ಪ್ರಸೂತಿ, ಸ್ತ್ರೀರೋಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್ರೋಸ್ಕೋಪಿಕ್ ಕಾರ್ಯಾಗಾರ

| Published : Jan 31 2025, 12:47 AM IST

ಪ್ರಸೂತಿ, ಸ್ತ್ರೀರೋಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್ರೋಸ್ಕೋಪಿಕ್ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘಗಳ ಒಕ್ಕೂಟದ ಸದಸ್ಯ ಕೇರಳದ ಸಿರಿಯಾಕ್ ಪಾಪಚ್ಚಿನ್ ಮಾತನಾಡಿ, ಲ್ಯಾಪರೋಸ್ಕೋಪ್ ಒಂದು ತೆಳುವಾದ ಮತ್ತು ತೆಳ್ಳಗಿನ ಸಾಧನ. ಅದರ ತುದಿಯಲ್ಲಿ ಸಣ್ಣ ಕ್ಯಾಮೆರಾ ಮತ್ತು ಬೆಳಕನ್ನು ಹೊಂದಿರುತ್ತದೆ. ಕೀ-ಹೋಲ್ ಶಸ್ತ್ರಚಿಕಿತ್ಸೆ ಸುರಕ್ಷಿತ ಮತ್ತು ಹೊಸ ವಿಧಾನವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘಗಳ ಒಕ್ಕೂಟ ಹಾಗೂ ಭಾರತೀಯ ಸ್ತ್ರೀರೋಗ ತಜ್ಞರ ಎಂಡೋಸ್ಕೋಪಿಗಳ ಸಂಘದ ಆಶ್ರಯದಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಸೂತಿ ಸ್ತ್ರೀರೋಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಈಗಲ್ ಪ್ರಾಜೆಕ್ಟ್‌ನಡಿ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರದೊಂದಿಗೆ ಕಾರ್ಯಾಗಾರ ನಡೆಸಲಾಯಿತು.

