ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಭಾಷೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಬಳಸುವಂತಹ ವಾತಾವರಣ ಸೃಷ್ಟಿಯಾದಾಗ ಭಾಷೆ ತನ್ನಿಂತಾನೇ ಬೆಳವಣಿಗೆ ಸಾಧಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ತಿಳಿಸಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ನಡೆದ ಕನ್ನಡ ಹಬ್ಬ, ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ನಮ್ಮ ಭಾಷೆ, ಸಂಸ್ಕೃತಿ, ಸೌಹಾರ್ದದ ಮಹೋತ್ಸವವಾಗಿದೆ. ಕನ್ನಡಿಗರ ಏಕತೆ, ಗೌರವ ಮತ್ತು ಅಸ್ತಿತ್ವದ ಪ್ರತೀಕವಾಗಿದೆ. ನಾವೆಲ್ಲರೂ ಕನ್ನಡಿಗರು ಎಂಬ ಆತ್ಮಗೌರವದ ಭಾವನೆಯೊಂದಿಗೆ ಕೈಜೋಡಿಸಿದಾಗ ಮಾತ್ರ ನಮ್ಮ ನಾಡು ನಿಜವಾದ ಅಭಿವೃದ್ಧಿ ದಾರಿಯಲ್ಲಿ ಸಾಗುತ್ತದೆ ಎಂದರು.ಕನ್ನಡ ಕೇವಲ ಮಾತಿನ ಸಾಧನವಾಗಿರದೆ, ಅದು ನಮ್ಮ ಮನಸ್ಸಿನ ಶಕ್ತಿ, ನಮ್ಮ ಸಂಸ್ಕೃತಿಯ ಆತ್ಮ. ಇಂದಿನ ಪೀಳಿಗೆಯು ಕನ್ನಡದ ಗೌರವ ಕಾಪಾಡಿ, ತಂತ್ರಜ್ಞಾನ, ಶಿಕ್ಷಣ, ಮತ್ತು ಸೇವಾ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಭಾಷೆ-ನಮ್ಮ ಹೆಮ್ಮೆ ಎಂಬ ಧ್ಯೇಯದೊಂದಿಗೆ ಪ್ರಚಾರ, ಸಂರಕ್ಷಣೆ, ಅಭಿವೃದ್ಧಿಗೆ ಸಂಕಲ್ಪ ಮಾಡಬೇಕು ಎಂದರು.
ಕನ್ನಡ ವೈಜ್ಞಾನಿಕ ಹಾಗೂ ತರ್ಕಬದ್ಧ ಭಾಷೆಯಾಗಿದೆ. ಕನ್ನಡಕ್ಕೆ ಇದುವರೆಗೂ ೮ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಎಸ್.ಎಲ್.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ ಅವರು ಜ್ಞಾನಪೀಠಕ್ಕೆ ಅರ್ಹರಾಗಿದ್ದರೂ ಅವರಿಗೆ ಲಭಿಸಿಲ್ಲ. ವಿನೋಭಾ ಭಾವೆ ಅವರು ಕನ್ಡಡವನ್ನು ’ವಿಶ್ವ ಲಿಪಿಗಳ ರಾಣಿ’ ಎಂದು ಕರೆದಿದ್ದಾರೆ. ಇಂತಹ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.ಕನ್ನಡ ಹಬ್ಬ ಕುರಿತು ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಸಾಹಿತ್ಯ, ಸಾಹಿತ್ಯದ ವಿಚಾರಗಳನ್ನು ಓದುವುದರಿಂದ, ಬಳಸುವುದರಿಂದ ಭಾಷೆ ಬೆಳವಣಿಗೆ ಸಾಧಿಸುತ್ತದೆ. ಭಾಷೆಗೆ ಮಡಿವಂತಿಕೆ ಇರಬಾರದು. ಓದುವುದನ್ನು ರೋಮಾಂಚಕ ಹವ್ಯಾಸವೆನಿಸುವ ಶಕ್ತಿ ಭಾಷೆಗಿರಬೇಕು. ನಮ್ಮ ಭಾಷೆಯ ಅತ್ಯುನ್ನತ ಕೃತಿಗಳು ಬೇರೆ ಬೇರೆ ಭಾಷೆಗಳು ಅನುವಾದಗೊಳ್ಳಬೇಕು. ಆ ಭಾಷೆಗಳಲ್ಲಿರುವ ಮಹತ್ವದ ವಿಚಾರಗಳು ಕನ್ನಡಕ್ಕೆ ಅನುವಾದವಾಗಬೇಕು ಎಂದು ನುಡಿದರು.
