ಮಳೆ ಬೆನ್ನಲ್ಲೇ ಬಿತ್ತನೆ ಬೀಜಕ್ಕೆ ಮುಗಿಬಿದ್ದ ಹಾವೇರಿ ರೈತರು

| Published : May 22 2024, 01:19 AM IST

ಸಾರಾಂಶ

ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಗೆ ಉದ್ದದ ಕ್ಯೂ ಕಂಡುಬರುತ್ತಿದ್ದು, ಬರಗಾಲದಿಂದ ಕಂಗೆಟ್ಟಿದ್ದ ರೈತರಿಂದ ಬಿತ್ತನೆಗೆ ಸಿದ್ಧತೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದು, ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಈ ನಡುವೆ, ಹಾವೇರಿಯಲ್ಲಿ ಮಂಗಳವಾರ ಬಿತ್ತನೆ ಬೀಜಕ್ಕಾಗಿ ರೈತರು ಮುಗಿಬಿದ್ದಿದ್ದಾರೆ.

ಕಳೆದ ವರ್ಷ ಹಾವೇರಿ ಜಿಲ್ಲೆಯ ರೈತರು ಮಳೆ ಇಲ್ಲದೆ ಬರಗಾಲದಿಂದ ಕಂಗೆಟ್ಟು ಹೋಗಿದ್ದರು. ಆದರೆ, ಈ ಬಾರಿ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಬಿತ್ತನೆ ಬೀಜಕ್ಕಾಗಿ ರೈತರು ಕ್ಯೂನಲ್ಲಿ ನಿಂತು ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ಮಂಗಳವಾರ ಮುಗಿಬಿದ್ದರು. ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸೋಯಾಬೀನ್, ಶೇಂಗಾ, ಹೆಸರು ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ.

ಈ ಮಧ್ಯೆ, ಉದ್ದನೆಯ ಕ್ಯೂನಲ್ಲಿ ನಿಂತು ಬೇಸತ್ತ ರೈತರು, ಹೆಚ್ಚಿನ ಕೌಂಟರ್ ಓಪನ್ ಮಾಡಿ ಬೀಜ ವಿತರಣೆ ಮಾಡಲು ಆಗ್ರಹಿಸುತ್ತಿದ್ದಾರೆ.

ಬಿತ್ತನೆಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಸಿಎಂಬೆಂಗಳೂರು: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೀಜ ಮತ್ತು ಗೊಬ್ಬರಕ್ಕಾಗಿ ಹಾವೇರಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಈ ಸೂಚನೆ ನೀಡಿದ್ದಾರೆ.