ ಹೆಸರುಗಳನ್ನು ಬದಲಾವಣೆ ಮಾಡಲಾಗಿತ್ತು. ನಿವೇಶನ ಕೋರಿ ಅರ್ಜಿ ಸಲ್ಲಿಸಿದವರ ಹೆಸರುಗಳೇ ನಾಪತ್ತೆಯಾಗಿದ್ದವು. ಹೀಗೆ ಹಲವಾರು ನ್ಯೂನತೆಗಳು ಇದ್ದವು. ಬಡಾವಣೆಗೆ ಭೂಮಿ ನೀಡಿದ್ದವರು ನಿಧನರಾಗಿದ್ದರೂ ಅವರ ವಾರಸುದಾರರನ್ನು ಕರೆತಂದು, ಸಹಿ ಪಡೆದು, ಕಾನೂನು ಬದ್ಧಗೊಳಿಸಿ ನಿಮಗೆ ನಿವೇಶನಗಳನ್ನು ಕ್ರಯ ಮಾಡಿಕೊಡುವ ಹಂತಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ಈಗಿರುವ ಬಡಾವಣೆಗಳು ಒಳ್ಳೆಯ ಜಾಗದಲ್ಲಿವೆ. ಆದರೆ, ಯಾವುದೇ ಅಭಿವೃದ್ಧಿ ಕಾಣದೆ ಗಿಡಗಂಟಿಗಳು ಬೆಳೆದು ಜಂಗಲ್ ರೀತಿ ಆಗಿದೆ. ರಸ್ತೆ, ಚರಂಡಿ, ಯುಜಿಡಿ, ವಿದ್ಯುತ್, ನೀರು ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳನ್ನು ಒದಗಿಸಲು ಸುಮಾರು 80 ಕೋಟಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಚದರಡಿಗೆ 200 ರು. ಅಭಿವೃದ್ಧಿ ಶುಲ್ಕ ನಿಗದಿಪಡಿಸಲಾಗಿದೆ.ಪ್ರತಿ ನಿವೇಶನದಾರರಿಂದ 200 ರು.ಗಳಂತೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಿದರೆ ಒಟ್ಟು 40 ಕೋಟಿ ಆಗಲಿದೆ. ಇನ್ನುಳಿದ ಸುಮಾರು 40-50 ಕೋಟಿ ಹಣವನ್ನು ಸರ್ಕಾರದ ಅನುದಾನ ಪಡೆದು ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಆಯುಕ್ತ ಶಿವನಂಕಾರಿಗೌಡ, ನಿರ್ದೇಶಕರಾದ ಪರ್ವೇಜ್ ಪಾಷಾ, ಬೈರೇಗೌಡ, ಸೀನಪ್ಪ, ಶ್ರೀದೇವಿ, ಪ್ರವೀಣ್, ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ತಾಪಂ ಇಒ ಪೂರ್ಣಿಮಾ, ಸಮದ್ ಇತರರಿದ್ದರು.