ಚೆಲುವನಾರಾಯಣಸ್ವಾಮಿಗೆ ತಡರಾತ್ರಿ ಅಶ್ವವಾಹನೋತ್ಸವ

| Published : Jan 17 2025, 12:46 AM IST

ಸಾರಾಂಶ

ದೇವಿಯರೊಂದಿಗೆ ಮುನಿಸಿಕೊಂಡು ಹೊರಟ ಚೆಲುವರಾಯನಿಗೆ ಮೂರು ಮೊಲ ಅಡ್ಡಬಂದಾಗ ಸ್ವಾಮಿ ಮರಳಿ ದೇವಾಲಯಕ್ಕೆ ಹಿಂದಿರುಗಿದರು ಎಂಬ ಪ್ರತೀತಿ, ಅಂಗಮಣಿಯ ಉತ್ಸವದಲ್ಲಿ ಪ್ರಮುಖ ಘಟ್ಟವಾಗಿದೆ. ಕುದುರೆ ವಾಹನದೊಂದಿಗೆ ಸಾಗಿದ ಸಹಸ್ರಾರು ಭಕ್ತರು ಮೊಲ ಅಡ್ಡಬಂದ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ತವರು ಮನೆಗೆ ಹೋಗಿ ತಡವಾಗಿ ದೇವಾಲಯಕ್ಕೆ ಬಂದ ಶ್ರೀದೇವಿ- ಭೂದೇವಿಯರೊಂದಿಗೆ ಮುನಿಸಿಕೊಂಡ ಚೆಲುವನಾರಾಯಣಸ್ವಾಮಿ ಅಶ್ವವಾಹನೋತ್ಸವದಲ್ಲಿ ಸಾಗುವ ವಿಶೇಷ ಕ್ಷಣಗಳನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ತಡರಾತ್ರಿ 12 ಗಂಟೆಗೆ ನಡೆದ ಈ ವೈಶಿಷ್ಟ್ಯಪೂರ್ಣ ಕ್ಷಣಗಳಿಗಾಗಿ ಕಾದು ಕುಳಿತಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ವಿಶೇಷ ನಡಿಗೆಯೊಂದಿಗೆ ಬಂದ ಸ್ವಾಮಿ ಉತ್ಸವ ಹಾಗೂ ಮಂಗಳವಾದ್ಯದೊಂದಿಗೆ ಸಾಗಿದ ಅಶ್ವವಾಹನೋತ್ಸವದ ದರ್ಶನ ಪಡೆದು ಅಶ್ವವಾಹನೋತ್ಸವನ್ನು ಹಿಂಬಾಲಿಸಿ ಮೊಲ ಅಡ್ಡಬಿಡುವ ಕ್ಷಣಗಳಿಗೂ ಸಾಕ್ಷಿಯಾದರು.

ದೇವಿಯರೊಂದಿಗೆ ಮುನಿಸಿಕೊಂಡು ಹೊರಟ ಚೆಲುವರಾಯನಿಗೆ ಮೂರು ಮೊಲ ಅಡ್ಡಬಂದಾಗ ಸ್ವಾಮಿ ಮರಳಿ ದೇವಾಲಯಕ್ಕೆ ಹಿಂದಿರುಗಿದರು ಎಂಬ ಪ್ರತೀತಿ, ಅಂಗಮಣಿಯ ಉತ್ಸವದಲ್ಲಿ ಪ್ರಮುಖ ಘಟ್ಟವಾಗಿದೆ. ಕುದುರೆ ವಾಹನದೊಂದಿಗೆ ಸಾಗಿದ ಸಹಸ್ರಾರು ಭಕ್ತರು ಮೊಲ ಅಡ್ಡಬಂದ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.

ದೀಪಾಲಂಕಾರಕ್ಕಾಗಿ ಭಕ್ತರ ಒತ್ತಾಯ:

ಪ್ರಖ್ಯಾತ ಅಂಗಮಣಿ ಮತ್ತು ಸಂಕ್ರಾಂತಿ ಉತ್ಸವಗಳ ವೇಳೆಯಲ್ಲಾದರೂ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗೆ ದೇವಾಲಯದ ವತಿಯಿಂದ ಸರಳ ದೀಪಾಲಂಕಾರ ಮಾಡಿದ್ದರೆ ಉತ್ಸವದ ಮೆರಗು ಹೆಚ್ಚುತ್ತಿತ್ತು ಎಂದು ಭಕ್ತರಾದ ಮೈಸೂರಿನ ಕುಮಾರ್ ಅಭಿಲಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೀಪಾಲಂಕಾರ ಮಾಡದೇ ಉಡಾಪೆ ಉತ್ತರ ನೀಡುತ್ತಾರೆ. ಚೆಲುವನಾರಾಯಣಸ್ವಾಮಿಯ ಉತ್ಸವ ಆಕರ್ಷಕವಾಗಿ ನಡೆಯಲಿ ಎಂದೇ ಭಕ್ತರು ಕಾಣಿಕೆ ಹಾಕುತ್ತಾರೆ. ಭಕ್ತರ ಕಾಣಿಕೆಯನ್ನು ಉತ್ಸವಕ್ಕೆ ಆಕರ್ಷಕ ವ್ಯವಸ್ಥೆ ಮಾಡಲು ಸ್ವಲ್ಪ ಭಾಗವಾದರೂ ಬಳಕೆ ಮಾಡಬೇಕು. ಮುಂಬರುವ ವಿಶೇಷ ಉತ್ಸವಕ್ಕಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉತ್ತಮ ವ್ಯವಸ್ಥೆಮಾಡಲಿ ಎಂದು ಆಗ್ರಹಿಸಿದ್ದಾರೆ.