Lapses at Kuvempu University: BJP Yuva Morcha expresses outrage

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿ ಗೊಂದಲ, ಪರೀಕ್ಷಾ ವಿಳಂಬ ಹಾಗೂ ಮೌಲ್ಯಮಾಪನ ಲೋಪ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಖಂಡಿಸಿ ನ.30ರಂದು ಬೆಳಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಆಡಳಿತಾತ್ಮಕ ಲೋಪಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದರು.ಎನ್‌ಇಪಿ ಜಾರಿಯಾದ ನಂತರ ಅಂಕಪಟ್ಟಿ ವಿತರಣೆಯಲ್ಲಿ ಗಂಭೀರ ಗೊಂದಲ ಉಂಟಾಗಿದೆ. 2023-24ನೇ ಸಾಲಿನ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್‌ ಅಂಕಪಟ್ಟಿಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಆನ್‌ಲೈನ್‌ನಲ್ಲಿ ಪ್ರಕಟವಾಗುವ ತಾತ್ಕಾಲಿಕ ಅಂಕಪಟ್ಟಿಯಲ್ಲಿ ಉತ್ತೀರ್ಣರೆಂದು ನಮೂದಾಗಿದ್ದರೂ, ಮೂಲ ಅಂಕಪಟ್ಟಿಯಲ್ಲಿ ಅನುತ್ತೀರ್ಣರೆಂದು ನಮೂದಿಸಿರುವ ಪ್ರಕರಣಗಳಿವೆ. ಇದರಿಂದ ಉದ್ಯೋಗ ಪಡೆದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.ಆಂತರಿಕ ಅಂಕಗಳ ದಾಖಲಾತಿಯಲ್ಲಿಯೂ ಗೊಂದಲಗಳಿವೆ. ಕಾಲೇಜು ಮತ್ತು ವಿಶ್ವವಿದ್ಯಾಲಯದ ನಡುವಿನ ಸಮನ್ವಯದ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಎನ್‌ಇಪಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣಪತ್ರ ವಿತರಿಸಿಲ್ಲ. ಹಣ ಪಾವತಿಸಿದ್ದರೂ ಪ್ರಮಾಣಪತ್ರ ನೀಡದಿರುವುದು ಖಂಡನೀಯ ಎಂದರು.ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ರಾಜ್ಯಪಾಲರ ಗಮನ ಸೆಳೆಯುವವರೆಗೂ ಹೋರಾಟ ಮುಂದುವರಿಸಲಾಗುವುದು. ಸಮಸ್ಯೆಗಳನ್ನು ಸಂಗ್ರಹಿಸಲು ಯುವ ಮೋರ್ಚಾ ವತಿಯಿಂದ ಗೂಗಲ್ ಫಾರ್ಮ್ ಸಿದ್ಧಪಡಿಸಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳು ತಮ್ಮ ದೂರು ದಾಖಲಿಸಬಹುದು ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ, ದರ್ಶನ್, ಬಿಜೆಪಿ ಜಿಲ್ಲಾ ಮಾಧ್ಯಮ ಸಹ ಪ್ರಮುಖರಾದ ಎಸ್. ಚಂದ್ರಶೇಖರ್ , ಎನ್.ಮಂಜುನಾಥ್ , ಸಂಜಯ್, ಯಶಸ್ವಿ ಕಡ್ತುರ್, ಪ್ರವೀಣ್, ಯುವರಾಜ್ ಹಾಗೂ ವಿವೇಕ್, ಅಜಯ್ ಉಪಸ್ಥಿತರಿದ್ದರು.

--------------------------

ಬಾಕ್ಸ್ .....

ಶುಲ್ಕ ಪಾವತಿಸಿದರೂ ಪದವಿ ಪತ್ರ ಇಲ್ಲ

ಎನ್‌ಇಪಿ ಜಾರಿಯಾದ 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ಈವರೆಗೆ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣಪತ್ರ ವಿತರಿಸಿಲ್ಲ. ಶುಲ್ಕ ಪಾವತಿಸಿದ್ದರೂ ಪ್ರಮಾಣಪತ್ರ ನೀಡದೆ ವಿದ್ಯಾರ್ಥಿಗಳನ್ನು ಕಾಯಿಸುವಂತಾಗಿದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ಆರೋಪಿಸಿದರು.-------------

ಬಾಕ್ಸ್‌...

ನೇಮಕಾತಿ ಅವಕಾಶಗಳನ್ನೇ ಕಳಕೊಳ್ಳುವ ಸ್ಥಿತಿ

ಇದು ಕೇವಲ ಅಂಕಪಟ್ಟಿಯ ಸಮಸ್ಯೆಯಲ್ಲ. ಇದು ಉದ್ಯೋಗದ ಸಮಸ್ಯೆ. ಒಬ್ಬ ವಿದ್ಯಾರ್ಥಿ ಒಂದು ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುತ್ತಾನೆ. Provisional Marks Card ಸಲ್ಲಿಸಿ ಉದ್ಯೋಗಕ್ಕೆ ಸೇರುತ್ತಾನೆ. ನಂತರ Physical Marks Cardನಲ್ಲಿ ಬೇರೆ ಅಂಕಗಳು ಅಥವಾ FAIL ಎಂದು ಬಂದರೆ, ನೇಮಕಾತಿ ಸಂಸ್ಥೆ ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಆತನ ನೇಮಕಾತಿಯನ್ನು ಪ್ರಶ್ನಿಸಬಹುದು ಅಥವಾ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ವಿಶ್ವವಿದ್ಯಾಲಯದ ತಪ್ಪಿನಿಂದ ವಿದ್ಯಾರ್ಥಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಬಂದರೆ, ಆ ವಿದ್ಯಾರ್ಥಿಯ ಕುಟುಂಬದ ನಷ್ಟಕ್ಕೆ ಯಾರು ಹೊಣೆ ಈ ಪ್ರಶ್ನೆಗೆ ವಿಶ್ವವಿದ್ಯಾಲಯ ಉತ್ತರಿಸಬೇಕು ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ ಆರೋಪಿಸಿದರು.

--------------

ಪೊಟೋ: 20ಎಸ್‌ಎಂಜಿಕೆಪಿ01

ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ಮಾತನಾಡಿದರು.