ಪಿ.ಲಂಕೇಶ್ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲಿಯೂ ತೋರಿದ ಪ್ರಾಮಾಣಿಕತೆ ಮತ್ತು ಧೈರ್ಯ ಹೊಸ ತಲೆಮಾರಿನ ಬರಹಗಾರರು ಹಾಗೂ ಪತ್ರಕರ್ತರಿಗೆ ಅನುಕರಣೀಯವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಮಲ್ಲಿಕಾರ್ಜುನ ಮಾನ್ಪಡೆ ಹೇಳಿದರು.

ಹಾವೇರಿ: ಪಿ.ಲಂಕೇಶ್ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲಿಯೂ ತೋರಿದ ಪ್ರಾಮಾಣಿಕತೆ ಮತ್ತು ಧೈರ್ಯ ಹೊಸ ತಲೆಮಾರಿನ ಬರಹಗಾರರು ಹಾಗೂ ಪತ್ರಕರ್ತರಿಗೆ ಅನುಕರಣೀಯವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಮಲ್ಲಿಕಾರ್ಜುನ ಮಾನ್ಪಡೆ ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ನಗರದ ಎಸ್.ಜಿ. ಎಸ್.ಎಲ್.ಪಿ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಹಾಗೂ ಪಿ. ಲಂಕೇಶ್ ಅವರ ಬದುಕು, ಬರಹ, ಪತ್ರಿಕೋದ್ಯಮದಲ್ಲಿನ ಚಿಂತನೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯುವಜನತೆಯಲ್ಲಿ ಓದುವ ಹವ್ಯಾಸ ಈಚೆಗೆ ಕಡಿಮೆಯಾಗುತ್ತಿದ್ದು, ಲಂಕೇಶ ಅವರ ಮೌಲ್ಯಯುತ ಸಾಹಿತ್ಯದ ಓದು ಯುವ ಬರಹಗಾರರಿಗೆ ಅಗತ್ಯವಾಗಿದೆ ಎಂದರು. ಚಕೋರ ವೇದಿಕೆಯ ಸಂಚಾಲಕ ಪ್ರೊ. ಶೇಖರ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಉತ್ತಮ ಸಾಹಿತ್ಯ ಓದುವ ಅಭಿರುಚಿಯನ್ನು ಬೆಳೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವ ಸಮುದಾಯವನ್ನು ಕೇಂದ್ರೀಕರಿಸಿ, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಲಂಕೇಶ್ ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿನ ಸಾಧನೆ ಪ್ರೇರಣಾದಾಯಕವಾಗಿದೆ. ಸಾಹಿತ್ಯದ ವಿದ್ಯಾರ್ಥಿಗಳು, ಬರಹಗಾರರು ಅವರ ಸಮಗ್ರ ಸಾಹಿತ್ಯದ ಅಧ್ಯಯನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಪಿ.ಲಂಕೇಶ್ ಅವರ ಕಥೆಗಳು ಮತ್ತು ಪತ್ರಿಕೋದ್ಯಮದಲ್ಲಿನ ಚಿಂತನೆಗಳ ಕುರಿತು ಹಾವೇರಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವನ ವಿಭಾಗದ ಪ್ರಾಧ್ಯಾಪಕ ಡಾ. ಚಿದಾನಂದ ಕಮ್ಮಾರ್, ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರ ತಲ್ಲಣಗಳ ಕುರಿತು ಜಿ.ಎಚ್. ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಮಹಾದೇವಿ ಕಣವಿ, ಲಂಕೇಶರ ಕಾವ್ಯ, ನಾಟಕಗಳಲ್ಲಿನ ವೈಚಾರಿಕ ನೆಲೆಗಳ ಕುರಿತು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಕಾಂತೇಶ ಅಂಬಿಗೇರ ಉಪನ್ಯಾಸ ನೀಡಿದರು. ಪ್ರಾಚಾರ್ಯೆ ಪ್ರೊ. ಇಂದಿರಾ ಬಾಗಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಮಾರುತಿ ತಳವಾರ, ಪ್ರೊ.ರಾಮಚಂದ್ರಪ್ಪ ಬಿ.ಎಂ., ಡಾ. ಶಿವಾನಂದ ಕೆಂಪಳ್ಳೇರ, ಡಾ. ಬೀಬಿ ಫಾತಿಮಾ, ಡಾ. ಸಂಧ್ಯಾಕುಮಾರಿ ಆರ್., ಪ್ರೊ. ಮೆಹಬೂಬ್ ಸುಭಾನಿ ಉಪಸ್ಥಿತರಿದ್ದರು. ಕಾವ್ಯಾ ಮಡಿವಾಳರ, ಮಧು ಉಪ್ಪಾರ ನಿರೂಪಿಸಿದರು. ಡಾ. ಭಾಗ್ಯವತಿ ಎಂ. ವಂದಿಸಿದರು.