ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕನ್ನಡ ಮಾತನಾಡುವ ಮೂಲಕ ಭಾಷಾ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಬೇಕು ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದೂಗೂಡಿಸಲು ಆಲೂರು ವೆಂಕಟರಾಯರು ೧೯೦೫ರಲ್ಲಿ ಕರ್ನಾಟಕ ಏಕೀಕರಣ ಚಟುವಟಿಕೆಗಳೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸ್ಸು ಕಂಡ ಮೊದಲ ವ್ಯಕ್ತಿಯಾದರು. ೧೯೫೦ರಲ್ಲಿ ಭಾರತವು ಗಣರಾಜ್ಯವಾಯಿತು. ನಂತರ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ಪ್ರಾಂತ್ಯಗಳು ರಚನೆಯಾದವು. ೧೯೫೬ ನ.೧ರಂದು ಮೈಸೂರು ರಾಜ್ಯ ಸ್ಥಾಪನೆಯಾಯಿತು. ೧೯೭೩ ನ.೧ರಂದು ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕರ್ನಾಟಕ ರಾಜ್ಯವಾಗಿ ಬದಲಾಯಿತು. ಕರ್ನಾಟಕ ಏಕೀಕರಣಕ್ಕೆ ಸಾಹಿತಿಗಳು, ಕವಿಗಳು, ಕನ್ನಡಪರ ಹೋರಾಟಗಾರರು ಪ್ರತಿಕಾ ಮಾಧ್ಯಮದವರು ತಮ್ಮದೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಹೆಮ್ಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸ್ನೇಹ ಬಸಮ್ಮ ಮಾತನಾಡಿ, ಜ್ಞಾನರ್ಜನೆಗಾಗಿ ಎಲ್ಲ ಭಾಷೆಗಳನ್ನು ಕಲಿತರೆ ಒಳ್ಳೆಯದು. ಆದರೆ ಕನ್ನಡ ತಮ್ಮ ಹೃದಯದ ಭಾಷೆಯಾಗಬೇಕು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟ್ಟಿಬದ್ಧರಾಗಿರುತ್ತೇವೆ ಎಂದು ನಾವೇಲ್ಲರೂ ನಿಶ್ಚಯಿಸಬೇಕಾಗಿದೆ ಎಂದು ಹೇಳಿದರು.ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್ ಮತ್ತು ಶಿಕ್ಷಕ ಸುಕುಮಾರ್ ತೊರೆನೂರು ಅವರನ್ನು ಸನ್ಮಾನಿಸಲಾಯಿತು.ಬೆಳಗ್ಗೆ ೯ಗಂಟೆಗೆ ಜೇಸಿ ವೇದಿಕೆಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ವಿವಿಧ ಶಾಲಾ ಕಾಲೇಜುಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನೋಡುಗರನ್ನು ರಂಜಿಸಿದವು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಸಮಾರಂಭದ ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್.ಗೀತಾ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್, ಬಿಇಒ ಎಸ್. ಭಾಗ್ಯಮ್ಮ ಮತ್ತಿತರ ಗಣ್ಯರು ಇದ್ದರು.