ಹೆಚ್ಚೆಚ್ಚು ಬಳಕೆಯಿಂದ ಭಾಷೆ ಬೆಳವಣೆಗೆ: ಅಶೋಕ

| Published : Nov 17 2024, 01:24 AM IST

ಸಾರಾಂಶ

ಲೋಕಾಪುರ ಸಮೀಪ ಜಾಲಿಕಟ್ಟಿ ಬಿ.ಕೆ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ವೇದಿಕೆಯಿಂದ ಹಮ್ಮಿಕೊಂಡ ಮಾಧ್ಯಮ ಮಿತ್ರ ಪ್ರಶಸ್ತಿ ನೀಡಿ ಮಾಧ್ಯಮ ಮಿತ್ರರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಒಂದು ಭಾಷೆಯ ಬೆಳವಣೆಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆ ವಿರೋಧಿಸುವುದು. ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಃ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ ಎಂದು ಕಲ್ಯಾಣ ಕರ್ನಾಟಕ ವೇದಿಕೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ದುಮ್ಮೇನಹಳ್ಳಿ ಅಶೋಕ ಕುಮಾರ ಹೇಳಿದರು.

ಲೋಕಾಪುರ ಸಮೀಪ ಜಾಲಿಕಟ್ಟೆ ಬಿ.ಕೆ.ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ವೇದಿಕೆ ಬಾಗಲಕೋಟೆ, ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ ೬೯ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರುನಾಡ ವೈಭವ ಸಮಾರಂಭದಲ್ಲಿ ವಿಶೇಷ ಅಹ್ವಾನಿತರಾಗಿ ಮಾತನಾಡಿದ ಅವರು, ಕನ್ನಡ ಭಾಷೆಯ ಏಳ್ಗೆಗಾಗಿ ಸರ್ಕಾರ, ಹತ್ತು ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು, ಸಾಹಿತಿಗಳು ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುವರು. ಆದರೇ ಆ ಎಲ್ಲಾ ಪ್ರಯತ್ನಗಳಿಂದ ಹೇಳಿಕೊಳ್ಳುವಂತಹ ಭಾಷೆಯ ಏಳ್ಗೆ ನೀರಿಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಷ್ಣು ವರ್ಚಗಲ್ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಜಾಗೃತವಾಗುವುದು ಒಂದು ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ. ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಃ ಸತ್ಯವಾಗಿದೆ. ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿಕೊಳ್ಳಬೇಕು ಬದಲಾಗಿ ಯಾವುದೇ ಕಾನೂನು, ನಿಯಮದಿಂದ, ಬಲವಂತದಿಂದ ಭಾಷೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಭಾಷೆಯ ಪ್ರಭಾವಶಾಲಿ ಚಾಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಯಲ್ಲಿ ಆಗಿರುವುದು. ಆದ್ದರಿಂದ ಮಾಧ್ಯಮ ಮತ್ತು ಶಾಲೆಯಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯ ಮಾಡಬೇಕಾಗಿದೆ ಎಂದರು.

ಮುಖಂಡರಾದ ಲೋಕಣ್ಣ ಕತ್ತಿ, ಗುರುರಾಜ ಉದುಪುಡಿ ಕನ್ನಡ ರಾಜ್ಯೋತ್ಸವದ ಶುಭಾಸಯಗಳನ್ನು ತಿಳಿಸಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡ ವಿದ್ಯಾರತ್ನ ಪ್ರಶಸ್ತಿ, ಕಾನೂನು ಸೇವಾ ರತ್ನ ಪ್ರಶಸ್ತಿ, ಮಾಧ್ಯಮ ಮಿತ್ರ ಪ್ರಶಸ್ತಿ, ಪತ್ರಿಕಾ ಮಿತ್ರ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಕಲ್ಯಾಣ ಕರ್ನಾಟಕ ವೇದಿಕೆಯಿಂದ ಸನ್ಮಾನಿಸಲಾಯಿತು. ಕನ್ನಡ ಕೋಗಿಲೆ ಖ್ಯಾತ ಗಾಯಕರಾದ ಖಾಸಿಂ ಅಲಿ, ಮಹನ್ಯ ಪಾಟೀಲ್, ಆರ್.ಡಿ.ಬಾಬು, ಜ್ಯೂನಿಯರ್ ರವಿಚಂದ್ರನ್ ಇವರಿಂದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.

ದಿವ್ಯ ಸಾನ್ನಿಧ್ಯವನ್ನು ಹಿರೇಮಠದ ಪೀಠಾಧಿಕಾರಿ ಡಾ.ಚಂದ್ರಶೇಖರ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆ ಜಿಲ್ಲಾ ಕಲ್ಯಾಣ ಕರ್ನಾಟಕ ವೇದಿಕೆ ಅಧ್ಯಕ್ಷ ನಿಂಗರಾಜ ಜಂಬಗಿ, ಲೋಕಣ್ಣ ಕತ್ತಿ, ಗುರುರಾಜ ಉದಪುಡಿ, ಲಕ್ಷ್ಮಣ ಮಾಲಗಿ, ಶಂಕರ ತಿಮ್ಮಾಪುರ, ಗೋವಿಂದಪ್ಪ ಕೌಲಗಿ, ಹೊಳಬಸು ಕಾಜಗಾರ, ಮಂಜುನಾಥ ಪಾಟೀಲ, ಸಚೀನಗೌಡ ಪಾಟೀಲ, ಅಯ್ಯಪ್ಪಗೌಡ ಪಾಟೀಲ, ಮಹೇಶ ಪೂಜಾರಿ, ಡಾ.ನವೀನ ಹುಣಶಿಕಟ್ಟಿ, ಕೃಷಿ ಅಧಿಕಾರಿ ಲಕ್ಷ್ಮಿ ತೇಲಿ, ಯುವ ಘಟಕದ ಜಿಲ್ಲಾಧ್ಯಕ್ಷ ದುರ್ಗೇಶ ಮಾದರ, ಉಪಾಧ್ಯಕ್ಷ ಪ್ರದೀಪ ಉಪ್ಪಾರ ಹಾಗೂ ಕಲ್ಯಾಣ ಕರ್ನಾಟಕ ವೇದಿಕೆ ಪದಾಧಿಕಾರಿಗಳು, ಸರ್ವ ಸದಸ್ಯರು ಜಾಲಿಕಟ್ಟಿ, ಲೋಕಾಪುರ ಕನ್ನಡಾಭಿಮಾನಿಗಳು ಇದ್ದರು.