ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸೆಪ್ಟೆಂಬರ್ ಕೊನೆಯ ವಾರ ತಾಳಿಕೋಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ತಾಲೂಕಿನಲ್ಲಿರುವ ಸಾಹಿತಿಗಳಿಗೆ ಪ್ರಾಧ್ಯಾನತೆ ನೀಡೋಣ. ಶಾಸಕರ ನೇತೃತ್ವದಲ್ಲಿ ಸಮ್ಮೇಳನವನ್ನು ವೈಭವದಿಂದ ಆಚರಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ಸಾಹಿತಿಗಳ, ಕನ್ನಡಪರ ಸಂಘಟನೆಗಳ ಹಾಗೂ ಪಟ್ಟಣದ ಮುಖಂಡರುಗಳ ಸಭೆಯಲ್ಲಿ ಮಾತನಾಡಿದ ಅವರು, ತಾಳಿಕೋಟೆ ಐತಿಹಾಸಿಕ ಪ್ರಸಿದ್ಧತೆ ಪಡೆದ ಪಟ್ಟಣವಾಗಿದೆ. ಈ ಪಟ್ಟಣಗಳಲ್ಲಿ ಹಳೆಗನ್ನಡದ ರೂಪಕವಾದ ಅನೇಕ ಕೆತ್ತನೆಗಳು ಕೂಡಾ ಇವೆ. ಇಂತಹ ಪರಂಪರೆ ಹೊಂದಿರುವ ತಾಳಿಕೋಟೆ ಪಟ್ಟಣದಲ್ಲಿ ಕನ್ನಡಮ್ಮನ ಜಾತ್ರೆ ಅದ್ಧೂರಿಯಾಗಿ ನಡೆಯಬೇಕಿದೆ. ಈಗಿನಿಂದಲೇ ಎಲ್ಲ ರೀತಿಯ ತಯಾರಿಗಳನ್ನು ಕೈಗೊಳ್ಳಲು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ಕನ್ನಡ ಮನಸ್ಸುಗಳು ಮುಂದಾಗಬೇಕು ಎಂದು ತಿಳಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಮಾತನಾಡಿ, ನಾಡು -ನುಡಿ, ನೆಲ, ಜಲ, ಸಂಸ್ಕೃತಿ - ಪರಂಪರೆ ಪ್ರತಿಕವಾಗುವಂತೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ಸಖಲ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕನ್ನಡ ಭಾಷೆಗೆ ಯಾವುದೇ ಜಾತಿ ಎಂಬುವುದಿಲ್ಲ. ಎಲ್ಲರ ಹೃದಯ ಮನಸ್ಸು ಕನ್ನಡಮಯವಾಗಿ ಇದಕ್ಕೆ ಸಾಕ್ಷೀಕರಿಸುವಂತೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸುವುದಾಗಿ ಭರವಸೆ ನೀಡಿದ್ದು, ಎಲ್ಲರೂ ಸಮ್ಮೇಳನ ನಡೆಸಬೇಕೆಂದು ಹಾತೋರೆಯುತ್ತಿದ್ದಾರೆ ಎಂದು ತಿಳಿಸಿದರು.ಈ ಸಮಯದಲ್ಲಿ ಎಸ್.ಎಸ್.ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ. ಬಿ.ಆರ್.ಪೊಲೀಸ್ ಪಾಟೀಲ, ರಾಜು ಹಂಚಾಟೆ, ಪಿ.ಬಿ.ಬಂಟನೂರ, ಎಂ.ಎ.ಬಾಗೇವಾಡಿ, ಜೈಭೀಮ ಮುತ್ತಗಿ, ಶಿವಾನಂದ ಮಂಗಾನವರ, ಡಾ.ನಜೀರ್ ಕೋಳ್ಯಾಳ, ಗಂಗಾಧರ ಕಸ್ತೂರಿ, ಎಂ.ಎಸ್.ರಾಯಗೊಂಡ, ಪಾರೂಕ್ ಘಟ್ನೂರ, ಶಿವಲೀಲಾ ಮುರಾಳ, ಜಗದೀಶ ಬೀಳೆಬಾವಿ, ಆರ್.ಬಿ.ದಾನಿ, ಚನ್ನಬಸಪ್ಪ ಕಟ್ಟಿಮನಿ, ಸಿದ್ದಾರ್ಥ ಕಟ್ಟಿಮನಿ, ಮಹಾಂತೇಶ ಮುರಾಳ, ಬಾಬು ಬಡಗಣ, ಸಿದ್ದು ಶಿರಶಿ, ಸಂತೋಷ ಜಾಮಗೊಂಡಿ, ಭಾಗ್ಯಶ್ರೀ ಒಳಗೊಂಡು ನೂರಾರು ಜನರು ಸಭೆಯಲ್ಲಿ ಉಪಸ್ಥಿತರಿದ್ದರು.