ಸಾರಾಂಶ
ಸುಬ್ರಹ್ಮಣ್ಯ : ಶಿರಾಡ್ ಘಾಟ್‌ನ 15 ದೊಡ್ಡತಪ್ಪಲು ಭೂ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವ್ಯವಸ್ಥೆಯೇ ಕಾರಣ. ರಸ್ತೆಗೆ ಟೆಂಡರ್ ಆಗಿ ಸುಮಾರು ವರ್ಷ ಸಂದರೂ ಚತುಷ್ಪಥ ಹೆದ್ದಾರಿ ಕಾಮಗಾರಿಯು ಸಂಪೂರ್ಣವಾಗದಿರುವುದು ಶೋಚನೀಯ.
ಘಾಟಿ ಪ್ರದೇಶದಲ್ಲಿ ರಸ್ತೆ ನಿರ್ಮಿಸುವಾಗ ಸರಿಯಾಗಿ ಅಧ್ಯಯನ ಮಾಡಿ ಕಾಮಗಾರಿ ಆರಂಭಿಸಬೇಕು. ಇಲ್ಲಿನ ಪರಿಸರ, ಮಳೆಯ ಪ್ರಯಾಣ ಮಣ್ಣಿನ ಗುಣ ಇತ್ಯಾದಿಗಳನ್ನು ತಿಳಿದುಕೊಂಡು ಎಂಜಿನಿಯರ್‌ಗಳು ನೀಲಿನಕ್ಷೆ ತಯಾರಿಸಬೇಕು. ಆದರೆ ಅವೈಜ್ಞಾನಿಕವಾಗಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಕಾಮಗಾರಿ ಮಾಡಿದುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.ಶಿರಾಡಿ ಘಾಟ್‌ನ ದೊಡ್ಡತಪ್ಪಲು ಪ್ರದೇಶದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಶಿರಾಡಿ ಘಾಟಿಯಲ್ಲಿ ನಡೆಯುತ್ತಿರುವ ನಿರಂತರ ಕುಸಿತದಿಂದಾಗಿ ರಾಜ್ಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ತೊಂದರೆಯಾಗಿದೆ .ಕ್ಷೇತ್ರಕ್ಕೆ ಬರುವ ಆದಾಯ ಮತ್ತು ಇಲ್ಲಿನ ಉದ್ಯಮಗಳಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.
ರಾಜ್ಯದ ಪ್ರಮುಖ ಬಂದರು ನಗರಿಯಾದ ಮಂಗಳೂರನ್ನು ರಾಜಧಾನಿಗೆ ಸಂಪರ್ಕಿಸುವ ಈ ರಸ್ತೆಯ ಅವ್ಯವಸ್ಥೆಯಿಂದ ರಾಜ್ಯದ ವ್ಯವಹಾರ ಮತ್ತು ವ್ಯಾಪಾರವು ಸಂಕಷ್ಟಕ್ಕೆ ಸಿಲುಕಿದೆ. ಆದುದರಿಂದ ಶೀಘ್ರವೇ ಈ ಭಾಗದಲ್ಲಿ ಬಸ್‌ಗಳು ಸಂಚರಿಸಲು ಯೋಗ್ಯವಾಗುವಂತೆ ವ್ಯವಸ್ಥೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಯತೀಶ್ ಗುಂಡ್ಯ, ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.