ಆಹಾರ, ಗಾಳಿಯಷ್ಟೇ ಮನುಷ್ಯಗೆ ಭಾಷೆ ಮುಖ್ಯ: ಚಿಂತಕ ನೆಂಪೆ ದೇವರಾಜ್

| Published : Nov 21 2025, 01:45 AM IST

ಆಹಾರ, ಗಾಳಿಯಷ್ಟೇ ಮನುಷ್ಯಗೆ ಭಾಷೆ ಮುಖ್ಯ: ಚಿಂತಕ ನೆಂಪೆ ದೇವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಭಾಷೆ ಎನ್ನುವುದು ಒಂದು ಅಸ್ಮಿತೆ, ಒಂದು ಸಂಸ್ಕೃತಿ. ಅದು ಮನುಷ್ಯನಿಗೆ ಆಹಾರ, ನೀರು, ಗಾಳಿಯಷ್ಟೇ ಮುಖ್ಯ. ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ ವಿಂಗಡಣೆಯಾಗಬೇಕೆಂಬ ಕೂಗು ಮೊದಲು ತೆಲುಗು ಭಾಷೆಯ ಆಂಧ್ರದಿಂದ ಶುರುವಾಗಿ ಕರ್ನಾಟಕದಲ್ಲೂ ವ್ಯಾಪಕವಾಗಿ ಚಳುವಳಿಗಳು ನಡೆದು ೧೯೫೬ರ ನ.೧ರಂದು ಮೈಸೂರು ರಾಜ್ಯದ ಉದಯವಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪ

ಭಾಷೆ ಎನ್ನುವುದು ಒಂದು ಅಸ್ಮಿತೆ, ಒಂದು ಸಂಸ್ಕೃತಿ. ಅದು ಮನುಷ್ಯನಿಗೆ ಆಹಾರ, ನೀರು, ಗಾಳಿಯಷ್ಟೇ ಮುಖ್ಯ. ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ ವಿಂಗಡಣೆಯಾಗಬೇಕೆಂಬ ಕೂಗು ಮೊದಲು ತೆಲುಗು ಭಾಷೆಯ ಆಂಧ್ರದಿಂದ ಶುರುವಾಗಿ ಕರ್ನಾಟಕದಲ್ಲೂ ವ್ಯಾಪಕವಾಗಿ ಚಳುವಳಿಗಳು ನಡೆದು ೧೯೫೬ರ ನ.೧ರಂದು ಮೈಸೂರು ರಾಜ್ಯದ ಉದಯವಾಯಿತು. ಆಗ ಕನ್ನಡ ನಾಡಿನ ಏಕೀಕರಣದ ಪರವಾಗಿ ಬಲವಾಗಿ ನಿಂತವರಲ್ಲಿ ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡರು, ಕುವೆಂಪು ಮುಂತಾದವರು ಮುಖ್ಯರು ಎಂದು ಚಿಂತಕ ನೆಂಪೆ ದೇವರಾಜ್ ಅಭಿಪ್ರಾಯಪಟ್ಟರು.

ತಾಲೂಕು ಸಿರಿಗನ್ನಡ ವೇದಿಕೆ ಹಾಗೂ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಾಕವಿ ಕುವೆಂಪು ವೇದಿಕೆ ಸಂಯುಕ್ತಾಶ್ರಯದಲ್ಲಿ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಭಾಷಾ ಚಳವಳಿ ನಾವು ಕಲಿಯಬೇಕಾದ ಪಾಠಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಕರ್ನಾಟಕ ಏಕೀಕರಣವಾಗಿ ೭೦ ವರ್ಷಗಳು ಕಳೆದರೂ ನಮ್ಮ ಭಾಷಾ ಸವಾಲುಗಳು ಹಾಗೇ ಇವೆ. ನಂತರ ನಡೆದ ಚಳುವಳಿಗಾರರಲ್ಲಿ ಮ.ರಾಮಮೂರ್ತಿ, ವಾಟಾಳ್ ನಾಗರಾಜ್ ಮುಂತಾದವರು ಮುಖ್ಯರು. ನಂತರ ನಡೆದ ಗೋಕಾಕ್ ಚಳುವಳಿಯ ತೀರ್ವತೆ ಒಂದು ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನೇ ಕಿತ್ತು ಕಾಂಗ್ರೆಸ್ಸೇತರ ಸರ್ಕಾರವನ್ನು ತರುವಷ್ಟು ಪ್ರಬಲವಾಗಿತ್ತು. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್ ಅವರ ಪಾಲ್ಗೊಳ್ಳುವಿಕೆಯಿಂದ ಅಪಾರ ಜನಬೆಂಬಲದಿಂದ ತತ್ತರಿಸಿದ ಸರ್ಕಾರ ಗೋಕಾಕ್ ವರದಿಯಲ್ಲಿನ ಅಂಶಗಳನ್ನು ಜಾರಿಗೆ ತರುವ ಅನಿವಾರ್ಯತೆ ಸೃಷ್ಟಿಯಾಗಿತ್ತು ಎಂದು ತಿಳಿಸಿದರು.

ಇಂದು ಬೆಂಗಳೂರಿನಂಥ ನಗರಗಳಲ್ಲಿ ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಪ್ರಾಬಲ್ಯ ಹೆಚ್ಚಾಗಿದೆ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಅನಂತ ಎಸ್‌., ಕೊಪ್ಪ ಸಹ್ಯಾದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಭಾ ಪ್ರಕಾಶ್, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ನಿರಂಜನ.ಎ.ಆರ್., ಕನ್ನಡ ವಿಭಾಗದ ಮುಖ್ಯಸ್ಥ ಡಾ.ಧನಂಜಯಮೂರ್ತಿ ಮುಂತಾದವರು ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು.

ಸುನೀತಾ ನೆಲೆಗದ್ದೆ, ಶ್ಯಾಮಲಾ ನಾರ್ವೆ ಅವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು.

‘ಕನ್ನಡ ನಾಡು, ನುಡಿ, ಜನ’ ಈ ವಿಷಯವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸಂಜನ, ಕೀರ್ತನ, ಸಿಂಚನ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದರು.

ನಂದಕುಮಾರ್, ಜಿನೇಶ್ ಇರ್ವತ್ತೂರು, ಶಾಂತಾ ಗೋಪಾಲಗೌಡ, ಚನ್ನಪ್ಪ, ನಿಲುಗುಳಿ ಪದ್ಮನಾಭ್, ರೇಣುಕಾ, ಅಣ್ಣಯ್ಯ, ರೂಪ ಬಿ.ಟಿ., ಫಾತಿಮಾ, ಹರೀಶ್, ಕಾವೇರಪ್ಪ, ಫ್ರಾನ್ಸಿಸ್ ಡಿಸೋಜ ಮುಂತಾದವರು ಇದ್ದರು.