ವಿದೇಶಿ ವಿದ್ಯಾತಜ್ಞರು ನಮ್ಮ ದೇಶ ಭಾಷೆಗಳಿಗೆ ಶಿಕ್ಷಣ ಮಾಧ್ಯಮದಿಂದ ಹಿಡಿದು ಆಡಳಿತ ಭಾಷೆಯವರೆಗೆ ಬದುಕಿನ ಎಲ್ಲಾ ರಂಗಗಳಲ್ಲೂ ಪ್ರಥಮ ಸ್ಥಾನ ಕೊಡಬೇಕೆಂದು ವಾದಿಸಿದ್ದರು. ಆದರೆ, ಅದಕ್ಕೆ ಇದುವರೆಗೂ ಮನ್ನಣೆ ದೊರಕಿಲ್ಲ. ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ದೇಶೀಯ ಭಾಷೆಗಳಿಗೆ ಹೆಚ್ಚಿನ ಮಹತ್ವ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಪತ್ರಕರ್ತೆ ಸಬಾ ಹಕೀಮ್ ಮಾತನಾಡಿ, ಮಂಡ್ಯದವರು ರಾಜಕೀಯ ಪ್ರಜ್ಞಾವಂತರಿದ್ದಾರೆ. ಅತಿ ಹೆಚ್ಚು ಕನ್ನಡ ಮಾತನಾಡುವವರೂ ಇದೇ ನೆಲದಲ್ಲಿದ್ದಾರೆ. ಈ ಮಣ್ಣಿನ ಜನರು ಕನ್ನಡ ಮತ್ತು ಕಾವೇರಿ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ. ಇಲ್ಲಿನ೦ ಸಾಹಿತ್ಯ, ಸಂಪ್ರದಾಯ, ಆಚಾರ-ವಿಚಾರಗಳೆಲ್ಲವೂ ಸಂಪದ್ಭರಿತವಾಗಿದೆ. ಇಲ್ಲಿನ ಕನ್ನಡ ಪ್ರೇಮ ರಾಜ್ಯಕ್ಕೆ ವಿಸ್ತಾರಗೊಳ್ಳಬೇಕು ಎಂದು ಆಶಿಸಿದರು.
ಕನ್ನಡದ ವಿಶೇಷತೆಗಳು, ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಕೇವಲ ಬರೆದಿಟ್ಟರೆ ಕನ್ನಡವನ್ನು ಉಳಿಸಲಾಗುವುದಿಲ್ಲ. ಕನ್ನಡ ಭಾಷಾ ಶ್ರೀಮಂತಿಕೆಯ ಬಗ್ಗೆ ಅರಿವು ಮೂಡಿಸಿ ಆಕರ್ಷಿತರನ್ನಾಗಿ ಮಾಡುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶರಣಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ನರರೋಗ ತಜ್ಞ ಡಾ.ಸೂರ್ಯನಾರಾಯಣ ಶರ್ಮ, ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಪತ್ರಕರ್ತೆ ಸಬಾ ಹಕೀಂ, ವೈದ್ಯ ಡಾ.ಚಂದ್ರಶೇಖರ್ ಅವರಿಗೆ ಕರ್ನಾಟಕ ಸೇವಾರತ್ನ ಪ್ರಶಸ್ತಿ ನೀಡಲಾಯಿತು.
ನಿವೃತ್ತ ಶಿಕ್ಷಕ ಡಾ.ನ.ಗಂಗಾಧರಪ್ಪ, ಡಾ.ಜೀಶಂಪ ಸಾಹಿತ್ಯ ಪರಿಷತ್ತಿನ ಪೋಷಕ ನರೇಶ್, ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ ಇದ್ದರು.;Resize=(128,128))
;Resize=(128,128))