ಬೆಳಗ್ಗೆ ೯ ಗಂಟೆಗೆ ಆರಂಭವಾದ ಕಾರ್ಯಾಗಾರ ಸಂಜೆ ೫ ಗಂಟೆಯವರೆಗೆ ನಡೆಯಿತು. ಈ ಕಾರ್ಯಾಗಾರಕ್ಕೆ ಹಾಸನ, ಮೈಸೂರು, ಚಾಮರಾಜನಗರ, ಬೆಂಗಳೂರು, ರಾಮನಗರ, ಮಂಡ್ಯ, ದಾವಣಗೆರೆ, ತುಮಕೂರು ಸೇರಿದಂತೆ ಎಂಟು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಮೊದಲು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಗರ್ಭಕೋಶದ ಶಸ್ತ್ರಚಿಕಿತ್ಸೆ, ಅಂಡಾಶಯದ ಮೇಲಿನ ನೀರು ಗಂಟು, ಗರ್ಭದಲ್ಲಿ ಬೆಳೆದ ಗಡ್ಡೆಗಳು, ಗರ್ಭದ ಆರೋಗ್ಯ ಸಮಸ್ಯೆಗಳು ಸೇರಿದಂತೆ ಒಟ್ಟು ಎಂಟು ಶಸ್ತ್ರಚಿಕಿತ್ಸೆಗಳನ್ನು ಹೊಟ್ಟೆ ಛೇದನ ಮಾಡಿಯೇ ವೈದ್ಯರು ಶಸ್ತ್ರಚಿಕಿತ್ಸೆಗೆ ನಡೆಸಬೇಕಿತ್ತು.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಂಡ್ಯ ಮಿಮ್ಸ್‌ನಲ್ಲಿ ಈ ಶಸ್ತ್ರ ಚಿಕಿತ್ಸೆಗಳನ್ನು ಲ್ಯಾಪ್ರೋಸ್ಕೋಪಿ ಮೂಲಕವೇ ನಡೆಸಲಾಗುತ್ತಿದೆ. ಇದುವರೆಗೂ ಆಸ್ಪತ್ರೆಯಲ್ಲಿ ೫೫ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷ ಡಾ.ಆರ್.ಮನೋಹರ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘಗಳ ಒಕ್ಕೂಟದ ಸದಸ್ಯ ಕೇರಳದ ಸಿರಿಯಾಕ್ ಪಾಪಚ್ಚಿನ್ ಮಾತನಾಡಿ, ಲ್ಯಾಪರೋಸ್ಕೋಪ್ ಒಂದು ತೆಳುವಾದ ಮತ್ತು ತೆಳ್ಳಗಿನ ಸಾಧನ. ಅದರ ತುದಿಯಲ್ಲಿ ಸಣ್ಣ ಕ್ಯಾಮೆರಾ ಮತ್ತು ಬೆಳಕನ್ನು ಹೊಂದಿರುತ್ತದೆ. ಕೀ-ಹೋಲ್ ಶಸ್ತ್ರಚಿಕಿತ್ಸೆ ಸುರಕ್ಷಿತ ಮತ್ತು ಹೊಸ ವಿಧಾನವಾಗಿದೆ. ಶಸ್ತ್ರಚಿಕಿತ್ಸಕ ರೋಗಿಯ ದೇಹದ ಮೇಲೆ ಕೆಲವೇ ಮಿಲಿಮೀಟರ್ ಉದ್ದದ ಸಣ್ಣ ಹೋಲ್ ಮಾಡಿ ಶಸ್ತ್ರಚಿಕಿತ್ಸೆ ಆರಂಭಿಸುತ್ತಾರೆ. ಸಣ್ಣ ಹೋಲ್‌ಗಳ ಮೂಲಕ ಸಾಧನ ಮತ್ತು ಇತರೆ ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಸೇರಿಸುತ್ತದೆ. ಶಸ್ತ್ರಚಿಕಿತ್ಸೆ ಮಾಡುವವರಿಗೆ ದೇಹದ ಒಳಗಿನ ವೀಡಿಯೋವನ್ನು ಹೊರಗಿನ ವೀಡಿಯೋ ಪರದೆಯಲ್ಲಿ ನೋಡಲು ಕ್ಯಾಮೆರಾ ಸಹಾಯ ಮಾಡುತ್ತದೆ. ಇದರ ಮೂಲಕ ಸುಲಭವಾಗಿ ಲ್ಯಾಪರಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವರು ಎಂದು ವಿವರಿಸಿದರು.

ಈ ವಿಧಾನದ ಶಸ್ತ್ರ ಚಿಕಿತ್ಸೆಯಿಂದ ರೋಗಿಯ ದೇಹದ ರಕ್ತಸ್ರಾವ ಕನಿಷ್ಠವಾಗಿರುತ್ತದೆ. ತೆರೆದ ಶಸ್ತ್ರ ಚಿಕಿತ್ಸೆಗಳಲ್ಲಿ ಮಾಡಿದ ದೇಹದ ಛೇದನಗಳಿಗೆ ಹೋಲಿಸಿದರೆ ತುಂಬಾ ಚಿಕ್ಕದಾಗಿದೆ. ರಕ್ತದ ನಷ್ಟವನ್ನು ಕಡಿಮೆ ಮಾಡುವುದಕ್ಕೆ ಅನುಕೂಲವಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ನೋವು ಮತ್ತು ರಕ್ತಸ್ರಾವದ ಅಪಾಯಗಳು ಕಡಿಮೆಯಾಗುತ್ತವೆ. ರೋಗಿಯನ್ನು ೨೪ ಗಂಟೆಯೊಳಗೆ ಮನೆಗೆ ಕಳುಹಿಸಬಹುದು. ಬೇಗ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ಗಾಯದ ಗುರುತು ಕೂಡ ಚಿಕ್ಕದಾಗಿರುತ್ತದೆ. ಗಾಯದ ಅಂಗಾಂಶಕ್ಕೆ ಸೋಂಕು ತಗುಲುವ ಸಾಧ್ಯತೆಗಳು ಕಡಿಮೆ ಇರುತ್ತದೆ ಎಂದರು.

ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಸಾಧಿಸಬೇಕು. ಸಾಮಾನ್ಯ ಜನರಿಗೆ ಶಸ್ತ್ರಚಿಕಿತ್ಸೆಯ ಸರಳ ವಿಧಾನವನ್ನು ಪರಿಚಯಿಸಬೇಕು. ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಸಾಧಿಸುವುದರೊಂದಿಗೆ ನುರಿತ ತಜ್ಞರೆಂಬ ಕೀರ್ತಿಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.

ಲ್ಯಾಪ ರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆಯಲ್ಲಿ ಕೀ-ಹೋಲ್ ಮಾಡುವುದು ಹೇಗೆ, ಶಸ್ತ್ರ ಚಿಕಿತ್ಸೆಯ ಸಾಧನ-ಉಪಕರಣಗಳನ್ನು ಬಳಸುವ ಬಗೆ, ಶಸ್ತ್ರ ಚಿಕಿತ್ಸೆ ಸಮಯದಲ್ಲಿ ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ರೋಗಿಗೆ ನಡೆಸಲಾಗುವ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು ಮಿಮ್ಸ್ ಇಎನ್‌ಟಿ ಸಭಾಂಗಣದಲ್ಲಿ ಕಾರ್ಯಾಗಾರಕ್ಕೆ ಬಂದಿದ್ದ ವಿದ್ಯಾರ್ಥಿಗಳು ವೀಕ್ಷಿಸುವಂತೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಂದಲೇ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಬಗೆಯನ್ನು ತಜ್ಞ ವೈದ್ಯರು ವಿವರಿಸಿದರು.

ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಮಾತನಾಡಿ, ಇದೊಂದು ಸುಲಭವಾಗಿ ಶಸ್ತ್ರ ಚಿಕಿತ್ಸೆ ನಡೆಸಬಹುದಾದ ವಿಧಾನ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಮೂರ್ನಾಲ್ಕು ತಿಂಗಳಿಂದ ಲ್ಯಾಪರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆಯನ್ನು ಮಿಮ್ಸ್‌ನಲ್ಲಿ ನಡೆಸುತ್ತಿದ್ದಾರೆ. ಇಂತಹ ಶಸ್ತ್ರ ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿದರೆ ೮೦ ಸಾವಿರ ರು.ನಿಂದ ೧ ಲಕ್ಷ ರು.ವರೆಗೆ ಖರ್ಚಾಗುತ್ತದೆ. ಈಗ ಅದೇ ಶಸ್ತ್ರ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಿದ್ದು, ಗರ್ಭಕೋಶ, ಅಂಡಾಶಯ ನೀರು ಗಂಟು, ಗಡ್ಡೆ ಬೆಳೆದಿರುವುದು ಹಾಗೂ ಗರ್ಭಕೋಶ ತೊಂದರೆ ಎದುರಿಸುತ್ತಿರುವವರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಬೆಂಗಳೂರು ಬಿಎಂಎಸ್ ಆಸ್ಪತ್ರೆಯ ಡಾ.ರಿಚಾಪಾಲ್, ಬೆಂಗಳೂರಿನ ಆರ್‌ವಿ ಆಸ್ಟರ್ ಆಸ್ಪತ್ರೆಯ ಡಾ.ಸುನಿಲ್ ಈಶ್ವರ್, ಮೈಸೂರು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಡಾ.ಟಿ.ಪ್ರತಾಪ್, ಡಾ.ಶಿವಾನಿ ಚಂದನ್, ಡಾ.ಸ್ಮತಿ ನಾಯಕ್, ಮಿಮ್ಸ್‌ನ ಪ್ರಸೂತಿ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಎಚ್.ಸಿ.ಸವಿತಾ, ಆದಿ ಚುಂಚನಗಿರಿ ಮೆಡಿಕಲ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಮಹೇಂದ್ರ ಇತರರಿದ್ದರು.