ಮಹಾಲಿಂಗಪುರ ಸಮೀಪದ ಚಿಮ್ಮಡ ಗ್ರಾಮ ವ್ಯಾಪ್ತಿಯಲ್ಲಿ ನೋಂದಾಯಿತ ಕೃಷಿ ಜಮೀನುಗಳನ್ನು ಭೂಪರಿವರ್ತಿಸಿ ಗ್ರಾಮಸ್ಥರ ಗಮನಕ್ಕೆ ತರದೇ ತನ್ನ ವ್ಯಾಪ್ತಿಗೆ ಸೇರ್ಪಡೆಗೊಳಿಸಿಗೊಂಡ ಮಹಾಲಿಂಗಪುರ ಪುರಸಭೆಯ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ಚಿಮ್ಮಡ ಗ್ರಾಮ ವ್ಯಾಪ್ತಿಯಲ್ಲಿ ನೋಂದಾಯಿತ ಕೃಷಿ ಜಮೀನುಗಳನ್ನು ಭೂಪರಿವರ್ತಿಸಿ ಗ್ರಾಮಸ್ಥರ ಗಮನಕ್ಕೆ ತರದೇ ತನ್ನ ವ್ಯಾಪ್ತಿಗೆ ಸೇರ್ಪಡೆಗೊಳಿಸಿಗೊಂಡ ಮಹಾಲಿಂಗಪುರ ಪುರಸಭೆಯ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ಚಿಮ್ಮಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಗ್ರಾಮದ ಪ್ರಮುಖರ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಯಿತು. ಚಿಮ್ಮಡ ಗ್ರಾಮದ ಸರ್ವೆ ನಂ. ೧೦೨ ರಿಂದ ೧೨೨ ಸರ್ವೆ ನಂಬರ್ ನಡುವಿನ ಒಟ್ಟು ೧೨ ಸರ್ವೆ ನಂಬರ್ಗಳ ಸುಮಾರು ನೂರಾರು ಎಕರೆ ಭೂ ಪ್ರದೇಶವನ್ನು ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಗ್ರಾಮದ ವ್ಯಾಪ್ತಿಯಲ್ಲಿಯೇ ಭೂಪರಿವರ್ತಿಸಿದ ಹಲವು ನಿವೇಶನಗಳನ್ನೂ ಅಕ್ರಮವಾಗಿ ಮಹಾಲಿಗಪುರ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ.
ಇದರಿಂದ ಗ್ರಾಮ ಪಂಚಾಯಿತಿ ಆದಾಯ ಕುಸಿತವಾಗುವುದಲ್ಲದೆ ಗ್ರಾಮದ ವ್ಯಾಪ್ತಿಯೂ ಕಿರಿದಾಗುತ್ತದೆ. ಗ್ರಾಮ ವ್ಯಾಪ್ತಿಯ ಜಮೀನು ಗ್ರಾಮಕ್ಕೆ ಸೇರ್ಪಡೆಗೊಳಿಸುವಂತೆ ಈ ಹಿಂದೆ ಬಾಗಲಕೋಟೆ ಜಿಲ್ಲಾಧಿಕಾರಿ, ಜಮಖಂಡಿ ಉಪವಿಭಾಗಾಧಿಕಾರಿ, ರಬಕವಿ- ಬನಹಟ್ಟಿ ತಹಸೀಲ್ದಾರ, ತಾಲೂಕು ಪಂಚಾಯಿತಿ ಹಾಗೂ ಮಹಾಲಿಂಗಪುರ ಪುರಸಭೆಗೆ ಲಿಖಿತ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಅದಕ್ಕೆ ಗುರುವಾರ ಗ್ರಾಮದ ಪ್ರಮುಖರ ಸಭೆ ಸೇರಿ ಕಾನೂನು ಸಮರದೊಂದಿಗೆ ಉಗ್ರ ಹೋರಾಟ ಕೈಗೊಳ್ಳಲು ನಿರ್ಧರಿಸಲಾಯಿತು.ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಭು ನೇಸೂರ, ಬಸವರಾಜ ಕುಂಚನೂರ, ಪರಪ್ಪ ಮುಂದಿನಮನಿ, ಆನಂದ ಕವಟಿ, ರಾಜು ಬಗನಾಳ, ಪ್ರಭು ಮುಧೋಳ, ಪ್ರಕಾಶ ಪಾಟೀಲ, ವಿಜಯಕುಮಾರ ಪೂಜಾರಿ, ಮಹಾಲಿಂಗ ಮಾಯಣ್ಣವರ, ಮಹಾಂತೇಶ ಜಾಲಿಕಟ್ಟಿ, ಅಶೋಕ ಮೋಟಗಿ, ಬಾಳಪ್ಪ ಗಡೆಪ್ಪನವರ, ಮನೋಜ ಹಟ್ಟಿ, ಬಾಳೇಶ ಬ್ಯಾಕೋಡ, ಅವ್ವನಪ್ಪ ಮುಗಳಖೋಡ ಸೇರಿ ಹಲವಾರು ಜನ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ ಸಭೆಗೆ ಘಟನಾವಳಿಗಳ ಮಾಹಿತಿ ನೀಡಿದರು.