ಸಾರಾಂಶ
-ಫಲಾನುಭವಿಗಳಿಗೆ ತ್ರಿಚಕ್ರವಾಹನ, ಬ್ರೈಲ್ ಕಿಟ್, ಹೊಲಿಗೆ ಯಂತ್ರ, ಲ್ಯಾಪ್‌ಟಾಪ್ ವಿತರಣೆ
-------ಕನ್ನಡಪ್ರಭವಾರ್ತೆ ಚಳ್ಳಕೆರೆ
ವಿಕಲಚೇತನರಿಗೆ ಸರ್ಕಾರ ಸೌಲಭ್ಯಗಳ ಜೊತೆಯಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.ಅವರು, ನಗರದ ಶಾಸಕರ ಭವನದಲ್ಲಿ ಜಿಲ್ಲಾ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ತಾ. ಅಂಗವಿಕಲ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯ್ದ ಫಲಾನುಭವಿಗಳಿಗೆ ತ್ರಿಚಕ್ರವಾಹನ, ಬ್ರೈಲ್ ಕಿಟ್ ಹಾಗೂ ಹೊಲಿಗೆ ಯಂತ್ರ, ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರ ಅಂಗವಿಕಲರ ಬದುಕಿಗೆ ಆಸರೆಯಾಗುವಲ್ಲಿ ಅನೇಕ ನೂತನ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ. ವಿಶೇಷವಾಗಿ ವಿಕಲ ಚೇತನರನ್ನು ವಿಶ್ವಾಸದಿಂದ ಕಾಣುವಂತೆ ಎಲ್ಲರಿಗೂ ಮನವಿ ಮಾಡಲಾಗಿದೆ. ಅಂಗವಿಕಲತೆ ಶಾಪವಲ್ಲ ಎಂಬುವುದನ್ನು ಮನದಟ್ಟು ಮಾಡಿಕೊಡುವಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ತಾ.ವಿಕಲಾಂಗ ಚೇತನರ ಇಲಾಖೆಯ ಅಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಪ್ರತಿವರ್ಷ ಇಲಾಖೆಯಿಂದ ಆಯ್ದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾಡಲಾಗುತ್ತಿದೆ. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ವಿಕಲಚೇತನರಿಗೆ ನೆರವು ನೀಡುವಲ್ಲಿ ನಿರಂತರ ಒತ್ತಡ ಹೇರಿ, ಆಯ್ದ ಫಲಾನುಭವಿಗಳಿಗೆ ಸವಲತ್ತು ದೊರೆಯುವಲ್ಲಿ ಯಶಸ್ವಿಯಾಗಿದ್ಧಾರೆ. ಮುಂದಿನ ದಿನಗಳಲ್ಲೂ ಈ ವ್ಯವಸ್ಥೆ ಮುಂದುವರೆಯಲಿದೆ. ಇಂದು ತಾಲೂಕಿನ ೩೭ ಫಲಾನುಭವಿಗಳಿಗೆ ಯಂತ್ರಚಾಲಿತ ತ್ರಿಚಕ್ರವಾಹನ, ನಾಲ್ವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಇಬ್ಬರು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಗಿದೆ ಎಂದರು.ಇಒ ಶಶಿಧರ, ಸಿಡಿಪಿಒ ಹರಿಪ್ರಸಾದ್, ನಗರಸಭಾ ಸದಸ್ಯರಾದ ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಸುಜಾತ, ನಾಮಿನಿ ಸದಸ್ಯರಾದ ಬಡಗಿ ಪಾಪಣ್ಣ, ವೀರಭದ್ರಿ, ಸೈಯದ್ ಅನ್ವರ್‌ಮಾಸ್ಟರ್ ಉಪಸ್ಥಿತರಿದ್ದರು.
------ಪೋಟೋ: ೧೨ಸಿಎಲ್‌ಕೆ೨
ಚಳ್ಳಕೆರೆ ನಗರದ ಶಾಸಕರ ಭವನದ ಆವರಣದಲ್ಲಿ ಜಿಲ್ಲಾ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ತಾಲೂಕು ಅಂಗವಿಕಲ ಕಲ್ಯಾಣ ಇಲಾಖೆಯಿಂದ ಶಾಸಕ ಟಿ.ರಘುಮೂರ್ತಿ ತ್ರಿಚಕ್ರವಾಹನ ವಿತರಿಸಿದರು.